ADVERTISEMENT

ಭೀಮಾ ಜಲಾಶಯ: ನನಸಾಗಲಿದೆ ರೈತರ ಕನಸು

26 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, 20ರಂದು ಸಿ.ಎಂ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 7:43 IST
Last Updated 17 ಏಪ್ರಿಲ್ 2017, 7:43 IST
ಹಲಗೂರು (ಮಳವಳ್ಳಿ): ಕೆರೆಯ ನೀರನ್ನೇ ನಂಬಿದ ಹಲವಾರು ಗ್ರಾಮಗಳ ರೈತರ ಕನಸು ಈಗ ನನಸಾಗುವ ಕಾಲ ಸನ್ನಿಹಿತವಾಗಿದೆ. ₹ 10.15 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡ ಸುಮಾರು 26 ಕೆರೆಗಳಿಗೆ ನೀರು ತುಂಬಿಸುವ ‘ಭೀಮಾಜಲಾಶಯ ಯೋಜನೆ’ಯನ್ನು ಏ. 20ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.
 
ತಾಲ್ಲೂಕಿನ ಹಲಗೂರು ವ್ಯಾಪ್ತಿಯು ನೀರಾವರಿ ವಂಚಿತ ಪ್ರದೇಶವಾಗಿದ್ದು, ಹೆಚ್ಚಿನ ಮಳೆಯಾಶ್ರಿತ ಹಾಗೂ ಬೋರ್‌ವೆಲ್ ನೀರಿನ ಮೂಲಕ ಕೃಷಿ ಚಟುವಟಿಕೆ ನಡೆಯುತ್ತಿದೆ. ಈ ಯೋಜನೆ ಮೂಲಕ ನಂಜಾಪುರ ಬಳಿ ಶಿಂಷಾ ನದಿಯಿಂದ ಪಂಪ್‌ ಮೂಲಕ ನೀರು ಎತ್ತಿ 26 ಕೆರೆಗಳಿಗೆ ನೀರು ತುಂಬಿಸಬಹುದಾಗಿದೆ.
 
ಈ ಯೋಜನೆ ಹಳೆಯದಾದರೂ ಶಾಸಕ ನರೇಂದ್ರಸ್ವಾಮಿ ಇಚ್ಛಾಶಕ್ತಿ ಯಿಂದ ಜಗದೀಶ್‌ ಶೆಟ್ಟರ್ ಮುಖ್ಯಮಂತ್ರಿಗಳಾಗಿದ್ದಾಗ ಅನುಮೋದನೆ ಪಡೆಯಿತು. ನಂತರ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆ 2014ರ ಸೆ. 26ರಂದು ಯೋಜನೆ ಕಾಮಗಾರಿಗೆ  ಚಾಲನೆ ನೀಡಿದ್ದರು.
 
ಯೋಜನೆ ಮೂಲಕ ಭೀಮಾ ಜಲಾಶಯ, ನಂದಿಪುರ ಕೆರೆ, ಚನ್ನನಾಯಕನ ಕೆರೆ, ಭಂಗಿಸಿದ್ದನಕಟ್ಟೆ, ಯಕ್ಕಲಕಟ್ಟೆ,ಮೊಗೆಯುವ ಕಟ್ಟೆ, ಮುದ್ದೇಗೌಡನಕೆರೆ, ಊರಮುಂದಿನ ಕೆರೆ, ಸಿದ್ದನಕಟ್ಟೆ, ಸಂಕ್ರಾಂತಿಕಟ್ಟೆ, ದೊಡ್ಡಕೆರೆ, ಕಾಳಮ್ಮನಕೆರೆ, ಹೊಸಕೆರೆ, ಮುದ್ದೇಗೌಡನಕಟ್ಟೆ, ಕುಂದೂರುದೊಡ್ಡಿ ಕೆರೆಗಳಿಗೆ ನೀರು ತುಂಬಿಸಲು ಉದ್ದೇಶಿಲಾಗಿದೆ.
 
ಸಣ್ಣ ನೀರಾವರಿ ಇಲಾಖೆಯ ಈ ಯೋಜನೆ ಮೂಲಕ ಮುಂಗಾರು ಹಂಗಾಮಿನಲ್ಲಿ 123 ದಿವಸಗಳು ನೀರು ಹರಿಸಬಹುದಾಗಿದ್ದು, 523 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವು ಇದೆ. ಪ್ರಸ್ತುತ ನೀರಿಗಾಗಿ 600 ರಿಂದ 800 ಅಡಿ ಬೋರ್‌ವೆಲ್‌ ಕೊರೆಸಲಾಗುತ್ತಿದೆ. ಈ ಯೋಜನೆಯ ಮೂಲಕ ಕೆರೆಕಟ್ಟೆಗಳು ತುಂಬಿ ಅಂತರ್ಜಲ ವೃದ್ಧಿಯಾಗಲಿದೆ ಎಂಬುದು ಈ ವ್ಯಾಪ್ತಿಯ ಸಾರ್ವಜನಿಕರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.