ADVERTISEMENT

ಸಿದ್ದಪ್ಪಾಜಿ ದೇವಾಲಯಕ್ಕೆ ಬೀಗ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 8:29 IST
Last Updated 13 ಸೆಪ್ಟೆಂಬರ್ 2017, 8:29 IST
ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಾಲಯಕ್ಕೆ ಬೀಗ ಜಡಿದಿರುವುದು
ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಾಲಯಕ್ಕೆ ಬೀಗ ಜಡಿದಿರುವುದು   

ಕೊಳ್ಳೇಗಾಲ: ತೆಂಗಿನಕಾಯಿ ಒಡೆಯಲು ಅವಕಾಶ ನೀಡದಿರುವುದರಿಂದ ಅರ್ಚಕ ದೇವಾಲಯಕ್ಕೆ ಬೀಗ ಜಡಿದಿರುವ ಘಟನೆ ತಾಲ್ಲೂಕಿನ ಚಿಕ್ಕಲ್ಲೂರಿನಲ್ಲಿ ನಡೆದಿದೆ.
ಇಲ್ಲಿನ ಪ್ರಸಿದ್ಧ ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಪ್ರಧಾನ ಅರ್ಚಕ ಶಿವನಂಜಪ್ಪ ದೇವಾಲಯಕ್ಕೆ ಬೀಗ ಜಡಿದಿದ್ದಾರೆ.

‘ದೇವಾಲಯದಲ್ಲಿ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ತೆಂಗಿನಕಾಯಿ ಒಡೆದರೆ ಸ್ವಲ್ಪ ಹಣ ದೊರೆಯುವುದರಿಂದ ನನ್ನ ಕುಟುಂಬದ ಜೀವನ ನಿರ್ವಹಣೆಯಾಗುತ್ತದೆ. ಆದರೆ, ದೇವಾಲಯದ ಆಡಳಿತ ಮಂಡಳಿ ತೆಂಗಿನಕಾಯಿ ಒಡೆಯಲು ಅವಕಾಶ ನೀಡುತ್ತಿಲ್ಲ. ಹಾಗಾಗಿ, ಬೀಗ ಹಾಕಿದ್ದು, ಅವರು ಅವಕಾಶ ನೀಡುವವರೆಗೂ ಬೀಗ ತೆಗೆಯುವುದಿಲ್ಲ’ ಎಂದು ಅರ್ಚಕ ಶಿವನಂಜಪ್ಪ ಪಟ್ಟುಹಿಡಿದಿದ್ದಾರೆ.

ದೇವಾಲಯಕ್ಕೆ ಬೀಗ ಹಾಕಿರುವುದರಿಂದ ಮಂಗಳವಾರ ವಿವಿಧೆಡೆಯಿಂದ ಬಂದಿದ್ದ ಭಕ್ತರು ಪೂಜೆ ಸಲ್ಲಿಸಿ ಹರಕೆ ತೀರಿಸಲಾಗದೆ ವಾಪಸ್‌ ಹೋಗಿದ್ದಾರೆ. ಘಟನೆಯ ಬಗ್ಗೆ ಮಠದ ಆಡಳಿತಾಧಿಕಾರಿ ಪ್ರಭುಲಿಂಗೇ ಅರಸ್ ಮಾತನಾಡಿ, ಪ್ರಧಾನ ಅರ್ಚಕ ಶಿವನಂಜಪ್ಪ ಅವರಿಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಮಾತ್ರ ಅವಕಾಶ ಇದೆ.

ADVERTISEMENT

ಉಳಿದಂತೆ ತೆಂಗಿನಕಾಯಿ ಒಡೆಯುವುದು, ದೇವಸ್ಥಾನದ ಹೊರಗೆ ದೂಪ ಇಡುವುದು, ಕಟ್ಟು ಒಡೆಯುವುದು, ಇತರೆ ಪೂಜಾ ಕ್ರಮಗಳನ್ನು ಬಹಳ ವರ್ಷಗಳಿಂದ ನಿಗದಿತ ಕುಟುಂಬದವರೇ ನಿರ್ವಹಿಸಿ ಕೊಂಡು ಬರುತ್ತಿದ್ದಾರೆ ಎಂದರು.

ಅರ್ಚಕರಿಗೆ ತೆಂಗಿನಕಾಯಿ ಒಡೆಯುವ ಅವಕಾಶ ಕಲ್ಪಿಸಿದರೆ ತೆಂಗಿನಕಾಯಿ ಒಡೆಯುವ ಕುಟುಂಬ ಬೀದಿಪಾಲಾಗುತ್ತದೆ. ಆದ್ದರಿಂದ ಅರ್ಚಕರಿಗೆ ಅದಕ್ಕೆ ಅನುಮತಿ ನೀಡಲು ಸಾಧ್ಯವೇ ಇಲ್ಲ. ಅವರು ಪೂಜೆಗೆ ಮಾತ್ರ ಸೀಮಿತ ಎಂದು ತಿಳಿಸಿದರು.

‘ದೇವಾಲಯಕ್ಕೆ ಮೂರು ದಿನಗಳಿಂದ ಬೀಗ ಹಾಕಿರುವುದರಿಂದ ರಾಜ್ಯ ವಿವಿಧೆಡೆಯಿಂದ ಬರುತ್ತಿರುವ ಭಕ್ತರಿಗೆ ಬೇಸರ ಉಂಟುಮಾಡಿದೆ. ಅವರು ನಿರಾಸೆಯಿಂದ ಪೂಜೆ ಸಲ್ಲಿಸಲಾಗದೆ ಹಿಂದಿರುಗುತ್ತಿದ್ದಾರೆ. ಹಾಗಾಗಿ, ಬೀಗ ತೆರವುಗೊಳಿಸುವಂತೆ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ದೇವಾಲಯದ ಬಾಗಿಲು ತೆರೆಯಲು ಕ್ರಮವಹಿಸಲಾಗುವುದು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.