ADVERTISEMENT

‘ಸಮಾನತೆಯ ದೇಶ; ಅಂಬೇಡ್ಕರ್‌ ಕನಸು’

ಅಂಬೇಡ್ಕರ್‌ ಜ್ಞಾನದರ್ಶನ ಅಭಿಯಾನದಲ್ಲಿ ಬೋಧಿರತ್ನ ಬಂತೇಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 8:44 IST
Last Updated 8 ಫೆಬ್ರುವರಿ 2017, 8:44 IST
ಚಾಮರಾಜನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದಲ್ಲಿ ಮಂಗಳವಾರ ಅಂಬೇಡ್ಕರ್‌ ಅವರ 125ನೇ ಜನ್ಮದಿನದ ಅಂಗವಾಗಿ ನಡೆದ ಅಂಬೇಡ್ಕರ್‌ ಜ್ಞಾನದರ್ಶನ ಅಭಿಯಾನವನ್ನು ನಳಂದ ಬೌದ್ಧವಿಹಾರದ ಬೋಧಿರತ್ನ ಬಂತೇಜಿ ಸಂವಿಧಾನದ ಪ್ರಸ್ತಾವ ಓದುವ ಮೂಲಕ ಉದ್ಘಾಟಿಸಿದರು
ಚಾಮರಾಜನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದಲ್ಲಿ ಮಂಗಳವಾರ ಅಂಬೇಡ್ಕರ್‌ ಅವರ 125ನೇ ಜನ್ಮದಿನದ ಅಂಗವಾಗಿ ನಡೆದ ಅಂಬೇಡ್ಕರ್‌ ಜ್ಞಾನದರ್ಶನ ಅಭಿಯಾನವನ್ನು ನಳಂದ ಬೌದ್ಧವಿಹಾರದ ಬೋಧಿರತ್ನ ಬಂತೇಜಿ ಸಂವಿಧಾನದ ಪ್ರಸ್ತಾವ ಓದುವ ಮೂಲಕ ಉದ್ಘಾಟಿಸಿದರು   

ಚಾಮರಾಜನಗರ: ‘ಸಮಾನತೆಯ ಆಧಾರದಲ್ಲಿ ದೇಶ ನಿರ್ಮಾಣ ಮಾಡಬೇಕು ಎಂದು ಅಂಬೇಡ್ಕರ್ ಕನಸು ಕಂಡಿದ್ದರು’ ಎಂದು ನಳಂದ ಬೌದ್ಧವಿಹಾರದ ಬೋಧಿರತ್ನ ಬಂತೇಜಿ ಹೇಳಿದರು.

ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದಲ್ಲಿ ಮಂಗಳವಾರ ಸಮಾಜ ಕಲ್ಯಾಣ ಇಲಾಖೆ ಹಾಗೂ ಕಾಲೇಜಿನಿಂದ ಅಂಬೇಡ್ಕರ್‌ ಅವರ 125ನೇ ಜನ್ಮದಿನದ ಅಂಗವಾಗಿ ನಡೆದ ಅಂಬೇಡ್ಕರ್‌ ಜ್ಞಾನ ದರ್ಶನ ಅಭಿಯಾನವನ್ನು ಸಂವಿಧಾನದ ಪ್ರಸ್ತಾವ ಓದುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಚೀನ ಕಾಲದಿಂದಲ್ಲೂ ರೈತರು, ಅಲ್ಪ ಸಂಖ್ಯಾತರು, ಹೆಣ್ಣುಮಕ್ಕಳು ಹಾಗೂ ಬಡವರನ್ನು ಶೋಷಣೆ ಮಾಡಲಾಗುತ್ತಿದೆ. ಇದರ ವಿರುದ್ಧವಾಗಿ ಅಂಬೇಡ್ಕರ್‌ ಅವರು ಜ್ಞಾನದ ಮಾರ್ಗದಲ್ಲಿ ಹೋರಾಡಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದ್ದಾರೆ ಎಂದು ತಿಳಿಸಿದರು.

ಮಹಾನ್‌ ಜ್ಞಾನಿ ಅಂಬೇಡ್ಕರ್‌. ಅವರು 30ನೇ ವಯಸ್ಸಿನಲ್ಲಿಯೇ 19 ಪದವಿಗಳನ್ನು ಪಡೆದಿದ್ದರು. ಅಂಬೇಡ್ಕರ್‌ ಅವರ ಆದರ್ಶವನ್ನು ಇಂದು ಎಲ್ಲರೂ ಅಳವಡಿಸಿಕೊಂಡಿದ್ದು, ಆದರೆ, ಅದನ್ನು ಪಾಲಿಸಲು ಮಾತ್ರ ವಿಫಲರಾಗಿದ್ದಾರೆ ಎಂದರು.

ಕೆಲವರು ಅಂಬೇಡ್ಕರ್ ಅವರನ್ನು ಕೇವಲ ದಲಿತ ಸಮುದಾಯಕ್ಕೆ ಸೀಮಿತಗೊಳಿಸಿ ಮಾತನಾಡುತ್ತಾರೆ. ಅದು ಸುಳ್ಳು. ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಎಲ್ಲ ಬಡವರ್ಗ, ಮಹಿಳೆಯರು, ರೈತರ ಅಭಿವೃದ್ಧಿ ಕುರಿತು ಅವಕಾಶ ಕಲ್ಪಿಸಿದ್ದಾರೆ ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಬಿ.ಎನ್. ಬಹದ್ದೂರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸೈನ್ಸ್‌ನ ಪ್ರೊ.ಡಿ.ಆನಂದ್‌ ಮಾತನಾಡಿ, ಬಾಬಾಸಾಹೇಬ್ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ವಿಶ್ವದ ಜ್ಞಾನ ಸಂಕೇತ. ಅಂಬೇಡ್ಕರ್‌ ಅವರ ದರ್ಶನವೇ ಜ್ಞಾನದ ದರ್ಶನವಾಗಿದೆ ಎಂದರು.

ಜ್ಞಾನದ ಮೂಲಕ ಏನಾದರೂ ಸಾಧಿಸಬಹುದು ಎಂದು ಅಂಬೇಡ್ಕರ್‌ ತಿಳಿಸಿದ್ದಾರೆ. ಹಾಗಾಗಿ, ಅವರ 125ನೇ ಜನ್ಮದಿನವನ್ನು ವಿಶ್ವಸಂಸ್ಥೆ ವಿಶ್ವದೆಲ್ಲೆಡೆ ಜ್ಞಾನದ ದಿನವಾಗಿ ಆಚರಣೆ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಶಿವಬಸವಯ್ಯ, ಅಂಬೇಡ್ಕರ್‌ ಜ್ಞಾನದರ್ಶನ ಅಭಿಯಾನದ ಜಿಲ್ಲಾ ಸಂಯೋಜಕಿ ಪುಟ್ಟಕೆಂಪಮ್ಮ, ವಲಯ ಸಂಯೋಜಕರು ಆರ್‌. ಸಿದ್ದರಾಜು ಹಾಜರಿದ್ದರು.

*
ಜನರು  ಡಾ.ಅಂಬೇಡ್ಕರ್‌ ಅವರನ್ನು ಭಾವನ್ಮಾತಕವಾಗಿ ತಿಳಿದಿದ್ದಾರೆ. ಹಾಗಾಗಿ ಅವರು ಸೂರ್ಯ, ಚಂದ್ರರಿರುವವರೆಗೂ ಅಮರಾಗಿರುತ್ತಾರೆ.
-ಬೋಧಿರತ್ನ ಬಂತೇಜಿ,
ನಳಂದ ಬೌದ್ಧವಿಹಾರ, ಟಿ. ನರಸೀಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT