ADVERTISEMENT

ಯಂತ್ರದ ಮೂಲಕ ಭತ್ತ ನಾಟಿ: ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2014, 8:12 IST
Last Updated 21 ಆಗಸ್ಟ್ 2014, 8:12 IST

ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದ ರೈತ ಎಂ. ಮಾದೇಶ್‌ ಯಂತ್ರದ ಮೂಲಕ ಭತ್ತ ನಾಟಿ ಮಾಡುವ ಮೂಲಕ  ಈ ಭಾಗದ ನೆರೆಹೊರೆಯ ರೈತರಿಗೆ  ಪ್ರಾತ್ಯಕ್ಷಿಕೆಯನ್ನು ಮಂಗಳವಾರ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ವಿಧಾನದಲ್ಲಿ ನಾಟಿ ಮಾಡಲು ಭತ್ತದ ಪೈರನ್ನು ವಿಶೇಷ ಪಾಲಿಥಿನ್‌ ಹಾಳೆಯ ಮೇಲೆ ಕೇವಲ ಕೊಟ್ಟಿಗೆ ಗೊಬ್ಬರದಲ್ಲಿ ಬೆಳೆಸಬೇಕು. ಹೀಗೆ ಮಾಡುವುದರಿಂದ ಪೈರಿನ ಬೇರುಗಳು ಉದ್ದವಾಗುವುದಿಲ್ಲ.

ಹಾಗಾಗಿ ಯಂತ್ರಕ್ಕೆ ಇದು ಸಿಲುಕಿಕೊಳ್ಳುವುದಿಲ್ಲ. ಜಮೀನನ್ನು ಇದಕ್ಕಾಗಿ ಹೆಚ್ಚು ನೀರಿಲ್ಲದೆ ಕೆಸರುಮವಾಗಿರಬೇಕು. ಇದರ ಜೊತೆಗೆ ಇದಕ್ಕೆಂದೇ ತರಬೇತಿ ಪಡೆದ ಚಾಲಕ ಹಾಗೂ ಇಬ್ಬರು ಸಹಾಯಕರಿದ್ದರೆ ಒಂದು ಗಂಟೆಯೊಳಗೆ ಒಂದು ಎಕರೆ ಜಮೀನಿನಲ್ಲಿ ನಾಟಿ ಮಾಡಬಹುದಾಗಿದೆ. ಈ ವಿಧಾನದ ಮೂಲಕ ನಿಗದಿತ ಪೈರನ್ನು ಮಾತ್ರ ಬಳಕೆಯಾಗುವುದರಿಂದ  ಪೈರಿನ ಉಳಿತಾಯವಾಗುತ್ತದೆ.

ಅಲ್ಲದೆ ಈಚೆಗೆ ಕೂಲಿ ಕಾರ್ಮಿಕರ ಕೊರತೆ ಹೆಚ್ಚಾಗಿದ್ದು ಇದರಿಂದಲೂ ಸಹ ಮುಕ್ತಿ ಪಡೆಯಬಹುದಾಗಿದ್ದು, ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಬಹುದು ಎಂದು ನೆರೆದಿದ್ದ ಕೆಲ ರೈತರಿಗೆ ಮಾಹಿತಿ ನೀಡಿದರು.

ಈ ವಿಧಾನ ಜನಪ್ರಿಯ ಗೊಳಿಸಲು ಕ್ರಮ: ತಾಲ್ಲೂಕಿನಲ್ಲಿ ಇಲಾಖೆಯ ವತಿಯಿಂದ ಕೇವಲ ಒಬ್ಬರಿಗೆ ಮಾತ್ರ ಈ ಯಂತ್ರವನ್ನು ವಿತರಣೆ ಮಾಡಲಾಗಿದೆ. ಈಗಾಗಲೇ ಕೃಷಿ ಚಟುವಟಿಕೆಗಳು ಆರಂಭವಾಗಿವೆ.

ಆದರೆ ಈ ವಿಧಾನ ಮೂಲಕ ಕೃಷಿ ಮಾಡುವವರ ಸಂಖ್ಯೆ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಇಲಾಖೆ ವತಿಯಿಂದಲೇ ಪ್ರಾತ್ಯಕ್ಷಿಕೆ ನಡೆಸಿ ಇದನ್ನು ಹೆಚ್ಚು ಮಾಡುವತ್ತ ಗಮನ ಹರಿಸಲಾಗುವುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುಂದ್ರಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.