ADVERTISEMENT

‘ಸಿದ್ದರಾಮಯ್ಯರಿಂದಲೇ ರಾಜ್ಯ ಕಾಂಗ್ರೆಸ್ ಮುಕ್ತ’

ಗುಂಡ್ಲುಪೇಟೆಯಲ್ಲಿ ಸ್ವಾಭಿಮಾನಿ ಸಮಾವೇಶ; ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಲೇವಡಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 7:37 IST
Last Updated 11 ಮಾರ್ಚ್ 2017, 7:37 IST
ಗುಂಡ್ಲುಪೇಟೆ: ‘ರಾಜ್ಯ ಕಾಂಗ್ರೆಸ್ ಮುಕ್ತವಾಗುತ್ತದೆ ಎಂದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯ. ಈ ಕೆಲಸವನ್ನು ಅರ್ಧ  ಮಾಡಿ ಮುಗಿಸಿದ್ದಾರೆ’ ಎಂದು ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ತಿಳಿಸಿದರು.
 
ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಶುಕ್ರವಾರ ಬಿಜೆಪಿ ಕಾರ್ಯಕರ್ತರ ಸ್ವಾಭಿಮಾನಿ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸಿದ್ದರಾಮಯ್ಯ ಒಬ್ಬ ನಂಬಿಕೆ ದ್ರೋಹಿ. ಯಾರನ್ನೂ ವಿಶ್ವಾಸಕ್ಕೆ ತೆಗೆದು ಕೊಳ್ಳುವುದಿಲ್ಲ. ಅಧಿಕಾರ ಬಳಸಿ ರಾಜ್ಯ ದಲ್ಲಿ ತೊಘಲಕ್ ಆಡಳಿತ ನಡೆಸು ತ್ತಿದ್ದಾರೆ. ರಾಜ್ಯ ಕಂಡ ಅತ್ಯಂತ ಕೆಟ್ಟ ಮುಖ್ಯಮಂತ್ರಿ’ ಎಂದು ಕಿಡಿಕಾರಿದರು.
 
‘ನಂಜನಗೂಡು ಕ್ಷೇತ್ರದ ಉಪ ಚುನಾವಣೆ ನಾನು ಮತ್ತು ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ್ದು. ಈ ಚುನಾವಣೆ ಯಲ್ಲಿ ಸೋತರೆ ರಾಜಕೀಯ ನಿವೃತ್ತಿ ಹೊಂದುತ್ತೆನೆ. ಕಾಂಗ್ರೆಸ್ ಸೋತರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗಲಿ’ ಎಂದರು.
 
‘ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ಹೋರಾಟದ ಮೂಲಕ ರಾಜ ಕೀಯಕ್ಕೆ ಬಂದವ ನಾನು. 13ನೇ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಆರು ಮಂದಿ ಪ್ರಧಾನಮಂತ್ರಿಗಳ ಸಂಪುಟ ದಲ್ಲಿ ಕಾರ್ಯನಿರ್ವಹಿಸಿದ್ದೇನೆ’ ಎಂದರು.
 
‘ಕಳೆದ ಬಾರಿ ಇದೇ ನನ್ನ ಕಡೇ ಚುನಾವಣೆ. ಮತ್ತೆ ಸ್ಪರ್ಧೆ ಮಾಡುವು ದಿಲ್ಲ ಎಂದಿದ್ದೆ. ಯಾವೂದೇ ಸೂಚನೆ ಯಿಲ್ಲದೆ ನನ್ನನ್ನು ಸಚಿವ ಸಂಪುಟದಿಂದ ತೆಗೆದರು. ಇದರಿಂದ ಸ್ವಾಭಿಮಾನಕ್ಕೆ ಪೆಟ್ಟಾಯಿತು. ಹಿತೈಷಿಗಳ ಜತೆ ಚರ್ಚಿಸಿ, ಸಿದ್ದರಾಮಯ್ಯ ಅವರಿಗೆ ಬುದ್ದಿ ಕಲಿಸ ಬೇಕು ಎಂದು ನಿರ್ಧರಿಸಿಯೇ ಕಾಂಗ್ರೆಸ್‌ ಪಕ್ಷದಿಂದ ಹೊರಬಂದು ಚುನಾವಣೆ ಎದುರಿಸುತ್ತಿದ್ದೇನೆ’ ಎಂದರು.
 
‘ನಾನು ರಾಜಕೀಯಕ್ಕೆ ಬಂದಾಗ ಸಿದ್ದರಾಮಯ್ಯ ಎಲ್ಲಿದ್ದರೊ, ಅವರಿಗೇ ಗೊತ್ತು. ಸಿದ್ದರಾಮಯ್ಯ ದಲಿತ ವಿರೋಧಿ ನಾಯಕ. ಕಂದಾಯ ಸಚಿವನಾಗಿ ನಾನು ಮಾಡಿದಯಾವುದೇ ಒಳ್ಳೆಯ ಕೆಲಸ ವನ್ನು ಸಹಿಸುತ್ತಿರಲಿಲ್ಲ’ ಎಂದು ಆರೋಪಿಸಿದರು.
 
‘ನಾನು 25ನೇ ವಯಸ್ಸಿಗೆ ರಾಜ ಕೀಯಕ್ಕೆ ಬಂದೆ. ಆಗ ಸಿದ್ದರಾಮಯ್ಯ ಎಲ್ಲಿದ್ದರು. ಸಂಸದನಾಗಿ 1 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದಾಗ, ನೀವು ನಿಮ್ಮ ಕ್ಷೇತ್ರದಲ್ಲಿ ಕೇವಲ8 ಸಾವಿರ ಮತ ಪಡೆದುದನ್ನು ಮರೆತುಬಿಟ್ಟಿರಾ? ಎಂದು ಪ್ರಶ್ನಿಸಿದರು.
 
ಅಭ್ಯರ್ಥಿ ಸಿ.ಎಸ್.ನಿರಂಜನ ಕುಮಾರ್ ಅವರು, ‘ತಾಲ್ಲೂಕಿನಲ್ಲಿ ಅಭಿ ವೃದ್ಧಿ ಮಾಡಿದ್ದೇವೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಮೂಲಸೌಕರ್ಯಗಳಿಲ್ಲದೆ ಜನರು ಅವಸ್ಥೆ ಪಡುತ್ತಿದ್ದಾರೆ’ ಎಂದು ತರಾಟೆಗೆ ತೆಗೆದುಕೊಂಡರು.
 
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಮಲ್ಲಿಕಾರ್ಜುನಪ್ಪ, ಜಿಲ್ಲಾ ಪ್ರಭಾರ ಫಣೀಶ್, ಜಿ.ಪಂ.ಸದಸ್ಯೆ ರತ್ನಮ್ಮ ಶ್ರೀಕಂಠಪ್ಪ, ಪುರಸಭೆ ಸದಸ್ಯ ಗೋವಿಂದರಾಜು, ತಾ.ಪಂ.ಸದಸ್ಯರಾದ ಪ್ರಭಾಕರ್, ರೇವಣ್ಣ, ಮಹದೇವಸ್ವಾಮಿ, ತಾಯಮ್ಮ, ಮಾಜಿ ಸದಸ್ಯ ಮಲ್ಲಿದಾಸ್, ಎಂ.ಡಿ.ಸಿ.ಸಿ. ಮಾಜಿ ಅಧ್ಯಕ್ಷ ಬಸವೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.