ADVERTISEMENT

ಕಾಂಗ್ರೆಸ್ ತಂತ್ರಗಾರಿಕೆಗೆ ಬಲಿಯಾಗದಿರಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2017, 4:47 IST
Last Updated 10 ಏಪ್ರಿಲ್ 2017, 4:47 IST

ಚಿಕ್ಕಬಳ್ಳಾಪುರ: ‘ಕಾಂಗ್ರೆಸ್ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಹಿಂದೂ ಮುಸ್ಲಿಮರ ನಡುವೆ ಭಿನ್ನಾಭಿಪ್ರಾಯ ತಂದೊಡ್ಡುತ್ತ, ಮುಸ್ಲಿಮರಲ್ಲಿ ಬಿಜೆಪಿ ಬಗ್ಗೆ ಅಪನಂಬಿಕೆ ಹುಟ್ಟಿಸುವ ಕೆಲಸ ಮಾಡುತ್ತಿದೆ’ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಅಜೀಮ್ ಆರೋಪಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಚಿಕ್ಕಬಳ್ಳಾಪುರ ತಾಲ್ಲೂಕು ಘಟಕದ ಕಾರ್ಯಕಾರಣಿ ಸಭೆಯಲ್ಲಿ  ಮಾತನಾಡಿದರು.

‘ಕಾಂಗ್ರೆಸ್ ಮತ ಬ್ಯಾಂಕ್‌ಗಾಗಿ ಹಿಂದು ಮುಸ್ಲಿಮರ ನಡುವೆ ವೈಷಮ್ಯ ಮೂಡಿಸುತ್ತ ಬರುತ್ತಿದೆ. ಸಣ್ಣ ಸಣ್ಣ ಘಟನೆಗಳನ್ನು ಕೂಡ ದೊಡ್ಡದಾಗಿ ಬಿಂಬಿಸುತ್ತ ಜನರನ್ನು ವಿಭಜಿಸುವ ಕೆಲಸ ಮಾಡುತ್ತಿದೆ. ಈ ತಂತ್ರಗಾರಿಕೆಗೆ ಅಲ್ಪಸಂಖ್ಯಾತರು ಬಲಿಯಾಗಬಾರದು. ಅದಕ್ಕಾಗಿಯೇ ರಾಜ್ಯದಾದ್ಯಂತ ಸಂಚರಿಸಿ ಕಾಂಗ್ರೆಸ್‌ನ ಕುತಂತ್ರವನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದರು.

‘ಕಳೆದ 11 ತಿಂಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 7.500 ಕಾರ್ಯಕರ್ತರನ್ನು ಬಿಜೆಪಿಯಲ್ಲಿ ವಿವಿಧ ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಸುಮಾರು 27 ಸಾವಿರ ಮುಸ್ಲಿಮ್  ಕುಟುಂಬಗಳು ಬಿಜೆಪಿ ಸದಸ್ಯತ್ವ ಪಡೆದಿವೆ. ದೇಶದ ಸರ್ವತೋಮುಖ ಅಭಿವೃದ್ದಿಯೊಂದಿಗೆ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಾಗೂ ದೇಶದ ಶಾಂತಿ ಸುವ್ಯವಸ್ಥೆಗೆ ಬಿಜೆಪಿ ಸರಕಾರ ಆದ್ಯತೆ ನೀಡುತ್ತಿದೆ’ ಎಂದು ತಿಳಿಸಿದರು.

‘ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಚುರುಕುಗೊಂಡಿವೆ. ಮೋದಿ ಅವರ ಜನಪರ ಕಾರ್ಯಗಳಿಗೆ ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶವೇ ಸಾಕ್ಷಿಯಾಗಿದೆ. ದೇಶದಲ್ಲಿ ಆರ್ಥಿಕ ಸ್ಥಿರತೆ ತರುವ ನಿಟ್ಟಿನಲ್ಲಿ ಗರಿಷ್ಠ ಮುಖ ಬೆಲೆಯ ನೋಟುಗಳ ರದ್ದುಪಡಿಸಿದ ಪರಿಣಾಮ ದೇಶದಲ್ಲಿ ನಿರುದ್ಯೋಗ ಪ್ರಮಾಣ ಕಡಿಮೆಯಾಗುತ್ತಿದೆ’ ಎಂದು ತಿಳಿಸಿದರು.

‘ಬಿಜೆಪಿ ದೇಶದಲ್ಲಿ 11 ಕೋಟಿ ಸದಸ್ಯತ್ವವನ್ನು ಹೊಂದುವ ಮೂಲಕ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಉತ್ತರ ಪ್ರದೇಶದಲ್ಲಿ ಮುಸ್ಲಿಮ್ ಅಭ್ಯರ್ಥಿಗಳು ಇಲ್ಲದಿದ್ದರೂ ಮುಸ್ಲಿಮರು ಬಿಜೆಪಿ ಮತ ನೀಡಿ ಗೆಲ್ಲಿಸಿದ್ದಾರೆ. ಇನ್ನಾದರೂ ಮುಸ್ಲಿಮರು ಕಾಂಗ್ರೆಸ್‌ ತಂತ್ರಗಾರಿಕೆಗೆ ಬಲಿಯಾಗದೆ ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿಯೊಂದಿಗೆ ಕೈಜೋಡಿಸಬೇಕು’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್,ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಸುಭ್ರೋತುಲ್ಲಾ ಷರೀಫ್, ಅಬ್ಬಾಸ್ ಖಾನ್, ಮುಖಂಡರಾದ ಚಂದ್ರಶೇಖರ್,  ಲಕ್ಷ್ಮಿ ನಾರಾಯಣ ಗುಪ್ತಾ, ಸೈಯದ್ ಇಬ್ರಾಹಿಂ, ಇಷ್ಪಕ್, ಜ್ಯೋತಿ, ಸಮೀವುಲ್ಲಾ, ಬಾಬಾ ಜಾನ್, ಹಸನ್ ರಾಜಾ, ಮಂಜುನಾಥ್, ರಾಮಣ್ಣ, ಲಕ್ಷ್ಮೀಪತಿ, ಹನುಮಂತಪ್ಪ ಕಾರ್ಯಕಾರಣಿಯಲ್ಲಿ ಉಪಸ್ಥಿತರಿದ್ದರು.

*
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಮುಸ್ಲಿಮರು ವಾಸ್ತವಾಂಶ ಅರಿತು ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಾರೆ ಎಂಬ ವಿಶ್ವಾಸವಿದೆ.
-ಅಬ್ದುಲ್ ಅಜೀಮ್, ಬಿಜೆಪಿ ಅಲ್ಪ ಸಂಖ್ಯಾತ  ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT