ADVERTISEMENT

ಲಕ್ಷ್ಮಿವರದರಾಜಸ್ವಾಮಿ ಸಂಭ್ರಮದ ರಥೋತ್ಸವ

ಐತಿಹಾಸಿಕ ಸ್ಥಳ ತೆರಕಣಾಂಬಿಯಲ್ಲಿ ವಿಜೃಂಭಣೆಯ ಜಾತ್ರೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2017, 9:52 IST
Last Updated 11 ಫೆಬ್ರುವರಿ 2017, 9:52 IST
ತೆರಕಣಾಂಬಿ ಗ್ರಾಮದಲ್ಲಿ ಲಕ್ಷ್ಮಿವರದರಾಜ ಸ್ವಾಮಿಯ 10ನೇ ಜಾತ್ರೋತ್ಸವ ನಡೆಯಿತು
ತೆರಕಣಾಂಬಿ ಗ್ರಾಮದಲ್ಲಿ ಲಕ್ಷ್ಮಿವರದರಾಜ ಸ್ವಾಮಿಯ 10ನೇ ಜಾತ್ರೋತ್ಸವ ನಡೆಯಿತು   

ಗುಂಡ್ಲುಪೇಟೆ: ತಾಲ್ಲೂಕಿನ ಐತಿಹಾಸಿಕ ಸ್ಥಳವಾದ ತೆರಕಣಾಂಬಿ ಗ್ರಾಮದಲ್ಲಿ ಲಕ್ಷ್ಮಿವರದರಾಜಸ್ವಾಮಿಯ ಜಾತ್ರೋತ್ಸವ ಅಂಗವಾಗಿ ಶುಕ್ರವಾರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ತಳಿರು ತೋರಣಗಳಿಂದ ಆಲಂಕೃತಗೊಂಡಿದ್ದ ಗ್ರಾಮದಲ್ಲಿ ಬಿಸಿಲಿನ ಝಳದ ನಡುಗೆ ಭಕ್ತರು ಲಕ್ಷ್ಮಿವರದರಾಜ ಸ್ವಾಮಿಯ ತೇರನ್ನು ಮುಖ್ಯರಸ್ತೆಯಲ್ಲಿ ಎಳೆಯುತ್ತಾ ಮೆರವಣಿಗೆ ಮಾಡಿ ಭಕ್ತಿಭಾವ ಮೆರೆದರು.

ಸ್ವಾಮಿಯ ಜಾತ್ರೋತ್ಸವವನ್ನು ಕಾರಣಾಂತರದಿಂದ ಅನೇಕ ವರ್ಷ ನಿಲ್ಲಿಸಲಾಗಿತ್ತು. 2008ರಿಂದ ಮತ್ತೆ ಶುರು ಮಾಡಿದ ಗ್ರಾಮಸ್ಥರು 10ನೇ ವರ್ಷದ ಮಹೋತ್ಸವವನ್ನು ಭಾರಿ ವಿಜೃಂಭಣೆಯಿಂದ ಸಾವಿರಾರು ಭಕ್ತಾಧಿಗಳ ಹರ್ಷೋದ್ಘಾರ ನಡುವೆ ಆಚರಿಸಲಾಯಿತು.

ಮಧ್ಯಾಹ್ನ 1 ಗಂಟೆಗೆ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡ ಲಾಯಿತು. ಗೋವಿಂದಾ ಗೋವಿಂದಾ ಎಂಬ ಜಯಘೋಷಗಳೊಂದಿಗೆ ಭಕ್ತರು ರಥಕ್ಕೆ ಕಟ್ಟಿದ್ದ ಹಗ್ಗವನ್ನು ಎಳೆದು ಪುನೀತಭಾವ ಮೆರೆದರು. ರಥ ಎಳೆ ಯಲು ಮಹಿಳೆಯರೇ ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ದೇವಸ್ಥಾನದ ಬಳಿಯಿಂದ ಹೊರಟ ಬ್ರಹ್ಮರಥವು ಜಾನಪದ ಕಲಾ ತಂಡಗಳು, ಮಂಗಳವಾದ್ಯ, ಬ್ಯಾಂಡ್ ವಾದನ, ಛತ್ರಿಚಾಮರಗಳು, ಗೊರವರ ಕುಣಿತ, ಗಾರುಡಿ ಗೊಂಬೆ, ದೊಣ್ಣೆವರಸೆ ಮುಂತಾದ ಜನಪದ ತಂಡಗಳ ಜೊತೆಯಲ್ಲಿ ಮುಖ್ಯ ಬೀದಿಗಳಲ್ಲಿ ಸಾಗಿತು. ಪ್ರತಿ ಮನೆಯವರು ಹಾಗೂ ಅಂಗಡಿಯವರು ರಥಕ್ಕೆ ಪೂಜೆ ಸಲ್ಲಿಸಿದರು.

ತೇರನ್ನು ಹೂ ಹಣ್ಣುಗಳಿಂದ ವಿಶೇಷವಾಗಿ ಅಲಂಕಾರ ಮಾಡ ಲಾಗಿತ್ತು. ಭಕ್ತರು ಹಣ್ಣು ಜವನಗಳನ್ನು ಎಸೆದು ಭಕ್ತಿಭಾವ ಸಮರ್ಪಿಸಿದರು. ಭಕ್ತರು ಸಾರ್ವಜನಿಕರಿಗೆ ಅನುಕೂಲ ವಾಗುವಂತೆ ಅಲ್ಲಲ್ಲಿ ಮಜ್ಜಿಗೆ ಮತ್ತು ಪಾನಕ ವಿತರಣೆ ಮಾಡಿದರು.

ಜಾತ್ರೆಯ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ಗ್ರಾಮದ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದ್ದು, ದೇವಸ್ಥಾನದಲ್ಲಿ ನಡೆಯುವ ಪೂಜಾ ಕಾರ್ಯಗಳ ಬಗ್ಗೆ ಧ್ವನಿವರ್ಧಕದ ಮೂಲಕ ಭಕ್ತರಿಗೆ ತಿಳಿಸಲಾಗುತ್ತಿತ್ತು. ಜಾತ್ರೆಗೆ ಅಕ್ಕಪಕ್ಕದ ಊರಿನವರು ಅಲ್ಲದೇ ಹೊರರಾಜ್ಯದ ಭಕ್ತರು ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.