ADVERTISEMENT

ಬಿತ್ತನೆಗೆ ಅವಕಾಶ ನೀಡದಿದ್ದರೆ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 9:24 IST
Last Updated 17 ನವೆಂಬರ್ 2017, 9:24 IST

ಯಳಂದೂರು: ತಾಲ್ಲೂಕಿನ ಬಿಳಿಗಿರಿ ರಂಗನಬೆಟ್ಟದ ಅರಣ್ಯ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡಿರುವ ಆಮೆಕರೆ ಕೃಷಿ ಭೂಮಿಯಲ್ಲಿ ವಾರದೊಳಗೆ ಬಿತ್ತನೆಗೆ ಅವಕಾಶ ನೀಡದಿದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತರು ಎಚ್ಚರಿಕೆ ನೀಡಿದರು.

ಯಳಂದೂರು ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಗುರುವಾರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

‘ಸರ್ಕಾರ 100 ಜನರಿಗೆ ಮಂಜೂರು ಮಾಡಿದ್ದ 306 ಎಕರೆ ಕೃಷಿ ಭೂಮಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಇಲ್ಲಿ ಕೃಷಿ ಚಟುವಟಿಕೆಗಳಿಗೆ ಅವಕಾಶ ನೀಡು ತ್ತಿಲ್ಲ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್.ಎಸ್. ಮಹದೇವ ಪ್ರಸಾದ್ ಸಂಬಂಧಪಟ್ಟ ಉನ್ನತ ಅಧಿಕಾರಿಗಳ ಸಭೆ ನಡೆಸಿ ಭೂಮಿಗೆ ಪರಿಹಾರ ನೀಡುವ ಭರವಸೆ ನೀಡಿ ದ್ದರು. 2 ವರ್ಷ ಕಳೆದರೂ ಇನ್ನೂ ಕ್ರಮ ವಹಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಈಗ ಘೋಷಿಸಿರುವ ಪರಿಹಾರದ ಮೂರು ಪಟ್ಟು ಹೆಚ್ಚುವರಿ ಹಣ ನೀಡಬೇಕು. ಬೇರೆ ಕಡೆ ಜಮೀನು ನೀಡಬೇಕು. ಕುಟುಂಬದ ಸದಸ್ಯರಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ನೀಡಬೇಕು ಇಲ್ಲವೆ ವ್ಯವಸಾಯ ಮಾಡಲು ಅವಕಾಶ ನೀಡಬೇಕು’ ಎಂದು ಪಟ್ಟು ಹಿಡಿದರು. ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಮಹಾದೇವಯ್ಯ ಮಾತ ನಾಡಿ, ದಾಖಲೆಗಳಿದ್ದರೆ ವ್ಯವಸಾಯ ಮಾಡಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

16 ತಿಂಗಳಾದರೂ ಬಣ್ಣಾರಿ ಅಮ್ಮನ್ ಕಾರ್ಖಾನೆಯಿಂದ ಕಬ್ಬು ಕಟಾವು ಮಾಡುತ್ತಿಲ್ಲ. ಇದರಿಂದ ಬ್ಯಾಂಕಿನಿಂದ ಕೃಷಿ ಸಾಲ ಪಡೆಯುವವರಿಗೆ ಅನನುಕೂಲವಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕಾರ್ಖಾನೆಯ ಮಹಾದೇವಸ್ವಾಮಿ ಮಾತನಾಡಿ, ಸತತ ಮಳೆಯಿಂದ ಕಬ್ಬು ಕಟಾವು ವಿಳಂಬವಾಗಿದೆ. ಬೇಗ ಸಮಸ್ಯೆ ನಿವಾರಿಸಲಾಗುವುದು ಎಂದರು.

ಕೃಷಿ ಇಲಾಖೆಯೂ ವಿಮೆ ಹಣ ಪಾವತಿಸಿಲ್ಲ. ಸರ್ವೆ ಇಲಾಖೆಯಲ್ಲಿ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಇಲ್ಲಿನ ಸಿಬ್ಬಂದಿ ಅರ್ಜಿ ಸಲ್ಲಿಸಿ ತಿಂಗಳಾದರೂ ಸರ್ವೆ ಮಾಡುತ್ತಿಲ್ಲ. ಇದರ ಬಗ್ಗೆ ತಹಶೀಲ್ದಾರ್ ಸೂಕ್ತ ಕ್ರಮ ವಹಿಸಬೇಕು. ಸೆಸ್ಕ್‌ನಿಂದ ವಿದ್ಯುತ್ ಪರಿವರ್ತಕಗಳನ್ನು ಬದಲಿಸಬೇಕು. ಇಳಿ ಬಿದ್ದಿರುವ ವಿದ್ಯುತ್ ತಂತಿ ತೆಗೆದು ಹೊಸದಾಗಿ ತಂತಿ ಹಾಕಬೇಕು. ಶಾರ್ಟ್‌ ಸರ್ಕಿಟ್‌ನಿಂದ ಉಂಟಾದ ಬೆಂಕಿ ಅವಘಡಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಉಪ ತಹಶೀಲ್ದಾರ್ ವೈ.ಎಂ. ನಂಜಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಹೊನ್ನೂರು ಬಸವಣ್ಣ, ಸಿದ್ದಲಿಂಗಸ್ವಾಮಿ, ಅಗ್ರಹಾರ ನಾಗರಾಜು, ಜಾನ್‌ಪೀಟರ್‌, ಶಿವಪ್ರಸಾದ್, ಅಂಬಳೆ ಶಿವಕುಮಾರ್, ವೃಷಭೇಂದ್ರ, ರಂಗಸ್ವಾಮಿ, ಸೋಮಣ್ಣ, ಪುಟ್ಟಮಾದಪ್ಪ, ಸುಬ್ಬಣ್ಣ, ಮಹೇಶ್, ವೆಂಕಟರಾಮು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.