ADVERTISEMENT

ಇಲ್ಲಿ ಮಕ್ಕಳೇ ಎತ್ತುಗಳು

ಜಿಲ್ಲೆಯಲ್ಲಿ ಎತ್ತುಗಳ ಕೊರತೆ; ಕೃಷಿ ಚಟುವಟಿಕೆಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2015, 7:28 IST
Last Updated 28 ಜುಲೈ 2015, 7:28 IST

ಚಿಕ್ಕಬಳ್ಳಾಪುರ: ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಕೃಷಿ ಚಟುವಟಿಕೆಗೆ ಎತ್ತುಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಕೆಲ ಶ್ರೀಮಂತ ರೈತರು ಟ್ರ್ಯಾಕ್ಟರ್‌ಗಳ ಮೊರೆ ಹೋಗಿದ್ದರೆ, ಬಡ ರೈತರು ತಮ್ಮ ಮಕ್ಕಳನ್ನೇ ಮುಂದಿರಿಸಿಕೊಂಡು ಕೃಷಿ ಕೆಲಸ ಮಾಡಿಸುತ್ತಿದ್ದಾರೆ.

ಜಮೀನಿನ ಉಳುಮೆ, ಬೀಜ ಬಿತ್ತನೆ ಮತ್ತು ಕಳೆಗಿಡಗಳ ನಿವಾರಣೆಗೆ ಎತ್ತುಗಳ ಬಳಕೆ ಅನಿವಾರ್ಯ. ಆದರೆ ಆರ್ಥಿಕವಾಗಿ ಚೈತನ್ಯ ಹೊಂದಿರದ ಕೆಲ ರೈತರು ಬಾಡಿಗೆಗೆ ಎತ್ತುಗಳನ್ನು ತರುತ್ತಿದ್ದಾರೆ, ಕೆಲ ರೈತರು ತಮ್ಮ ಕುಟುಂಬ ಸದಸ್ಯರನ್ನೇ ಎತ್ತುಗಳನ್ನಾಗಿ ಮಾಡಿಕೊಂಡು ಕೆಲಸ ಮಾಡಿಸುತ್ತಿದ್ದಾರೆ.

ತಾಲ್ಲೂಕಿನ ಕೇತೇನಹಳ್ಳಿ ಸಮೀಪದ ಸಾದೇನಹಳ್ಳಿ ಗ್ರಾಮದಲ್ಲಿ ರೈತ ಲಕ್ಷ್ಮಿನಾರಾಯಣ ಅವರು ಬಡವರಾಗಿದ್ದು, ಬಾಡಿಗೆಗೆ ಎತ್ತುಗಳನ್ನು ತರುವಷ್ಟು ಆರ್ಥಿಕವಾಗಿ ಶಕ್ತರಲ್ಲ. ಈ ಕಾರಣದಿಂದಾಗಿ ಮಕ್ಕಳು ಅಥವಾ ಕುಟುಂಬ ಸದಸ್ಯರ ನೆರವಿನಿಂದ ಕೃಷಿ ಕೆಲಸ ಮಾಡುತ್ತಾರೆ.

‘ತಾತಾ ಮತ್ತು ತಂದೆಯವರ ಕಾಲದಿಂದಲೂ ನಾವು ಕೃಷಿಯನ್ನೇ ನಂಬಿ ಬದುಕುತ್ತಿದ್ದೇವೆ. ಜಮೀನಿನಲ್ಲಿ ಬೆಳೆದ ಬೆಳೆ ಮಾರಾಟ ಮಾಡಿ, ಜೀವನ ನಡೆಸುತ್ತಿದ್ದೇವೆ. ಆದರೆ ₹ 40 ಸಾವಿರದಿಂದ ₹ 80ಸಾವಿರ ಮೌಲ್ಯದ ಜೋಡಿ ಎತ್ತು ಸಾಕುವಷ್ಟು ಶಕ್ತಿಯಿಲ್ಲ. ದಿನಪೂರ್ತಿ ಕೃಷಿ ಕೆಲಸ ಮಾಡಿದರೂ ಹೊಟ್ಟೆ ತುಂಬುವಷ್ಟು ಆಹಾರ ಸಿಗುವುದಿಲ್ಲ. ಇನ್ನೂ ಎತ್ತುಗಳಿಗೆ ಎಲ್ಲಿಂದ ಆಹಾರ ನೀಡುವುದು’ ಎಂದು ಸಾದೇನಹಳ್ಳಿ ರೈತ ಲಕ್ಷ್ಮಿನಾರಾಯಣ ತಿಳಿಸಿದರು.

‘ಮಗನಿಗೆ ಶಾಲೆ ರಜೆಯಿದ್ದಾಗ ಅಥವಾ ಕುಟುಂಬ ಸದಸ್ಯರು ಬಿಡುವಿದ್ದಾಗ, ಅವರ ನೆರವು ಪಡೆಯುತ್ತೇನೆ. ಜಮೀನಿನಲ್ಲಿ ಬೆಳೆದಿರುವ ಕಳೆಗಿಡಗಳನ್ನು ನಿವಾರಿಸಲು ಮತ್ತು ಇತರೆ ಕೃಷಿ ಚಟುವಟಿಕೆ ಕೈಗೊಳ್ಳಲು ಕುಟುಂಬ ಸದಸ್ಯರು ನೆರವಾಗುತ್ತಾರೆ’ ಎಂದು ಅವರು ತಿಳಿಸಿದರು.

‘ಬಡರೈತರು ಜಮೀನು ಹೊಂದಿದ್ದಾರೆಯಾದರೂ ಉತ್ತಮ ರೀತಿಯಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುವಷ್ಟು ಶಕ್ತಿ ಅವರಿಗಿಲ್ಲ. ಬೇರೆ ಬೇರೆ ಗ್ರಾಮಗಳಲ್ಲಿ ₹ 1,400ಕ್ಕೆ ಸಿಗುವ ಬಾಡಿಗೆ ಜೋಡಿ ಎತ್ತುಗಳನ್ನು ತರಲಾಗದಷ್ಟು ಬಡರೈತರು ಇದ್ದಾರೆ. ಕುಗ್ರಾಮಗಳಲ್ಲಿ ವಾಸವಿರುವ ಅಂತಹ ರೈತರಿಗೆ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯಗಳು ದೊರೆಯುತ್ತಿಲ್ಲ’ ಎಂದು ಕನ್ನಡನಾಡು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ವೇಣುಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಡ ರೈತರಿಗೆ ನೆರವಾಗಲೆಂದೇ ಕೆಲ ವರ್ಷಗಳ ಹಿಂದೆ ಸರ್ಕಾರದ ವತಿಯಿಂದಲೇ ಎತ್ತುಗಳನ್ನು ನೀಡಲಾಗುತಿತ್ತು. ಆದರೆ ಈಗ ಯಾವ ಯೋಜನೆಯಲ್ಲೂ ರೈತರಿಗೆ ಎತ್ತು ಸಿಗುತ್ತಿಲ್ಲ. ಬ್ಯಾಂಕ್‌ನಿಂದ ಸಾಲ ಮಾಡಿಕೊಂಡು ರೈತರು ಟ್ರ್ಯಾಕ್ಟರ್‌ ಖರೀದಿಸಬೇಕು ಇಲ್ಲವೇ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿಕೊಂಡು ಎತ್ತುಗಳನ್ನು ಕೊಂಡುಕೊಳ್ಳಬೇಕು. ಇಂತಹ ಪರಿಸ್ಥಿತಿಯಲ್ಲಿ ರೈತರು ಏನು ಮಾಡಲು ಸಾಧ್ಯ’ ಎಂದು ಅವರು ಪ್ರಶ್ನಿಸಿದರು.
*
ಎತ್ತುಗಳ ಯೋಜನೆ ಸ್ಥಗಿತ
ಕೃಷಿ ಇಲಾಖೆ ವತಿಯಿಂದ ಎತ್ತು ಮತ್ತು ಎತ್ತಿನ ಗಾಡಿ ಯೋಜನೆ ಜಾರಿಯಲ್ಲಿತ್ತು. ಆದರೆ 2006–07ರಲ್ಲಿ ಯೋಜನೆ ಸ್ಥಗಿತಗೊಳಿಸಲಾಯಿತು. ಆಗಿನಿಂದ ಯಾರಿಗೂ ಸಹ ಎತ್ತುಗಳನ್ನು ನೀಡುತ್ತಿಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಜಿ.ಅನೂಪ್‌ ತಿಳಿಸಿದರು.

ಇತ್ತೀಚಿನ ವರ್ಷಗಳಲ್ಲಿ ಎತ್ತಿನಗಾಡಿಗಳ ಬಳಕೆ ಕಡಿಮೆಯಾಗಿದೆ. ಎತ್ತಿನಗಾಡಿಗಳ ಸಂಖ್ಯೆಯೂ ಕ್ಷೀಣಿಸಿದೆ. ಹೀಗಾಗಿ ಯಾರೂ ಸಹ ಅರ್ಜಿ ಹಾಕಿಲ್ಲ. ಯೋಜನೆಯು ಜಾರಿಯಲ್ಲಿರದ ಕಾರಣ ನಮ್ಮಿಂದಲೂ ಏನೂ ಮಾಡಲಾಗುವುದಿಲ್ಲ ಎಂದು ಅವರು ತಿಳಿಸಿದರು.

ಎತ್ತುಗಳು ಬೇಕಿದ್ದಲ್ಲಿ ಬ್ಯಾಂಕ್‌ನಿಂದ ಸಾಲ ಪಡೆಯಬೇಕು. ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಂಪರ್ಕಿಸಿ ಉತ್ತಮ ಎತ್ತುಗಳನ್ನು ಖರೀದಿಸಬಹುದು ಎಂದು ಅವರು ತಿಳಿಸಿದರು.
*
ಗ್ರಾಮೀಣ ಪ್ರದೇಶದಲ್ಲಿರುವ ಬಡ ರೈತರನ್ನು ಗುರುತಿಸಿ, ಅವರ ನೆರವಿಗೆ ಸರ್ಕಾರ ಮುಂದಾಗಬೇಕು. ಕೃಷಿ ಪ್ರಧಾನವಾಗಿರುವ ನಮ್ಮ ದೇಶದಲ್ಲಿ ರೈತರಿಗೆ ನೆರವಾಗುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು.
–ವೇಣುಗೋಪಾಲ್‌,
ಜಿಲ್ಲಾ ಘಟಕದ ಕಾರ್ಯದರ್ಶಿ, ಕನ್ನಡನಾಡು ರಾಜ್ಯ ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.