ADVERTISEMENT

ಮದ್ಯದಂಗಡಿ ತೆರೆಯಲು ಅನುಮತಿ ಬೇಡ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 10:40 IST
Last Updated 7 ಜುಲೈ 2017, 10:40 IST

ಚಾಮರಾಜನಗರ: ನಗರದ ಚೆನ್ನೀಪುರ ಮೋಳೆಯಿಂದ ರಾಮಸಮುದ್ರ ಸಂಪರ್ಕಿಸುವ ರಸ್ತೆಯಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ ನಗರದಲ್ಲಿ ಗುರುವಾರ ಚೆನ್ನೀಪುರಮೋಳೆ, ಜಾಲಹಳ್ಳಿಹುಂಡಿ ಹಾಗೂ ಭಗೀರಥ ನಗರ ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಚೆನ್ನೀಪುರಮೋಳೆಯಿಂದ ಆರಂಭ
ವಾದ ಪ್ರತಿಭಟನಾ ಮೆರವಣಿಗೆಯಲ್ಲಿ ಇನ್ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಮೂರು ಗ್ರಾಮಗಳ ಮಹಿಳೆಯರು, ಯುವಕರು, ಮುಖಂಡರು ಹಾಗೂ ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸಂತೇಮರಹಳ್ಳಿ ವೃತ್ತ, ಡಿವಿಯೇಷನ್‌ ರಸ್ತೆ, ಭುವನೇಶ್ವರಿ ವೃತ್ತ ಹಾಗೂ ಬಿ. ರಾಚಯ್ಯ ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನಕ್ಕೆ ಮೆರವಣಿಗೆಯಲ್ಲಿ ತೆರಳಿದರು. ‘ಬೇಡ, ಬೇಡ ಮದ್ಯದಂಗಡಿ ಬೇಡ’, ‘ಅಬಕಾರಿ ಇಲಾಖೆಗೆ ಧಿಕ್ಕಾರ’ ಎಂಬ ಘೋಷಣೆಗಳನ್ನು ಕೂಗಿದರು.

ಶಾಲೆ ಇರುವಲ್ಲಿ ಮದ್ಯದಂಗಡಿ: ಚೆನ್ನೀಪುರ ಮೋಳೆಯಿಂದ ರಾಮ ಸಮುದ್ರಕ್ಕೆ ಸಂಪರ್ಕ ಕಲ್ಪಿಸುವ 60 ಅಡಿ ರಿಂಗ್‌ ರಸ್ತೆಯಲ್ಲಿ ಕೂಡ್ಲೂರು ಸರ್ವೇ ನಂ. 445/1ರಲ್ಲಿ 10ಗುಂಟೆ ಜಾಗದಲ್ಲಿ ಪುಷ್ಪ ಬಾರ್‌ ಮಾಲೀಕ ಕೃಷ್ಣ ಎಂಬುವವರು ಮದ್ಯದಂಗಡಿ ತೆರೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಇದನ್ನು ಕೂಡಲೇ ತಡೆಯಬೇಕು ಎಂದು ಆಗ್ರಹಿಸಿದರು.

ADVERTISEMENT

ಈ ರಸ್ತೆಯಲ್ಲಿ ಚೆನ್ನೀಪುರಮೋಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿಶು ವಿಹಾರ, ಸೇವಾ ಭಾರತಿ ಶಿಕ್ಷಣ ಸಂಸ್ಥೆ, ಆರೋಗ್ಯ ಕೇಂದ್ರ, ಧಾರ್ಮಿಕ ಸ್ಥಳ ಹಾಗೂ ರುದ್ರಭೂಮಿಗಳು ಇವೆ. ಇಲ್ಲಿ ಮದ್ಯದಂಗಡಿ ತೆರೆಯುವುದರಿಂದ ಕುಡುಕರ ಹಾವಳಿ ಹೆಚ್ಚಾಗುತ್ತದೆ ಎಂದು ದೂರಿದರು.

ಮದ್ಯದಂಗಡಿ ತೆರೆಯುವ ಸಂಬಂಧ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ದೂರು ನೀಡಲಾಗಿದೆ. ಆದರೆ, ಅವರು ಸ್ಥಳ ಪರಿಶೀಲನೆ ಮಾಡಿಯೇ ಮದ್ಯದಂಗಡಿ ತೆರೆಯಲು ಅನುಮತಿ ನೀಡಲಾಗಿದೆ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಚೆನ್ನೀಪುರದ ಮೋಳೆ, ಜಾಲಹಳ್ಳಿಹುಂಡಿ ಹಾಗೂ ಭಗೀರಥ ನಗರದಲ್ಲಿ ಹಿಂದುಳಿದ ವರ್ಗದ ಬಡ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಮದ್ಯದಂಗಡಿ ತೆರೆದರೆ ಅವರ ಕುಟುಂಬ ಬೀದಿಪಾಲು ಆಗಲು ಅವಕಾಶ ನೀಡಿದಂತಾಗುತ್ತದೆ. ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.

ಒಂದು ವೇಳೆ, ವಿರೋಧ ಲೆಕ್ಕಿಸದೆ ಮದ್ಯದಂಗಡಿ ತೆರೆದರೆ, ಶಾಂತಿಯುತವಾಗಿ ನಡೆದಿರುವ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಳ್ಳುತ್ತದೆ. ಅದಕ್ಕೆ ಜಿಲ್ಲಾಡಳಿತವೇ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಳಿಕ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮನವಿಪತ್ರ ನೀಡಲಾಯಿತು. ಪ್ರತಿಭಟನೆಯಲ್ಲಿ ಚೆನ್ನೀಪುರಮೋಳೆ ಗ್ರಾಮದ ಮುಖಂಡರಾದ ಕೆ. ಸಿದ್ದರಾಜು, ಮಹದೇವಶೆಟ್ಟಿ, ಸೋಮಶೇಖರ, ಮಂಜು, ನಾಗರಾಜು, ಭಗೀರಥ ನಗರದ ಮುಖಂಡರಾದ ಮಹದೇವ, ಮರಿಸ್ವಾಮಿ, ನಾರಾಯಣ ಸ್ವಾಮಿ, ಸಿದ್ದರಾಜು, ಜಾಲಹಳ್ಳಿಹುಂಡಿ ಗ್ರಾಮದ ಮುಖಂಡರಾದ ಮಾದಶೆಟ್ಟಿ, ಸಿದ್ದಶೆಟ್ಟಿ, ಮಹದೇವ, ಬಸವರಾಜಶೆಟ್ಟಿ ಪಾಲ್ಗೊಂಡಿದ್ದರು.

* * 

ಮಕ್ಕಳು, ಮಹಿಳೆಯರು ಓಡಾಡುವ ಸ್ಥಳದಲ್ಲಿ ಮದ್ಯದಂಗಡಿಗೆ ಅನುಮತಿ ನೀಡಲಾಗಿದೆ. ಅಬಕಾರಿ ಅಧಿಕಾರಿಗಳು ಉದ್ಯಮಿಗಳ ಲಾಬಿಗೆ ಮಣಿದಿದ್ದಾರೆ
ಎಂ. ಜಯಕುಮಾರ್
ಅಧ್ಯಕ್ಷ, ಜಿಲ್ಲಾ ಉಪ್ಪಾರ ಯುವಕರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.