ADVERTISEMENT

ಅಮಾನಿ ಬೈರಸಾಗರ ಕೆರೆ ಮತ್ತೆ ಒತ್ತುವರಿ

ಮಾರ್ಚ್‌ನಲ್ಲಿ ಒತ್ತುವರಿ ತೆರವುಗಳಿಸಿದ್ದ ಕೆರೆ; ನಿರಾತಂಕವಾಗಿ ಸಾಗಿದ ಕೃಷಿ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2015, 10:05 IST
Last Updated 6 ಅಕ್ಟೋಬರ್ 2015, 10:05 IST

ಗುಡಿಬಂಡೆ: ಕಳೆದ ಮಾರ್ಚ್‌ ತಿಂಗಳಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಖುದ್ದು ಪರಿಶೀಲನೆ ನಡೆಸಿ ಒತ್ತುವರಿ ತೆರವುಗಳಿಸಿದ್ದ ತಾಲ್ಲೂಕಿನ ಅಮಾನಿ ಬೈರಸಾಗರ ಕೆರೆ ಮತ್ತೆ ಒತ್ತುವರಿಯಾಗಿದೆ.

ಕೆರೆ ಪ್ರದೇಶದ ಗುರುತಿಸಿ ನಿರ್ಮಿಸಿದ್ದ ಗಡಿ ಕಂದಕಗಳನ್ನು ಒತ್ತುವರಿದಾರರು ವ್ಯವಸ್ಥಿತವಾಗಿ ಮುಚ್ಚಿ ಹಾಕಿದ್ದಾರೆ.
ಕೆರೆಯ ಒಟ್ಟು ವಿಸ್ತೀರ್ಣ 269 ಎಕರೆ. ಇದರ ಪೈಕಿ ಒಟ್ಟು 19.37 ಗುಂಟೆ ಒತ್ತುವರಿಯನ್ನು ಜಿಲ್ಲಾಡಳಿತ ತೆರವುಗೊಳಿಸಿತ್ತು. ಆದರೆ ಈಗ ಮತ್ತೆ ಕೆರೆ ಒತ್ತುವರಿಯಾಗಿದ್ದು, ಕೃಷಿ ಚಟುವಟಿಕೆ ನಿರಾತಂಕವಾಗಿ ಸಾಗಿದೆ.

ಕೆರೆ ಆವರಣ ಮತ್ತೆ ಒತ್ತುವರಿಯಾಗದಂತೆ ತಡೆಯಲು ಗಡಿಯಲ್ಲಿ ಗಿಡ ನೆಟ್ಟು ಪೋಷಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಆದರೆ ಸಸಿ ನೆಡುವ ಕಾರ್ಯ ನಡೆದಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಕೆರೆಯತ್ತ ನಿರ್ಲಕ್ಷ್ಯ: ಕೆರೆಯು ಸಣ್ಣ ನೀರಾವರಿ ಇಲಾಖೆ ಸುಪರ್ದಿಯಲ್ಲಿದೆ. ಆದರೆ ಇಲಾಖೆ ಅಧಿಕಾರಿಗಳು ತಮಗೂ ಕೆರೆಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಾರೆ. ಅರಣ್ಯ ಇಲಾಖೆಗೂ ಕರೆ ಉಳಿಸುವುದು ಬೇಕಾಗಿಲ್ಲ. ಕೆರೆ ರಕ್ಷಣೆಗೆ ಬಿಡುಗಡೆಯಾದ ಹಣ ಏನಾಯಿತು ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ ಎಂದು ರೈತ ಮುಖಂಡ ಲಕ್ಷ್ಮಿನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ. ತಾಲ್ಲೂಕಿನ ಯಾವ ಕೆರೆಗೂ ಗಡಿರೇಖೆಗಳಿಲ್ಲ, ಉಳ್ಳವರು ಕೆರೆ ಅಂಗಳದಲ್ಲಿಯೇ ಕೊಳವೆ ಬಾವಿಗಳನ್ನು ಕೊರೆದಿದ್ದಾರೆ. ಕೆರೆಯಂಗಳದಲ್ಲಿ ಬೆಳೆ ಬೆಳೆದರೆ ನೀರು ಸಂಗ್ರಹಣೆಗೆ ಅಡಚಣೆಯಾಗುತ್ತದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.