ADVERTISEMENT

ಕುಡುಕರ ತಾಣಗಳಾಗುತ್ತಿರುವ ಶಾಲೆಗಳು

ಶಿಕ್ಷಣ ಸಚಿವರ ತವರಲ್ಲೇ ಮದ್ಯಪಾನಿಗಳ ಹಾವಳಿ ತೀವ್ರ

ಅವಿನ್ ಪ್ರಕಾಶ್
Published 3 ಜುಲೈ 2018, 15:18 IST
Last Updated 3 ಜುಲೈ 2018, 15:18 IST
ಶಾಲೆಯೊಂದರ ಜಗಲಿಯಲ್ಲಿ ಸೋಡಾ, ಮದ್ಯದ ಬಾಟಲಿ, ಸಿಗರೇಟ್‌ ಪೊಟ್ಟಣ ಬಿದ್ದಿರುವುದು
ಶಾಲೆಯೊಂದರ ಜಗಲಿಯಲ್ಲಿ ಸೋಡಾ, ಮದ್ಯದ ಬಾಟಲಿ, ಸಿಗರೇಟ್‌ ಪೊಟ್ಟಣ ಬಿದ್ದಿರುವುದು   

ಕೊಳ್ಳೇಗಾಲ:ಪ್ರಾಥಮಿಕ ಹಾಗೂ ಪ್ರೌಡಶಿಕ್ಷಣ ಸಚಿವ ಎನ್.ಮಹೇಶ್ ಅವರ ಸ್ವಕ್ಷೇತ್ರ ಹಾಗೂ ತಾಲ್ಲೂಕಿನ ಹಲವು ಶಾಲೆ, ಉದ್ಯಾನಗಳು ಹಾಗೂ ತರಕಾರಿ ಮಾರುಕಟ್ಟೆಯಲ್ಲಿ ಕುಡುಕರ ಹಾವಳಿ ಮಿತಿ ಮೀರಿದೆ.

ಇಲ್ಲಿನಹಲವು ಸರ್ಕಾರಿ ಶಾಲೆಗಳು ಪ್ರತಿ ದಿನ ಸಂಜೆ ಕುಡುಕರ ಅಡ್ಡೆಗಳಾಗಿ ಮಾರ್ಪಡುತ್ತಿದೆ. ಪಟ್ಟಣದ ಶಾಲೆಗಳಲ್ಲೂ ಇದು ಹೆಚ್ಚು ನಡೆಯುತ್ತಿದೆ.ಕುಡಿದ ಬಾಟಲಿಗಳು ಹಾಗೂ ತಿಂದ ಆಹಾರ ಪೊಟ್ಟಣಗಳನ್ನು ಶಾಲಾ ಆವರಣದಲ್ಲಿ ಎಸೆಯುವ ಘಟನೆ ಪ್ರತಿನಿತ್ಯ ನಡೆಯುತ್ತಿದೆ. ಬೆಳಿಗ್ಗೆ ಶಾಲೆಗೆ ಬರುವ ಮಕ್ಕಳಿಗೆ ಮದ್ಯದ ಬಾಟಲಿಗಳು, ತಿಂದುಳಿದ ಆಹಾರ ಪೊಟ್ಟಣಗಳು ಹಾಗೂ ಸಿಗರೇಟ್ ತುಂಡುಗಳ ದರ್ಶನವಾಗುತ್ತಿದೆ. ದುರಂತದ ಸಂಗತಿ ಎಂದರೆ ಶಾಲೆಯ ಮಕ್ಕಳೇ ಇವುಗಳನ್ನು ಸ್ವಚ್ಛ ಮಾಡಬೇಕಾದ ಸ್ಥಿತಿ ಇದೆ.

ಕುಡುಕರ ದರ್ಬಾರ್‌: ಪಟ್ಟಣದನ್ಯಾಷನಲ್ ಶಾಲೆ, ಎಂ.ಜಿ.ಎಸ್.ವಿ ಶಾಲೆ, ಮಹದೇಶ್ವರ ಕಾಲೇಜುಗಳಲ್ಲಿ ಕುಡುಕರದೇ ದರ್ಬಾರ್ ಆಗಿದೆ. ಕುಡಿದು ಸಮ್ಮನೆ ತೆರಳುವುದಿಲ್ಲ; ಕೊಗಾಡಿ, ಕಿರುಚಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾರೆ. ಶಾಲೆಯ ಸಮೀಪದಲ್ಲಿರುವ ಮನೆಯವರಂತೂ ಕಿವಿಮುಚ್ಚಿ ಕುಳಿತು ಕೊಳ್ಳಬೇಕಾಗಿದೆ. ಸಾರ್ವಜನಿಕರು ಠಾಣೆಗೆ ಕರೆ ಮಾಡಿ ಹೇಳಿದರೂ ಪೊಲೀಸರು ತಲೆ ಕೆಡೆಸಿಕೊಳ್ಳುವುದಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.

ADVERTISEMENT

ಪಾರ್ಕ್‌ ಹಾಗೂ ಆರ್.ಎಂ.ಸಿ ಮಾರುಕಟ್ಟೆ: ಪಟ್ಟಣದ ನಿವಾಸಿಗಳುಪ್ರತಿನಿತ್ಯ ಮುಂಜಾನೆ ವಾಯುವಿಹಾರಕ್ಕೆ ಪಾರ್ಕ್‌ಗಳಿಗೆತೆರಳುತ್ತಾರೆ. ಅಲ್ಲೂ ಅವರನ್ನು ಸ್ವಾಗತಿಸುವುದು ಇದೇ ಬಾಟಲಿಗಳು, ಅಳಿದುಳಿದ ಆಹಾರದ ಪೊಟ್ಟಣಗಳು ಮತ್ತು ಸಿಗರೇಟ್‌ ತುಂಡುಗಳು!

ಪಟ್ಟಣದ ಆರ್.ಎಂ.ಸಿ ಮಾರುಕಟ್ಟೆಯು ರಾತ್ರಿ ಮಿನಿ ಬಾರ್ ಅಂಡ್ ರೆಸ್ಟೋರೆಂಟ್‌ ಆಗಿ ಬದಲಾಗುತ್ತದೆ.ಅನೇಕ ಬಾರಿ ಅಲ್ಲಿ ಅಕ್ರಮವಾಗಿ ಜೂಜಾಟಗಳು ಸಹ ನಡೆದಿದ್ದು, ಅದನ್ನು ಪೊಲೀಸರು ತಪ್ಪಿಸಿದ್ದಾರೆ. ‘ಮಾರುಕಟ್ಟೆಯಲ್ಲಿ ಕುಡಿದು ಬಾಟಲಿಗಳನ್ನುಒಡೆದು ಹಾಕಿ ಹೋಗುತ್ತಾರೆ. ಬೆಳಂಬೆಳಿಗ್ಗೆ ನಮ್ಮ ರೈತರು, ತಾನು ಬೆಳೆದ ತರಕಾರಿಗಳನ್ನು ಮಾರುಕಟ್ಟೆಗೆ ತರುತ್ತಾರೆ. ಒಡೆದಿರುವ ಬಾಟಲಿಗಳು ರೈತರ ಕಾಲಿಗೆ ಚುಚ್ಚಿದ ಹಲವು ನಿದರ್ಶನಗಳು ನಡೆದಿವೆ. ದಯವಿಟ್ಟು ಈ ಹಾವಳಿಗಳನ್ನು ತಪ್ಪಿಸಿ’ ಎಂದು ರೈತ ಮುಖಂಡ ಶೈಲೇಂದ್ರ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.