ADVERTISEMENT

ಸಮಾಜಕ್ಕೆ ಹಿರಿಯರ ಮಾರ್ಗದರ್ಶನ ಅಗತ್ಯ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2014, 10:23 IST
Last Updated 19 ಸೆಪ್ಟೆಂಬರ್ 2014, 10:23 IST

ಚಾಮರಾಜನಗರ: ‘ಬಾಳಿನ ಮುಸ್ಸಂಜೆ ಯಲ್ಲಿರುವ ಹಿರಿಯ ನಾಗರಿಕರು ತಮ್ಮ ಸಮಯವನ್ನು ಕಿರಿಯರಿಗೆ ಮಾರ್ಗದರ್ಶನ ನೀಡಲು ಮೀಸಲಿಡುವ ಮೂಲಕ ಉನ್ನತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ವಿ.ಜಿ. ಸಾವಡಕರ್ ಸಲಹೆ ನೀಡಿದರು.

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯಿಂದ ನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಗುರುವಾರ ಹಿರಿಯ ನಾಗರಿಕರಿಗೆ ಹಮ್ಮಿಕೊಂಡಿದ್ದ  ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅವಿಭಕ್ತ ಕುಟುಂಬಗಳಲ್ಲಿ ಕಿರಿಯ ಸದಸ್ಯರಿಗೆ ಸನ್ಮಾರ್ಗದಲ್ಲಿ ನಡೆಯಲು ಹಿರಿಯರು ಹಿತವಚನ ನುಡಿಯುತ್ತಿದ್ದರು. ಆದರೆ, ಬದಲಾದ ಇಂದಿನ ಪರಿಸ್ಥಿತಿಯಲ್ಲಿ ಕುಟುಂಬದ ಎಲ್ಲರೂ ದುಡಿಮೆಗೆ ಇಳಿದಿದ್ದಾರೆ. ಇದರಿಂದ ಮಕ್ಕಳು ವಸತಿ ಶಾಲೆ, ಹಾಸ್ಟೆಲ್‌ಗಳಲ್ಲಿ ಉಳಿಯುವಂತಾಗಿದೆ. ಹಿರಿಯರ ಮಾರ್ಗದರ್ಶನ ಲಭಿಸುತ್ತಿಲ್ಲ ಎಂದರು.

ಸಮಾಜದಲ್ಲಿ ಒತ್ತಡದಿಂದಾಗಿ ಸುಖ- ಶಾಂತಿ ಕಡಿಮೆಯಾಗುತ್ತಿದೆ. ಮಕ್ಕಳಿಗೆ ಉತ್ತಮ ಮೌಲ್ಯಗಳ ಬಗ್ಗೆ ತಿಳಿಸದಿದ್ದರೆ ಹಲವು ಅನಾಹುತಗಳಿಗೆ ಎಡೆಮಾಡಿಕೊಟ್ಟಂತಾಗುತ್ತದೆ. ಹೀಗಾಗಿ, ಹಿರಿಯರು ತಮ್ಮ ವಿಶ್ರಾಂತ ಜೀವನದಲ್ಲಿ ಕಿರಿಯರನ್ನು ತಿದ್ದುವ ಕೆಲಸ ಮಾಡಬೇಕು ಎಂದು ಹೇಳಿದರು. ವಯೋವೃದ್ಧರಾದಾಗ ಮಕ್ಕಳು ನಿರ್ಲಕ್ಷ್ಯ ವಹಿಸಿದರೆ ಹಿರಿಯರು ಕಾನೂನಾತ್ಮಕವಾಗಿ ನೆರವು ಪಡೆದು ಜೀವನಾಂಶ ಪಡೆಯಲು ಅವಕಾಶವಿದೆ. ಇದಕ್ಕಾಗಿ ಉಚಿತವಾಗಿ ಕಾನೂನು ಸಲಹೆ ನೀಡಲಾಗುತ್ತದೆ ಎಂದರು.

ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗಾಗಿ ಹಲವು ಸ್ವಯಂಸೇವಾ ಸಂಸ್ಥೆಗಳು ಕಾರ್ಯ ನಿರತವಾಗಿವೆ. ಸಮಾಜದ ಒಳಿತಿಗಾಗಿ ಅನುಭವ ಹೊಂದಿದ ನಾಗರಿಕರ ಅಮೂಲ್ಯ ಸಮಯವನ್ನು ಒಳ್ಳೆಯ ಉದ್ದೇಶಕ್ಕೆ ವಿನಿಯೋಗಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಎಚ್. ಭಾಸ್ಕರ್ ಮಾತನಾಡಿ, ನಗರ, ಪಟ್ಟಣ ಪ್ರದೇಶದಲ್ಲಿ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ವಿಷಯಕ್ಕೆ ಮಾತ್ರ ಪೋಷಕರು ಪ್ರಾಧಾನ್ಯ ನೀಡುತ್ತಿದ್ದಾರೆ. ನೈತಿಕ ಶಿಕ್ಷಣದ ಬಗ್ಗೆ ಅರಿವು ಮೂಡಿಸುತ್ತಿಲ್ಲ. ಇನ್ನೊಂದೆಡೆ ಕಿರಿಯರು ಹಿರಿಯರ ಪರಿಶ್ರಮವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ, ಮಕ್ಕಳು ಹೊಣೆಗಾರಿಕೆ ಮರೆತು ವಯಸ್ಸಾದ ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿಸುವ ನಿದರ್ಶನ ಹೆಚ್ಚುತ್ತಿವೆ ಎಂದು ವಿಷಾದಿಸಿದರು.

ಹಿರಿಯ ನಾಗರಿಕರ ನೆರವಿಗಾಗಿ ಜಿಲ್ಲಾ ಕೇಂದ್ರದಲ್ಲಿ 24X7 ಅವಧಿಯೂ ಕಾರ್ಯನಿರ್ವಹಿಸುವ ಹಿರಿಯ ನಾಗರಿಕರ ಸಹಾಯವಾಣಿ ಕಚೇರಿ ಆರಂಭಿಸಲು ಸಿದ್ಧತೆ ಮಾಡಲಾಗುತ್ತಿದೆ. ಹಿರಿಯ ನಾಗರಿಕರ ದಿನಾಚರಣೆ ದಿನವಾದ ಅ. 1ರಂದು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಚಾಲನೆಗೊಳ್ಳಲಿದೆ ಎಂದರು.ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್ ಮಾತನಾಡಿ, ಹಿರಿಯರು ತಮ್ಮ ದೇಹಕ್ಕೆ ವಯಸ್ಸಾಗಿದೆ ಹೊರತು ಮನಸ್ಸಿಗೆ ಅಲ್ಲ ಎಂಬುದನ್ನು ತಿಳಿದು ಲವಲವಿಕೆಯಿಂದ ಇರಬೇಕು.  ಕುಟುಂಬದಲ್ಲಿ ಕೋಪತಾಪ ಪ್ರದರ್ಶಿಸದೆ ಸಂಯಮ ಕಾಯ್ದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಜಯರಾಮ್, ನ್ಯೂ ಪವರ್ ಸಂಸ್ಥೆಯ ಮಹೇಶ್, ಜ್ಞಾನಸಿಂಧು ವೃದ್ಧಾಶ್ರಮದ ಅಧ್ಯಕ್ಷ ಮಹದೇವಸ್ವಾಮಿ, ಮೊಬಿಲಿಟಿ ಇಂಡಿಯಾ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕ ಆನಂದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.