ADVERTISEMENT

ಚಿಕ್ಕಲ್ಲೂರು ಜಾತ್ರೆ ಆರಂಭಕ್ಕೆ ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 9:24 IST
Last Updated 2 ಜನವರಿ 2018, 9:24 IST
ಜಾತ್ರೆಯ ಅಂಗವಾಗಿ ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡಿರುವ ಹಳೇಮಠ
ಜಾತ್ರೆಯ ಅಂಗವಾಗಿ ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡಿರುವ ಹಳೇಮಠ   

ಹನೂರು: ಜಿಲ್ಲೆಯ ಸುಪ್ರಸಿದ್ಧ ಪುಣ್ಯಕ್ಷೇತ್ರ ಚಿಕ್ಕಲ್ಲೂರಿನಲ್ಲಿ ಐದು ದಿನ ವಿಜೃಂಭಣೆಯಿಂದ ಜರುಗುವ ಜಾತ್ರೆಗೆ ಸೋಮವಾರ ಜಿಲ್ಲಾಡಳಿತ ವತಿಯಿಂದ ಸಿದ್ಧತೆಗಳು ಭರದಿಂದ ನಡೆಯಿತು.

ಜ.2ರ ಮಂಗಳವಾರ ಮಧ್ಯರಾತ್ರಿಯಲ್ಲಿ ಜರುಗುವ ಚಂದ್ರಮಂಡಲ ಉತ್ಸವದೊಂದಿಗೆ ಜಾತ್ರೆಗೆ ವಿದ್ಯುಕ್ತ ಚಾಲನೆ ದೊರೆಯಲಿದೆ. ಬುಧವಾರ ದೊಡ್ಡವರ ಸೇವೆ, ಗುರುವಾರ ಮುಡಿಸೇವೆ ಅಥವಾ ನೀಲಗಾರ ದೀಕ್ಷೆ, ಶುಕ್ರವಾರ ಪಂಕ್ತಿಸೇವೆ ಅಥವಾ ಸಿದ್ಧರ ಸೇವೆ ಹಾಗೂ ಶನಿವಾರ ಮುತ್ತತ್ತಿರಾಯನ ಸೇವೆ ಅಥವಾ ಕಡಬಾಗಿಲ ಸೇವೆ ಜರುಗಲಿದೆ.

ಸುಗ್ಗಿಯ ನಂತರ ಜರುಗುವ ಈ ಜಾತ್ರೆಗೆ ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಭಕ್ತರು ತಮ್ಮ ಆರಾಧ್ಯ ದೈವರ ಸನ್ನಿಧಿಯಲ್ಲಿ ವಾರಗಟ್ಟಲೆ ವಾಸ್ತವ್ಯ ಹೂಡಿ ಹರಕೆ ಕಾಣಿಕೆಗಳನ್ನು ಸಲ್ಲಿಸುತ್ತಾರೆ. ಸತತ ಐದು ದಿನಗಳ ಕಾಲ ಜಾತ್ರೆಯಲ್ಲಿ ತಂಗುವ ಭಕ್ತರಿಗಾಗಿ ಯಾವುದೇ ಕುಂದುಕೊರತೆ ಉಂಟಾ ಗದಂತೆ ಕ್ರಮವಹಿಸಲು ಅಧಿಕಾರಿಗಳು ವ್ಯವಸ್ಥೆ ಕಲ್ಪಿಸುತ್ತಿದ್ದಾರೆ.

ADVERTISEMENT

ತಾಲ್ಲೂಕು ಆಡಳಿತದ ವತಿಯಿಂದ ಶೌಚಾಲಯ, ತಾತ್ಕಾಲಿಕ ಸ್ನಾನ ಗೃಹಗಳನ್ನು ನಿರ್ಮಾಣ ಮಾಡಲಾಗಿದೆ. ಜಾತ್ರೆಯಲ್ಲಿ ಜನಸಂದಣಿಯನ್ನು ತಡೆಗಟ್ಟಲು ರಸ್ತೆಯಿಂದ 15 ಅಡಿ ಅಂತರದಲ್ಲಿ ಅಂಗಡಿ ಮಳಿಗೆಗಳನ್ನು ನಿರ್ಮಿಸುವಂತೆ ಸೂಚಿಸಲಾಗಿದೆ. ಚಂದ್ರಮಂಡಲಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಗದ್ದಿಗೆ ಆಸುಪಾಸಿನಲ್ಲಿ ಹಣ್ಣು ಕಾಯಿ ಮಾರಾಟವನ್ನು ನಿರ್ಬಂಧಿಸಲಾಗಿದೆ.

ಬೀದಿ ದೀಪ, ರಸ್ತೆ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು, ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆಯಲಾಗಿದೆ. ಉಳಿದಂತೆ ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ವಾಹನ, ಆಂಬ್ಯುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ.

ಗ್ರಾಮ ಪಂಚಾಯಿತಿ ವತಿಯಿಂದ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದ್ದು, 1,000ಕ್ಕೂ ಹೆಚ್ಚು ಖಾಸಗಿ ವಾಹನಗಳು ಹಾಗೂ 100ಕ್ಕೂ ಅಧಿಕ ಸರ್ಕಾರಿ ಬಸ್‌ಗಳ ನಿಲುಗಡೆಗೆ ನಿಲ್ದಾಣ ಮಾಡಲಾಗಿದೆ. ಭಕ್ತರ ಅನುಕೂಲಕ್ಕಾಗಿ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಮತ್ತು ನಂಜನಗೂಡು ತಾಲ್ಲೂಕುಗಳಿಂದ ಚಿಕ್ಕಲ್ಲೂರಿಗೆ ಕೆ.ಎಸ್‌.ಆರ್‌.ಟಿ.ಸಿ. ಸುಮಾರು 140 ವಿಶೇಷ ಬಸ್‌ಗಳನ್ನು ಒದಗಿಸಿದೆ.

ಸುರಕ್ಷತಾ ದೃಷ್ಟಿಯಿಂದ ನರೀಪುರ, ಬಾಣೂರು, ಮತ್ತಿಪುರ, ಸುಂಡ್ರಳ್ಳಿ ಹಾಗೂ ಬಾಳೆಗುಣಸೆ ಗ್ರಾಮಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಜಾತ್ರೆಯ ಕೇಂದ್ರಬಿಂದುವಾದ ಚಂದ್ರಮಂಡಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಆಯಕಟ್ಟಿನ ಸ್ಥಳಗಳಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಡಿವೈಎಸ್‌ಪಿ ಪುಟ್ಟಮಾದಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.