ADVERTISEMENT

ಮಳೆ ಬಂದಾಗ ಮನೆಗೆ ನುಗ್ಗುವ ನೀರು

ಕಂದಹಳ್ಳಿ: ಚರಂಡಿಯಲ್ಲಿ ಹೆಪ್ಪುಗಟ್ಟಿದ ತ್ಯಾಜ್ಯ

​ಪ್ರಜಾವಾಣಿ ವಾರ್ತೆ
Published 4 ಮೇ 2017, 7:20 IST
Last Updated 4 ಮೇ 2017, 7:20 IST

ಯಳಂದೂರು:  ಬರದಿಂದ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿ, ಆಕಾಶವನ್ನೇ ನೋಡುವ ಸ್ಥಿತಿ ಸಾರ್ವಜನಿಕರದ್ದು. ಆದರೆ, ತಾಲ್ಲೂಕಿನ ಕಂದಹಳ್ಳಿ ಗ್ರಾಮದ ಕೆಲ ಬಡಾವಣೆಗಳ ಜನರು ಮಳೆ ಬಂದರೆ ಹೆದರುವ ಸ್ಥಿತಿ ಉಂಟಾಗಿದೆ.

ತಾಲ್ಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದಾಗಿರುವ ದುಗ್ಗಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಂದಹಳ್ಳಿ ಎರಡು ಭಾಗಗಳಾಗಿ ಸೀಳಿದೆ. ಇವು ಅವಲ್ ಕಂದಹಳ್ಳಿ ಹಾಗೂ ದುಯಂ ಕಂದಹಳ್ಳಿ. ಗ್ರಾಮ ರಾಷ್ಟ್ರೀಯ ಹೆದ್ದಾರಿ 209ರ ನಡುವೆ ಇವೆ.

ಇಲ್ಲಿ ಪ್ರಮುಖವಾಗಿ ಚರಂಡಿ ಸಮಸ್ಯೆ ನಿರಂತರ ಕಾಡುತ್ತಿದೆ. ಒಂದು ಬದಿಯಲ್ಲಿ ಮಾತ್ರ ದೊಡ್ಡ ಚರಂಡಿ ನಿರ್ಮಿಸಿ ಹಲವು ವರ್ಷಗಳೇ ಸಂದಿವೆ. ಆದರೆ, ನಿರ್ವಹಣೆ ಕೊರತೆಯಿಂದ ನಿವಾಸಿಗಳ ನಿದ್ದೆ ಕೆಡಿಸಿದೆ. ಇವುಗಳ ಹೂಳನ್ನು ಹೊರ ತೆಗೆಯದ ಕಾರಣ ಹಾವು, ಚೇಳುಗಳ ಬೀಡಾಗಿದೆ.

ಮಳೆ ಬಂದರೆ ನೀರೆಲ್ಲಾ ತಗ್ಗು ಪ್ರದೇಶಗಳ ಮನೆಗಳಿಗೆ ನುಗ್ಗುತ್ತದೆ. ಇನ್ನೊಂದು ಬದಿಯಲ್ಲಿ ಇನ್ನೂ ಕೂಡ ಚರಂಡಿ ನಿರ್ಮಿಸಿಲ್ಲ. ಇಡೀ ಗ್ರಾಮದ ನೀರೆಲ್ಲಾ ಇಲ್ಲಿಂದ ಯರಿಯೂರು ಕಾಲುವೆಗೆ ಸೇರುವುದರಿಂದ ಬದಿಯಲ್ಲಿರುವ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ ಎನ್ನುತ್ತಾರೆ ನಿವಾಸಿಗಳು.

ಕೆಲವು ಮನೆಗಳ ಗೋಡೆಗಳೂ ಕುಸಿದಿವೆ. ಗ್ರಾಮದಲ್ಲಿ ಕೆಲವರ ಮನೆಯ ಗೋಡೆಯಲ್ಲಿ ಕೊಚ್ಚೆ ನೀರು ದೊಡ್ಡ ರಂಧ್ರ ಉಂಟುಮಾಡಿದೆ. ಮಳೆ ಬಂದರೆ ಇಡೀ ಗ್ರಾಮದ ಚರಂಡಿಯ ನೀರು ಇವರ ಮನೆ ಬಾಗಿಲಿಗೆ ಹಾಕಿರುವ ಚಪ್ಪಡಿ ಕಲ್ಲುಗಳನ್ನು ಮುಚ್ಚುತ್ತದೆ. ಈ ನೀರನ್ನೇ ದಾಟಿ ಮನೆ ಸೇರುವ ಅನಿವಾರ್ಯತೆ ಇವರದು. ಈ ಬಗ್ಗೆ ಸಾಕಷ್ಟು ಬಾರಿ ಪಂಚಾಯಿತಿಗೆ ದೂರು ಸಲ್ಲಿಸಿದ್ದರೂ ಇನ್ನೂ ಕ್ರಮ ವಹಿಸಿಲ್ಲ ಎಂಬುದು ಚಾಮಮ್ಮ ಮತ್ತು ಮಹಾದೇವಮ್ಮರ ದೂರು.

ಗ್ರಾಮದ ಉಪ್ಪಾರ ಬಡಾವಣೆಯಲ್ಲೂ ಕೂಡ ಇದೇ ಸ್ಥಿತಿ ಇದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅಭಿವೃದ್ಧಿಯಾಗಿಲ್ಲ. ಈಗ ಬೇಸಿಗೆಯಾಗಿದ್ದು ಕಲುಷಿತ ನೀರು ಇಲ್ಲೇ ನಿಲ್ಲುವುದರಿಂದ ಕ್ರಿಮಿಕೀಟ, ವಿಷಜಂತು ಹಾಗೂ ಸೊಳ್ಳೆಗಳ ಅವಾಸ ಸ್ಥಾನವಾಗಿ ಮಾರ್ಪಟ್ಟಿದೆ.

ವಿಷಮಶೀತ ಜ್ವರ, ಇನ್ನಿತರೆ ಸಾಂಕ್ರಾಮಿಕ ರೋಗಗಳಿಂದ ಬಳಲುವ ಸ್ಥಿತಿ ಇದೆ. ಈ ಬಗ್ಗೆ ಸಾಕಷ್ಟು ಬಾರಿ ಪಂಚಾಯಿತಿಗೆ, ಶಾಸಕರಿಗೆ ಮನವಿ ಸಲ್ಲಿಸಿದ್ದರೂ ಕ್ರಮ ವಹಿಸಿಲ್ಲ. ಜೆಸಿಬಿ ಮೂಲಕ ಚರಂಡಿಯ ಹೂಳೆತ್ತಿಸುವಂತೆ ಸ್ಥಳೀಯರು ಮನವಿ ಸಲ್ಲಿಸಿದರೂ  ಸುಧಾರಣೆ ಕಂಡಿಲ್ಲ.

ಈಗಲಾದರೂ ಸಂಬಂಧಪಟ್ಟವರು ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂಬುದು ಸ್ಥಳೀಯರಾದ ಮಹೇಶ್. ಕೆ. ಪ್ರಕಾಶ್ ಹಾಗೂ ಪ್ರಕಾಶ್ ಸೇರಿದಂತೆ ಹಲವರ ಒತ್ತಾಯಕ್ಕೆ ಸ್ಪಂದನೆ ಸಿಗುವುದೇ ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.