ADVERTISEMENT

‘ಮಕ್ಕಳಿಗೆ ಈ ನೆಲದ ಸಂಸ್ಕೃತಿ ತಿಳಿಸಿ’

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2014, 10:18 IST
Last Updated 19 ಸೆಪ್ಟೆಂಬರ್ 2014, 10:18 IST

ಚಾಮರಾಜನಗರ: ‘ಮಕ್ಕಳು ವಿಶ್ವ ಮಾನವರಾಗಿ ರೂಪುಗೊಳ್ಳಬೇಕು. ಅವರಿಗೆ ಕೇವಲ ತಾಂತ್ರಿಕ, ವೈದ್ಯಕೀಯ ಶಿಕ್ಷಣ ಕೊಡಿಸುವುದೇ ದೊಡ್ಡ ಸಾಧನೆಯಲ್ಲ. ಈ ನೆಲದ ಸಂಸ್ಕೃತಿ ತಿಳಿಸುವಂತಹ ಶಿಕ್ಷಣ ಕೊಡಿಸಲು ಪೋಷಕರು ಮುಂದಾಗಬೇಕು’ ಎಂದು ರೈತ ಸಂಘ ರಾಜ್ಯ ಘಟಕದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.

ನಗರದ ಮಹಾಮನೆಯಲ್ಲಿ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಶರಣ ಚಿಂತನ ಸಿಂಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಗಜ್ಯೋತಿ ಬಸವಣ್ಣ ಸ್ಥಾಪಿಸಿದ ವೀರಶೈವ ಧರ್ಮ ವಿಶಾಲ ತಳಹದಿ ಹೊಂದಿದೆ. ಅದನ್ನು ಜಾತಿಯ ಚೌಕಟ್ಟಿನಲ್ಲಿ ಬಂಧಿಸಬಾರದು. ಸಮಾಜದ ಎಲ್ಲರನ್ನು ಒಟ್ಟಿಗೆ ಕರೆದೊಯ್ಯುವ ಕಾರ್ಯಕ್ರಮ ನಡೆಯಬೇಕಿದೆ ಎಂದರು.

ಬಸವಾದಿ ಶರಣರು ಎಲ್ಲವನ್ನು ಧಿಕ್ಕರಿಸಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದರು. ಅವರ ಸಂದೇಶ ಪಾಲಿಸುತ್ತಾ ನಾವಿಂದು ವಿಶಾಲ ದೃಷ್ಟಿಯಲ್ಲಿ ಸಮಾಜ ನೋಡುವ ಗುಣ ಬೆಳೆಸಿಕೊಳ್ಳಬೇಕಿದೆ ಎಂದರು. 

‘ಯುವಪೀಳಿಗೆ ಮತ್ತು ಮೌಲ್ಯಗಳು’ ಕುರಿತು ಮಾತನಾಡಿದ ಡಯಟ್‌ನ ಹಿರಿಯ ಉಪನ್ಯಾಸಕ ಯು.ಆರ್. ಲಿಂಗರಾಜೇಅರಸ್, ‘ಯುವಪೀಳಿಗೆಯಲ್ಲಿ ಮೌಲ್ಯಗಳು ಅವನತಿ ಹೊಂದಲು ಸಮಾಜ, ಮಾಧ್ಯಮ ಹಾಗೂ ಪೋಷಕರು ಕಾರಣರಾಗಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಅವಿಭಕ್ತ ಕುಟುಂಬಗಳಲ್ಲಿ ಮಕ್ಕಳಿಗೆ ಮೌಲ್ಯಗಳ ಬಗ್ಗೆ ಪಾಠ ಹೇಳಲಾಗುತ್ತಿತ್ತು. ಈಗ ವಿಭಕ್ತ ಕುಟುಂಬ ಪದ್ಧತಿಯಿಂದ ಸಂಬಂಧ ಮತ್ತು ಸಂಸ್ಕೃತಿ ಕುರಿತು ಯುವಜನರಿಗೆ ತಿಳಿವಳಿಕೆ ಕಡಿಮೆಯಾಗಿದೆ ಎಂದು ವಿಷಾದಿಸಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಎಂ. ಸ್ವಾಮಿ, ಉಪಾಧ್ಯಕ್ಷ ಸಿದ್ದಮಲ್ಲಪ್ಪ, ಜಿ. ಶಶಿಧರ್, ಗುರುಸ್ವಾಮಿ, ಬಿ.ಪಿ. ಪ್ರಕಾಶ್, ಕೊತ್ತಲವಾಡಿ ಮಹದೇವಸ್ವಾಮಿ, ಜಿ.ಬಿ. ಮಹೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.