ADVERTISEMENT

ರೇಷ್ಮೆ ಬೆಳೆಯಲು ರೈತರಿಗೆ ಸಲಹೆ

ಬೂದಂಬಳ್ಳಿಯಲ್ಲಿ ಹಿಪ್ಪುನೇರಳೆ ನರ್ಸರಿ ಕ್ಷೇತ್ರೋತ್ಸಕ್ಕೆ ಎಚ್.ವಿ.ಚಂದ್ರು ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 8:41 IST
Last Updated 8 ಫೆಬ್ರುವರಿ 2017, 8:41 IST

ಚಾಮರಾಜನಗರ: ‘ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ತಂದು ಕೊಡುವ ‘ವಿ1’ ತಳಿಯ ಹಿಪ್ಪುನೇರಳೆ ಬೆಳೆಯನ್ನು ರೈತರು ಬೆಳೆಯಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ. ಚಂದ್ರು ಸಲಹೆ ನೀಡಿದರು.

ತಾಲ್ಲೂಕಿನ ಬೂದಂಬಳ್ಳಿ ಗ್ರಾಮದ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ರೇಷ್ಮೆ ಇಲಾಖೆಯಿಂದ ನಡೆದ ಗ್ರಾಮದ ಪ್ರಗತಿಪರ ರೈತ ಬಿ.ಕೆ. ರಾಜಣ್ಣ ಅವರು ಬೆಳೆದಿರುವ ವಿ1 ತಳಿಯ ನರ್ಸರಿ ಕ್ಷೇತ್ರೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 20 ವರ್ಷಗಳಿಂದಲೂ ರೈತರು ರೇಷ್ಮೆ ಬೆಳೆಯನ್ನೇ ಅವಲಂಬಿಸಿದ್ದರು. ಜಿಲ್ಲೆ ರೇಷ್ಮೆ ಬೆಳೆಯಲ್ಲಿ ಹೆಚ್ಚಿನ ಪ್ರಸಿದ್ಧಿಯನ್ನು ಹೊಂದಿತ್ತು. ಆದರೆ, ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಕಾರಣದಿಂದ ರೇಷ್ಮೆ ಬೆಳೆ ಕ್ಷೀಣಿಸುತ್ತಿದೆ ಎಂದರು.

ಜಿಲ್ಲೆಯಲ್ಲಿ ಮತ್ತೆ ರೇಷ್ಮೆಬೆಳೆಯನ್ನು ಪುನಶ್ಚೇತನಗೊಳಿಸಲು ಸರ್ಕಾರ ರೇಷ್ಮೆ ಇಲಾಖೆ ಮೂಲಕ ರೇಷ್ಮೆ ಬೆಳೆಗೆ ಹೊಸ ತಾಂತ್ರಿಕತೆ ಅಳವಡಿಸಿ ಕಡಿಮೆ ಅವಧಿ ಹಾಗೂ ಕಡಿಮೆ ಕೂಲಿ ಕಾರ್ಮಿಕರಲ್ಲಿ ಹೆಚ್ಚಿನ ಇಳುವರಿ ಹಾಗೂ ಆದಾಯ ತಂದು ಕೊಡುವ ವಿ1 ತಳಿಯನ್ನು ಪರಿಚಯಿಸಿದೆ ಎಂದು ತಿಳಿಸಿದರು.

ರೇಷ್ಮೆ ಮಾರಾಟಗಾರರಿಗೂ ಸಹಾಯಧನ ನೀಡಿ ರೇಷ್ಮೆಬೆಳೆಗೆ ಉತ್ತೇಜನ ನೀಡಿದೆ. ಉದ್ಯೋಗ ಖಾತರಿ ಯೋಜನೆಯಡಿ ರೇಷ್ಮೆ ಬೆಳೆಗೆ ಅನುದಾನ ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ರೈತರು ಇದರ ಸದುಪಯೋಗ ಪಡೆದು ವಿ1 ತಳಿಯ ಹಿಪ್ಪುನೇರಳೆ ಬೆಳೆಯನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು.

ರೇಷ್ಮೆ ಇಲಾಖೆ ಉಪನಿರ್ದೇಶಕ ಲಕ್ಷ್ಮಿನರಸಿಂಹಯ್ಯ ಮಾತನಾಡಿ, 1ಎಕರೆ ಜಮೀನಿನಲ್ಲಿ ವಿ1 ಹಿಪ್ಪುನೇರಳೆ ನಾಟಿ ಮಾಡಿದರೆ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ₹ 12 ಸಾವಿರ, ಇತರೆ ರೈತರಿಗೆ ₹ 10,500, ಹನಿ ನೀರಾವರಿ ಪದ್ಧತಿ ಅಳವಡಿಸಲು ₹ 35 ಸಾವಿರ, ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕಾಗಿ ಅಳತೆಗೆ ಅನುಗುಣವಾಗಿ ₹ 63 ಸಾವಿರದಿಂದ ₹ 2.47 ಲಕ್ಷದವರೆಗೆ ಸಹಾಯಧನ ನೀಡಲಾಗುವುದು. ಜತೆಗೆ, 1 ಕೆ.ಜಿ ರೇಷ್ಮೆಗೂಡಿಗೆ ₹ 50 ಸಹಾಯಧನ ನೀಡಲಾಗುತ್ತದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಎಂ. ಶಂಕರಪ್ಪ ಮಾತನಾಡಿ, ಸರ್ಕಾರ ಬೆಳೆಗಳಿಗೂ ಹನಿ ನೀರಾವರಿ ಅಳವಡಿಸಿಕೊಳ್ಳಲು ಸಹಾಯಧನ ನೀಡುತ್ತಿದೆ. ರೈತರು ಇದರ ಸದುಪಯೋಗ ಪಡೆದು ಉತ್ತಮ ಬೆಳೆ ಬೆಳೆಯಬೇಕು. ಬರಗಾಲ ಹಾಗೂ ಅಲ್ಪ ನೀರಿನಲ್ಲೂ ಹೆಚ್ಚು ಇಳುವರಿ ಕೊಡುವ ರೇಷ್ಮೆಬೆಳೆ ಬೆಳೆಯಬೇಕು ಎಂದರು.

ಪ್ರಗತಿಪರ ರೈತ ಬಿ.ಕೆ. ರಾಜಣ್ಣ ಮಾತನಾಡಿ, ವಿ1ತಳಿಯ ರೇಷ್ಮೆ ಬೆಳೆಯಿಂದ ಪ್ರತಿ 2 ತಿಂಗಳಿಗೊಮ್ಮೆ ರೇಷ್ಮೆ ಮಾಡಲಾಗುತ್ತದೆ. 1 ಕೆ.ಜಿ ₹ 400 ನಿಂದ 500ಬೆಲೆ ಸಿಗುತ್ತಿದೆ. ಈ ಬೆಳೆಯಿಂದ ಲಾಭವಾಗಿದೆ ಎಂದರು.

ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಚಿಕ್ಕರಂಗಯ್ಯ, ದೊಡ್ಡತಾಯಮ್ಮ, ಯಶೋದಮ್ಮ, ರೇಷ್ಮೆ ಪ್ರದರ್ಶಕ ರಾಚಪ್ಪ, ರೇಷ್ಮೆ ನಿರೀಕ್ಷಕ ಜಿ. ಮಹದೇವಸ್ವಾಮಿ, ರೇಷ್ಮೆ ವಿಸ್ತರಣಾಧಿಕಾರಿ ಬಿ. ಸೋಮಣ್ಣ, ವೈ.ಬಿ. ಶಾಂತರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.