ADVERTISEMENT

ಕೃಷಿ ಸಾಲ ಮನ್ನಾಕ್ಕೆ ಆಗ್ರಹ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಮೇ 2017, 4:57 IST
Last Updated 23 ಮೇ 2017, 4:57 IST

ಚಿಕ್ಕಬಳ್ಳಾಪುರ: ರೈತರ ಸಾಲ ಮನ್ನಾ ಮಾಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ನಗರದಲ್ಲಿ ಸೋಮವಾರ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ನಗರದ ಜೂನಿಯರ್ ಕಾಲೇಜಿನಿಂದ ಬಿ.ಬಿ.ರಸ್ತೆ ಮೂಲಕ ತಾಲ್ಲೂಕು ಕಚೇರಿ ವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಳಿಕ ಉಪವಿಭಾಗಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ಮುಖಂಡೆ ಸುಷ್ಮಾ ಶ್ರೀನಿವಾಸ್, ‘ರೈತರ ಬದುಕಿದ್ದಾಗ ಯೋಗಕ್ಷೇಮ ವಿಚಾರಿಸದ ಸರ್ಕಾರ, ಆತ್ಮಹತ್ಯೆ ಮಾಡಿಕೊಂಡವರಿಗೆ ₹ 2 ಲಕ್ಷ ಪರಿಹಾರ ನೀಡುವ ಜತೆಗೆ ಮೃತ ರೈತನ ಪತ್ನಿಗೆ ಮಾಸಾಶನ ನೀಡುವ ಮೂಲಕ ರೈತರ ಆತ್ಮಹತ್ಯೆಗೆ ಪರೋಕ್ಷವಾಗಿ ಪ್ರೋತ್ಸಾಹ ನೀಡುತ್ತಿದೆ. ಇದು ನಾಚಿಕೆಗೇಡಿನ ಸಂಗತಿ’ ಎಂದು ಆರೋಪಿಸಿದರು.

ADVERTISEMENT

‘ಸಾವಿರಾರು ಕೋಟಿ ಸಾಲ ಮಾಡಿದ ಶ್ರೀಮಂತ ಉದ್ಯಮಿಗಳನ್ನು ರಕ್ಷಿಸುವ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡಿ ಅನ್ನದಾತರನ್ನು ರಕ್ಷಿಸಲು ಸಾಧ್ಯವಿಲ್ಲವೆ? ಬಯಲು ಸೀಮೆ ಭಾಗಕ್ಕೆ ಶಾಶ್ವತ ನೀರಾವರಿ ವ್ಯವಸ್ಥೆ ಮಾಡಿಕೊಟ್ಟರೆ ಆತ್ಮಹತ್ಯೆ ಅವಕಾಶ ಇರುವುದಿಲ್ಲ. ರೈತರು ನೆಮ್ಮದಿಯಿಂದ ಬದುಕುತ್ತಾರೆ’ ಎಂದು ತಿಳಿಸಿದರು.

ಮುಖಂಡ ಬಿ.ನಾರಾಯಣಸ್ವಾಮಿ ಮಾತನಾಡಿ, ‘ಈ ಭಾಗದ ಜನಪ್ರತಿನಿಧಿಗಳು ಕೃಷಿಗಾಗಿ ನಿರಂತರ ವಿದ್ಯುತ್‌ ಒದಗಿಸುವಲ್ಲಿ, ಬಗರ್ ಹುಕುಂ ಸಾಗುವಳಿ ಚೀಟಿ ವಿತರಣೆಯಲ್ಲಿ ವಿಫಲರಾಗಿದ್ದಾರೆ.  ಸಂಸದ ವೀರಪ್ಪ ಮೊಯಿಲಿ ಅವರು ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಎತ್ತಿನಹೊಳೆ ಯೋಜನೆ ಕುರಿತಂತೆ ಆಡಿದ ಮಾತುಗಳನ್ನು ಮರೆತು ಇದೀಗ ಹೋದಲ್ಲೆಲ್ಲ ಒಂದೊಂದು ಬಗೆಯ ಹೇಳಿಕೆ ನೀಡುತ್ತಿದ್ದಾರೆ.

ಇಂತಹ ಮತಿ ಭ್ರಮಣೆ ಸಂಸದರು ನಮಗೆ ಬೇಕಾ’ ಎಂದು ಪ್ರಶ್ನಿಸಿದರು. ‘ಮೊಯಿಲಿ ಅವರು ಬಯಲು ಸೀಮೆ ಜನರ ಜೀವನದ ಜತೆ ಚೆಲ್ಲಾಟಆಡುವುದು ಬಿಡಬೇಕು. ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಎಲ್ಲಾ ಶಾಸಕರು ಒಂದು ತಿಂಗಳ ಒಳಗೆ ಸಾಗುವಳಿ ಚೀಟಿ ವಿತರಿಸುವ ಕೆಲಸ ಮುಗಿಸಬೇಕು. ಜತೆಗೆ ಶಾಶ್ವತ ನೀರಾವರಿ ವಿಚಾರವಾಗಿ ಧ್ವನಿ ಎತ್ತಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆ ವೇಳೆ ತಕ್ಕ ಪಾಠ ಕಲಿಸಬೇಕಾಗುತ್ತದೆ’ ಎಂದು ಅವರು ಹೇಳಿದರು.

ಇನ್ನೊಬ್ಬ ಮುಖಂಡ ಲಕ್ಷ್ಮೀ ನಾರಾಯಣಪ್ಪ ಮಾತನಾಡಿ, ‘ತಮ್ಮ ಜೀವನವನ್ನೇ ಪಣಕ್ಕಿಟ್ಟು ದುಡಿಯುವ ರೈತರಿಗೆ ಸರ್ಕಾರಗಳು ಸೂಕ್ತ ಗೌರವ ನೀಡುತ್ತಿಲ್ಲ. ಗಡಿಯಲ್ಲಿ ಹುತಾತ್ಮನಾಗುವ ಯೋಧನಿಗೆ ಸಕಲ ಸರ್ಕಾರಿ ಮರ್ಯಾದೆ ತೋರುವ ಸರ್ಕಾರಗಳು, ರೈತ ಸಾವಿನ ವಿಚಾರದಲ್ಲಿ ನಿಷ್ಕಾಳಜಿ ತೋರುತ್ತಿವೆ.

ರೈತರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಅನ್ನದಾತನಿಗೆ ಗೌರವ ಕೊಡದ ಸರ್ಕಾರ, ರಾಜಕಾರಣಿಗಳನ್ನು ನಾವು ಯಾವ ರೀತಿ ಗೌರವಿಸಬೇಕು’ ಎಂದು ಪ್ರಶ್ನಿಸಿದರು. ರೈತಸಂಘದ ಪದಾಧಿಕಾರಿಗಳಾದ ಮಂಜುನಾಥ್, ಎನ್.ಪ್ರಸಾದ್, ಶ್ರೀನಿವಾಸ್ ಎನ್.ಲಕ್ಷ್ಮೀನರಸಪ್ಪ, ವೆಂಕಟೇಶಪ್ಪ,  ಮಹಾಲಕ್ಷ್ಮಮ್ಮ, ಲಕ್ಷ್ಮೀದೇವಮ್ಮ, ಪದ್ಮಾ, ರಾಧಿಕಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

* * 

ರಾಜಕಾರಣಿಗಳು ದುಡ್ಡು ಮಾಡುವುದರಲ್ಲಿ ರಾಜ್ಯಕ್ಕೆ ರ್‌್ಯಾಂಕ್‌ ಪಡೆದಿದ್ದು, ಆಡಳಿತ ನಡೆಸುವಲ್ಲಿ ಎಲ್‌ಕೆಜಿ ಮಕ್ಕಳಿಗಿಂತ ಕಡೆಯಾಗಿದ್ದಾರೆ
ಬಿ.ನಾರಾಯಣಸ್ವಾಮಿ
ರೈತಸಂಘದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.