ADVERTISEMENT

ಮದ್ಯದಂಗಡಿಗಳಿಗೆ ಬಂದ ಶುಕ್ರದೆಸೆ!

2 ದಿನಗಳ ಬಿಡುವಿನ ನಂತರ ಸಾಲುಗಟ್ಟಿ ನಿಂತ ಮದ್ಯವ್ಯಸನಿಗಳು

​ಪ್ರಜಾವಾಣಿ ವಾರ್ತೆ
Published 14 ಮೇ 2018, 12:02 IST
Last Updated 14 ಮೇ 2018, 12:02 IST
ಹನೂರು ಪಟ್ಟಣದ ಸರ್ಕಾರಿ ಸ್ವಾಮ್ಯದ ಎಂಎಸ್‍ಐಎಲ್ ಮದ್ಯದಂಗಡಿ ಮುಂಭಾಗ ಭಾನುವಾರ ಬೆಳಿಗ್ಗೆ ಮದ್ಯ ಖರೀದಿಗೆ ಮುಗಿಬಿದ್ದಿರುವ ಜನರು
ಹನೂರು ಪಟ್ಟಣದ ಸರ್ಕಾರಿ ಸ್ವಾಮ್ಯದ ಎಂಎಸ್‍ಐಎಲ್ ಮದ್ಯದಂಗಡಿ ಮುಂಭಾಗ ಭಾನುವಾರ ಬೆಳಿಗ್ಗೆ ಮದ್ಯ ಖರೀದಿಗೆ ಮುಗಿಬಿದ್ದಿರುವ ಜನರು   

ಹನೂರು (ಚಾಮರಾಜನಗರ): ಎರಡು ದಿನಗಳಿಂದ ಮದ್ಯ ಸೇವಿಸದೇ ಚಡಪಡಿಸುತ್ತಿದ್ದ ಮದ್ಯಪ್ರಿಯರು ಭಾನುವಾರ ಬೆಳಿಗ್ಗೆ ಎಂಟು ಗಂಟೆಯಿಂದಲೇ ಮದ್ಯದಂಗಡಿ ಮುಂದೆ ಸಾಲುಗಟ್ಟಿ ನಿಂತಿದ್ದರು.

2018ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 48 ಗಂಟೆಗಳ ಕಾಲ ಯಾವುದೇ ಮದ್ಯದಂಗಡಿ ತೆರೆಯದಂತೆ ಚುನಾವಣಾ ಆಯೋಗ ಕಟ್ಟಾಜ್ಞೆ ಹೊರಡಿಸಿದ್ದರಿಂದ ಕಳೆದ ಎರಡು ದಿನಗಳಿಂದ ಹನೂರು ವಿಧಾನಸಭಾ ಕ್ಷೇತ್ರದ 21 ಮದ್ಯದಂಗಡಿಗಳು ಮುಚ್ಚಿದ್ದವು. ಶನಿವಾರ ಚುನಾವಣೆ ಮುಗಿಯುತ್ತಿದ್ದಂತೆ ಭಾನುವಾರ ಬೆಳಿಗ್ಗೆ 8 ಗಂಟೆಯಿಂದಲೇ ಮದ್ಯದಂಗಡಿಗಳಿಗೆ ದಾಂಗುಡಿಯಿಟ್ಟ ಮದ್ಯಪ್ರಿಯರು ಮದ್ಯದಂಗಡಿಗಳಿಗೆ ಮುಗಿಬಿದ್ದಿದ್ದರು.

‘ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಬಳಿಕ ಅಂಗಡಿಗೆ ಎಂದಿನಂತೆ ಸರಬರಾಜಾಗುತ್ತಿದ್ದ ಮದ್ಯದಲ್ಲಿ ಶೇ 50ರಷ್ಟನ್ನು ಮಾತ್ರ ಸರಬರಾಜು ಮಾಡಲಾಗುತ್ತಿತ್ತು. ಪ್ರತಿದಿನ ಸರಬರಾಜಾಗುತ್ತಿದ್ದ ಮದ್ಯ ಅಂದಿನ ದಿನವೇ ಖಾಲಿಯಾಗು ತ್ತಿತ್ತು. ಹೆಚ್ಚುವರಿ ದಾಸ್ತಾನಿಗೆ ಅವಕಾಶವಿಲ್ಲದ ಕಾರಣ ಮದ್ಯದ ಅಭಾವ ಎದುರಾಯಿತು.

ADVERTISEMENT

ಏತನ್ಮಧ್ಯೆ, ಅಬಕಾರಿ ಅಧಿಕಾರಿಗಳು ಹಾಗೂ ಪೊಲೀಸರು ಅಕ್ರಮ ಮದ್ಯಮಾರಾಟಗಾರರ ಮೇಲೆ ಹದ್ದಿನ ಕಣ್ಣಿಟ್ಟು ಕಾನೂನು ಉಲ್ಲಂಘಿಸುವವರನ್ನು ಬಂಧಿಸಿದ ಪರಿಣಾಮ ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ತಡೆ ಬಿದ್ದಿತ್ತು. ಇವೆಲ್ಲದರಿಂದ ಎರಡು ದಿನಗಳಿಂದ ಮದ್ಯವಿಲ್ಲದೇ ಕಂಗಾಲಾಗಿದ್ದ ಮದ್ಯಪ್ರಿಯರು ಭಾನುವಾರ ಅಂಗಡಿ ತೆರೆಯುವುದಕ್ಕೂ ಮುಂಚೆಯೇ ಇಲ್ಲಿ ಜಮಾಯಿಸಿ ಮದ್ಯ ಖರೀದಿಸಿದರು’ ಎಂದು ಹೆಸರು ಹೇಳಲಿಚ್ಛಿಸದ ಅಂಗಡಿ ಮಾಲೀಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಳಿಗ್ಗೆ 8 ಗಂಟೆಗೆ ಬಂದು ಕಾದು ಬಸವಳಿದರೂ ನಮಗೆ ಬೇಕಾದ ಬ್ರಾಂಡ್‍ ಸಿಗಲಿಲ್ಲ. ಇಲ್ಲಿ ಸಿಗುವ ಮದ್ಯವನ್ನೇ ಗ್ರಾಮದಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಎರಡು ದಿನಗಳಿಂದ ಮದ್ಯದಂಗಡಿ ತೆರೆಯದ ಕಾರಣ ಶನಿವಾರ ರಾತ್ರಿ ₹ 35ರ 90 ಎಂ.ಎಲ್ ಮದ್ಯಕ್ಕೆ ₹ 120 ಕೊಟ್ಟು ಖರೀದಿಸಿದ್ದೇನೆ’ ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ತಮ್ಮ ಅಳಲು ತೋಡಿಕೊಂಡರು. ಚುನಾವಣೆ ಹಿನ್ನೆಲೆ ಎರಡು ದಿನಗಳಿಂದ ಮದ್ಯವಿಲ್ಲದೇ ಪರದಾಡಿದ್ದ ಮದ್ಯಪ್ರಿಯರಿಗೆ ಸೋಮವಾರವೂ ಮದ್ಯದಂಗಡಿ ಬಂದ್ ಆಗುವ ವಿಷಯ ತಿಳಿದ ಬಳಿಕ ಹೆಚ್ಚು ಹೆಚ್ಚು ಮದ್ಯ ಖರೀದಿಗೆ ಮುಂದಾಗಿದ್ದಾರೆ.

ರಾಜ್ಯಾದ್ಯಂತ ಸೋಮವಾರ ಮತ ಎಣಿಕೆ ಇರುವುದರಿಂದ ಆ ದಿನವೂ 24 ಗಂಟೆಗಳ ಯಾವುದೇ ಮದ್ಯದಂಗಡಿ ತೆರೆಯದಂತೆ ಆಯೋಗ ಸೂಚಿಸಿದೆ. ಅಂದಿನ ಮದ್ಯ ಖರೀದಿಗೆ ಇಂದೇ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸುತ್ತಿದ್ದಾರೆ.

–ಬಿ.ಬಸವರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.