ADVERTISEMENT

ಇಂದು ಎಪಿಎಂಸಿ ಚುನಾವಣೆಗೆ ಮತದಾನ

108 ಮತಗಟ್ಟೆಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ ಮತ ಚಲಾವಣೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 5:55 IST
Last Updated 12 ಜನವರಿ 2017, 5:55 IST

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲ್ಲೂಕುಗಳಲ್ಲಿ ಗುರುವಾರ (ಜ.12) ನಡೆಯುವ ಚಿಕ್ಕಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಚುನಾವಣೆಯ ಮತದಾನಕ್ಕೆ ತಾಲ್ಲೂಕು ಆಡಳಿತ ಸಕಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣೆಯ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಬುಧವಾರ ಮಧ್ಯಾಹ್ನ ಮತದಾನ ಸಾಮಗ್ರಿಗಳೊಂದಿಗೆ ತಮಗೆ ಗೊತ್ತುಪಡಿಸಿದ ಮತಗಟ್ಟೆಗಳಿಗೆ ತೆರಳಿದರು.

ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಆವರಣದಲ್ಲಿ ನಿಯೋಜಿತ ಸಿಬ್ಬಂದಿ ಮತಪತ್ರಗಳು, ಮತಪೆಟ್ಟಿಗೆ, ಬೆರಳಿಗೆ ಹಾಕುವ ಶಾಹಿ, ಶೀಲು, ಮತದಾರರ ಪಟ್ಟಿ, ಚುನಾವಣೆ ಪ್ರಕ್ರಿಯೆಗೆ ಸಂಬಂಧಪಟ್ಟ ನಮೂನೆಗಳು ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಪಡೆದು, ಹಂಚಿಕೆಯಾದ ಮತಗಟ್ಟೆಗಳತ್ತ ಭದ್ರತಾ ಸಿಬ್ಬಂದಿಯೊಂದಿಗೆ ಬಸ್‌, ಜೀಪ್‌ಗಳ ಮೂಲಕ ಹೊರಟರು.

ಚಿಕ್ಕಬಳ್ಳಾಪುರ ಎಪಿಎಂಸಿ ವ್ಯಾಪ್ತಿಯಲ್ಲಿ ಒಟ್ಟು 14 ಸ್ಥಾನಗಳಿದ್ದು, ಆ ಪೈಕಿ 5 ಸ್ಥಾನಗಳು ಶಿಡ್ಲಘಟ್ಟ ತಾಲ್ಲೂಕು ವ್ಯಾಪ್ತಿಯಲ್ಲಿ ಬರುತ್ತವೆ.  ಚುನಾವಣೆಯ ಅಂತಿಮ ಕಣದಲ್ಲಿ ಒಟ್ಟು 37 ಅಭ್ಯರ್ಥಿಗಳಿದ್ದು, ಆ ಪೈಕಿ 18 ಚಿಕ್ಕಬಳ್ಳಾಪುರ ಮತ್ತು 19 ಜನರು ಶಿಡ್ಲಘಟ್ಟ ತಾಲ್ಲೂಕು ವ್ಯಾಪ್ತಿಯಲ್ಲಿದ್ದಾರೆ.

12 ಸ್ಥಾನಗಳಿಗೆ ಮತದಾನ: 14 ಸ್ಥಾನಗಳ ಪೈಕಿ ಕೃಷಿ ಹುಟ್ಟುವಳಿ ಸಂಸ್ಕರಣ ಸಹಕಾರ ಸಂಘಗಳ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೇತೇನಹಳ್ಳಿಯ ಕೆ.ಎಸ್.ಕೃಷ್ಣಾರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದು, ಅವರ ಗೆಲುವು ಜ. 14ರಂದು ಅಧಿಕೃತವಾಗಿ ಘೋಷಣೆಯಾಗಲಿದೆ. ಸೂಚಕರ ಸಹಿ ಇಲ್ಲ ಎನ್ನುವ ಕಾರಣಕ್ಕೆ ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಕ್ಷೇತ್ರಕ್ಕೆ ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾಧಿಕಾರಿ ಅವರು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ರಾಮಚಂದ್ರ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯವು ಆ ಕ್ಷೇತ್ರದ ಚುನಾವಣೆಗೆ ನಾಲ್ಕು ವಾರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಹೀಗಾಗಿ ಗುರುವಾರ 12 ಸ್ಥಾನಗಳಿಗೆ ಮತದಾನ ನಡೆಯಲಿದೆ.

ಮತದಾನಕ್ಕಾಗಿ ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲ್ಲೂಕುಗಳಲ್ಲಿ ತಲಾ ೫೪ ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. ಅವುಗಳಲ್ಲಿ  40 ಸೂಕ್ಷ್ಮ, 35 ಅತಿಸೂಕ್ಷ್ಮ  ಮತ್ತು 33 ಸಾಮಾನ್ಯ ಮತಗಟ್ಟೆಗಳೆಂದು ವಿಂಗಂಡಿಸಲಾಗಿದೆ.

ಚುನಾವಣೆಗಾಗಿ ಸುಮಾರು 550 ಸಿಬ್ಬಂದಿ ಮತ್ತು 250 ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಪ್ರತಿ  ಮತಗಟ್ಟೆಯಲ್ಲಿ  ತಲಾ ಒಬ್ಬ ಮತಗಟ್ಟೆ ಅಧ್ಯಕ್ಷ ಅಧಿಕಾರಿ, ಸಹಾಯಕ ಅಧ್ಯಕ್ಷ ಅಧಿಕಾರಿ, ಮೊದಲ ಮತಗಟ್ಟೆ ಅಧಿಕಾರಿ, ಎರಡನೇ ಮತಗಟ್ಟೆ ಅಧಿಕಾರಿ ಮತ್ತು ಒಬ್ಬ ‘ಡಿ’ ಗುಂಪಿನ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ.
ಅತಿ ಸೂಕ್ಷ್ಮ ಮತಗಟ್ಟೆಗೆ ತಲಾ ಒಬ್ಬ ಎಎಸ್‌ಐ, ಹೆಡ್‌ ಕಾನ್‌ಸ್ಟೆಬಲ್‌, ಕಾನ್‌ಸ್ಟೆಬಲ್‌, ಗೃಹ ರಕ್ಷಕದಳದ ಸಿಬ್ಬಂದಿ ಹೀಗೆ ನಾಲ್ಕು ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಸೂಕ್ಷ್ಮ ಮತ್ತು ಸಾಮಾನ್ಯ ಮತಗಟ್ಟೆಗಳ ಭದ್ರತೆಗಾಗಿ ತಲಾ ಇಬ್ಬರು ಸಿಬ್ಬಂದಿಯನ್ನು ಕಳುಹಿಸಿ ಕೊಡಲಾಗಿದೆ ಎಂದು ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದರು.

ಎಪಿಎಂಸಿ ಚುನಾವಣೆ ಮತದಾನವು ಗುರುವಾರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ನಡೆಯಲಿದೆ. ಮರು ಮತದಾನದ ಅವಶ್ಯಕತೆ ಇದ್ದಲ್ಲಿ ಶುಕ್ರವಾರ (ಜ.13) ರಂದು ಮತದಾನ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ. ಮತ ಎಣಿಕೆ ಕಾರ್ಯವು ಜ.14ರಂದು ಚಿಕ್ಕಬಳ್ಳಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ದಶಕದ ಬಳಿಕ  ‘ರಾಜಕೀಯ ಬರಗಾಲ’ ಕಳೆದು ಬರುತ್ತಿರುವ ಮೊದಲ ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ‘ಪ್ರತಿಷ್ಠೆ’ ಪಣಕ್ಕಿಟ್ಟು ಸೆಣಸಾಟಕ್ಕಿಳಿದಿದ್ದು, ಈ ಪೈಕಿ ವಿಜಯಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಎನ್ನುವುದು ಸದ್ಯದ ಕುತೂಹಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.