ADVERTISEMENT

ಹೊಂಡದಲ್ಲಿ ಅರಳಿದ ಸಮಗ್ರ ಕೃಷಿ

ಯುವಕನ ಕೃಷಿ ಸಾಧನೆ

ಕೆ.ಎಚ್.ಓಬಳೇಶ್
Published 22 ಮಾರ್ಚ್ 2017, 10:04 IST
Last Updated 22 ಮಾರ್ಚ್ 2017, 10:04 IST
ಮುಕ್ಕಡಹಳ್ಳಿಯ ಯುವ ರೈತ ಎಂ. ಪವನ್‌ಕುಮಾರ್‌ ಅವರು ನಿರ್ಮಿಸಿದ ಕೃಷಿ ಹೊಂಡ
ಮುಕ್ಕಡಹಳ್ಳಿಯ ಯುವ ರೈತ ಎಂ. ಪವನ್‌ಕುಮಾರ್‌ ಅವರು ನಿರ್ಮಿಸಿದ ಕೃಷಿ ಹೊಂಡ   

ಚಾಮರಾಜನಗರ: ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ. ಮುಂಗಾರು ಮತ್ತು ಹಿಂಗಾರಿನಲ್ಲಿ ಉತ್ತಮ ಮಳೆ ಸುರಿದಿಲ್ಲ. ಮಳೆನೀರು ಸಂಗ್ರಹಿಸುವುದು ಸಾಧ್ಯವೇ? ಎಂಬ ಪ್ರಶ್ನೆ ಸಹಜ. ಅಲ್ಪಸ್ವಲ್ಪ ಸುರಿದ ಮಳೆನೀರು ಸಂಗ್ರಹಿಸಿ ನೀರು ಉಳಿತಾಯದ ಉಪಾಯ ಕಂಡುಕೊಂಡ ಹಲವರು ಜಿಲ್ಲೆಯಲ್ಲಿದ್ದಾರೆ.

ಅವರಲ್ಲಿ ತಾಲ್ಲೂಕಿನ ಮುಕ್ಕಡಹಳ್ಳಿಯ ಯುವ ರೈತ ಎಂ. ಪವನ್‌ಕುಮಾರ್‌ ಕೂಡ ಒಬ್ಬರು. ಪವನ್‌ಕುಮಾರ್‌ ಓದಿರುವುದು ಬಿಬಿಎಂ ಪದವಿ. ಪದವಿ ಪೂರ್ಣಗೊಂಡ ಬಳಿಕ ಬೆಂಗಳೂರಿನ ಇನ್ಫೊಸಿಸ್‌ನಲ್ಲಿ ಎರಡು ವರ್ಷ ಕೆಲಸ ಮಾಡಿದರು. ಕೊನೆಗೆ ಕೃಷಿಯತ್ತ ಅವರ ಮನಸ್ಸು ಹರಿಯಿತು. ಉದ್ಯೋಗ ತ್ಯಜಿಸಿದರು. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಅವರ ಹಂಬಲಕ್ಕೆ ಕುಟುಂಬದ ಸದಸ್ಯರೂ ಒತ್ತಾಸೆಯಾಗಿ ನಿಂತಿದ್ದಾರೆ.

ಇದರ ಫಲವಾಗಿಯೇ ಅವರು ಅಲ್ಪಪ್ರಮಾಣದ ನೀರಿನಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಜಿಲ್ಲೆಯ ಇತರೇ ರೈತರಿಗೆ ಮಾದರಿಯಾಗಿದ್ದಾರೆ. ಮುಕ್ಕಡಹಳ್ಳಿಯಲ್ಲಿ ಅವರ ತಾಯಿಗೆ ಸೇರಿದ 3 ಎಕರೆ ಕೃಷಿ ಜಮೀನಿದೆ. ಕೃಷಿ ಭಾಗ್ಯ ಯೋಜನೆಯಡಿ ಲಾಟರಿ ಮೂಲಕ ಇವರಿಗೂ ಕೃಷಿ ಹೊಂಡ ಮಂಜೂರಾಯಿತು. ಹೊಲದಲ್ಲಿ 15X15 ಅಡಿಯ ಕೃಷಿ ಹೊಂಡ ನಿರ್ಮಿಸಿದರು.

ಮುಂಗಾರು ಹಂಗಾಮಿನಡಿ ಕೆಲವು ದಿನ ಸುರಿದ ಮಳೆಗೆ ಕೃಷಿ ಹೊಂಡ ಭರ್ತಿಯಾಯಿತು. ಹಿಂಗಾರಿನಲ್ಲಿ ಮಳೆ ಕೊರತೆ ಕಾಣಿಸಿತು. ಹೊಂಡದಲ್ಲಿ ಸಹಜವಾಗಿ ನೀರು ಇಂಗತೊಡಗಿತು.

ಆ ವೇಳೆ ಜಮೀನಿನಲ್ಲಿರುವ ಕೊಳವೆಬಾವಿ ಮೂಲಕ ಕೃಷಿ ಹೊಂಡಕ್ಕೆ ನೀರು ತುಂಬಿಸಿದರು. ಹೊಂಡದ ಸುತ್ತಲಿನ ಬದುವಿನಲ್ಲಿ ಸಮಗ್ರ ಕೃಷಿ ಪದ್ಧತಿಗೆ ಮುಂದಾದರು. ಹೊಂಡದ ಸುತ್ತಲೂ ಅಗಸೆ ಬೀಜ ನೆಟ್ಟಿದರು. ಈಗ ಅಗಸೆ ಸಸಿಗಳು ಸಮೃದ್ಧವಾಗಿ ಬೆಳೆದು ನಿಂತಿವೆ. ಅಗಸೆ ಸೊಪ್ಪನ್ನು ಮಿಶ್ರತಳಿ ರಾಸುಗಳ ಮೇವಾಗಿ ಬಳಸುತ್ತಿದ್ದಾರೆ.

ಜತೆಗೆ, ಹೊಂಡದ ಸುತ್ತ ಕುಂಬಳಕಾಯಿ ಗಿಡ, ಮೆಣಸಿನಗಿಡ, ಪಪ್ಪಾಯಿ, ಟೊಮೆಟೊ, ನುಗ್ಗೆಗಿಡ ನೆಟ್ಟಿದ್ದಾರೆ. ಹಾಗಲಕಾಯಿ ಕೂಡ ಫಲ ನೀಡಿದೆ. ಹಸಿರು ಹೊದ್ದಿರುವ ಕೃಷಿ ಹೊಂಡವನ್ನು ನೋಡುವುದೇ ಕಣ್ಣಿಗೆ ಆನಂದ.

ಮೀನುಮರಿ ಬಿತ್ತನೆ: ಜಿಲ್ಲೆಯಲ್ಲಿ ಸುಜಲಾ 3 ಯೋಜನೆ ಅನುಷ್ಠಾನಗೊಂಡಿದೆ. ಜಮೀನಿನಲ್ಲಿ ಅಲ್ಪಾವಧಿಯಲ್ಲಿ ನೀರು ಸಂಗ್ರಹವಾಗುವ ಸಣ್ಣಕೆರೆ, ಕಟ್ಟೆ, ಕೃಷಿ ಹೊಂಡಗಳಲ್ಲಿ ಮೀನು ಬಿತ್ತನೆ ಮಾಡಿ ಲಾಭ ಪಡೆಯಲು ಈ ಯೋಜನೆಯಡಿ ನೆರವು ನೀಡಲಾಗುತ್ತಿದೆ. ಕೃಷಿ ಹೊಂಡದಲ್ಲಿ ಸಂಗ್ರಹಗೊಂಡಿರುವ ಮಿತ ನೀರಿನಲ್ಲಿ ಮೀನು ಸಾಕಾಣಿಕೆ ಮಾಡಲು ಪವನ್‌ಕುಮಾರ್‌ ಮುಂದಾಗಿದ್ದಾರೆ.

ಸುಜಲಾ ಯೋಜನೆಯಡಿ 5 ತಿಂಗಳ ಹಿಂದೆ ಹೊಂಡದಲ್ಲಿರುವ ನೀರು ಸಂಗ್ರಹಕ್ಕೆ ಅನುಗುಣವಾಗಿ 200 ಕಾಟ್ಲಾ ಮೀನಿನ ಮರಿ ನೀಡಲಾಗಿದೆ. 7ರಿಂದ 8 ತಿಂಗಳ ಅವಧಿಗೆ ಈ ಮೀನುಗಳು ಕೋಯ್ಲಿಗೆ ಬರುತ್ತವೆ. ಈ ಅವಧಿಗೆ ಒಂದು ಮೀನಿನ ಗಾತ್ರ 1 ಕೆಜಿಗೆ ತಲುಪುತ್ತದೆ. ಮಾರುಕಟ್ಟೆಯಲ್ಲಿ 1 ಕೆಜಿ ಮೀನಿಗೆ ₹ 100ರಿಂದ ₹ 150 ಬೆಲೆ ಇದೆ. ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆಯೂ ವರದಾನವಾಗಿದೆ.

‘ವ್ಯವಸಾಯ ಮಾಡುವುದು ನನಗಿಷ್ಟ. ಕೃಷಿ ಇಲಾಖೆಯಡಿ ಲಭಿಸಿರುವ ಸೌಲಭ್ಯ ಬಳಸಿಕೊಂಡು ಕೃಷಿ ಹೊಂಡ ನಿರ್ಮಿಸಿದ್ದೇನೆ. ಅಲ್ಪಪ್ರಮಾಣದ ನೀರು ಬಳಸಿಕೊಂಡು ಸಮಗ್ರ ಕೃಷಿ ಪದ್ಧತಿ ಕೈಗೊಂಡಿದ್ದೇನೆ’ ಎನ್ನುತ್ತಾರೆ ಪವನ್‌ಕುಮಾರ್.

*
ವ್ಯವಸಾಯ ಮಾಡುವುದು ನನಗಿಷ್ಟ. ಕೃಷಿ ಇಲಾಖೆಯಡಿ ಲಭಿಸಿರುವ ಸೌಲಭ್ಯಗಳನ್ನು ಬಳಸಿಕೊಂಡು ಕೃಷಿ ಹೊಂಡ ನಿರ್ಮಿಸಿದ್ದೇನೆ.
-ಎಂ.ಪವನ್‌ಕುಮಾರ್,
ಯುವ ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT