ADVERTISEMENT

ಎಸ್‌ಐ ನಾಗೇಂದ್ರ ಪ್ರಸಾದ್‌ ಅಮಾನತು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2017, 10:01 IST
Last Updated 8 ಮಾರ್ಚ್ 2017, 10:01 IST

ಚಿಕ್ಕಬಳ್ಳಾಪುರ: ಕರ್ತವ್ಯ ಲೋಪದ ಆರೋಪದ ಮೇಲೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್) ಇನ್‌ಸ್ಪೆಕ್ಟರ್‌ ಎನ್‌.ಎಲ್‌.ನಾಗೇಂದ್ರ ಪ್ರಸಾದ್‌ ಅವರನ್ನು ಅಮಾನತು ಮಾಡಿ ಎಸ್ಪಿ ಎನ್.ಚೈತ್ರಾ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಚೈತ್ರಾ, ‘ಪ್ರತಿ ಸೋಮವಾರ ನಡೆಯುವ ಕವಾಯತಿಗೆ ಡಿಎಆರ್ ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬ ಕಾನ್‌ಸ್ಟೆಬಲ್‌, ಅಧಿಕಾರಿಗಳು ಹಾಜರಾಗಬೇಕು. ಕವಾಯತಿಗೆ ಹಾಜರಾಗದವರು ಮತ್ತು ತಪ್ಪು ಮಾಡುವ ಕಾನ್‌ಸ್ಟೆಬಲ್‌ಗಳನ್ನು ಡಿಎಆರ್ ಎಸ್‌ಐ ನನ್ನ ಎದುರು ಹಾಜರುಪಡಿಸಬೇಕಿತ್ತು. ಆದರೆ ಅವರು ಆ ಕೆಲಸ ಮಾಡಿಲ್ಲ’ ಎಂದು ತಿಳಿಸಿದರು.

‘ಕವಾಯತಿಗೆ ಅರ್ಧದಷ್ಟು ಅಧಿಕಾರಿಗಳು ಹಾಜರಾಗುತ್ತಿಲ್ಲ. ನಾಗೇಂದ್ರ ಪ್ರಸಾದ್‌ ಅವರು ಡಿವೈಎಸ್ಪಿ, ಸರ್ಕಲ್‌ ಇನ್‌ಸ್ಪೆಕ್ಟರ್‌ ಅನೇಕ ಬಾರಿ ತಪ್ಪಿಸಿಕೊಂಡರೂ ನನ್ನ ಗಮನಕ್ಕೆ ತಂದಿಲ್ಲ. 15 ತಿಂಗಳಿಂದ ನನ್ನ ಎದುರು ಅವರು ಒಬ್ಬರನ್ನು ಕೂಡ ಹಾಜರು ಪಡಿಸಿಲ್ಲ. ಹೀಗಾಗಿ ಕರ್ತವ್ಯಲೋಪದ ಆರೋಪದ ಮೇಲೆ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಹೇಳಿದರು.

‘ಡಿಎಆರ್‌ ಸಿಬ್ಬಂದಿ ಕೆಲವರು ನನ್ನ ಅನುಮತಿ ಪಡೆಯದೆ ತಿಂಗಳಾನುಗಟ್ಟಲೇ ಕರ್ತವ್ಯಕ್ಕೆ ಹಾಜರಾಗಿಲ್ಲ. ಅಂತಹವರನ್ನು ನನ್ನ ಗಮನಕ್ಕೆ ತರದೇ ಕರ್ತವ್ಯಕ್ಕೆ ಸೇರಿಸಿಕೊಂಡಿದ್ದಾರೆ. ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಕಳುಹಿಸಿಲ್ಲ. ಇಲಾಖೆಯ ಶಿಸ್ತು ಉಲ್ಲಂಘನೆ ಮಾಡಿರುವ ಕಾರಣಕ್ಕೆ ಈ ಕ್ರಮಕೈಗೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.