ADVERTISEMENT

ಕೆರೆ ಒಡಲು ಬಗೆದು ಮಣ್ಣು, ಮರಳು ಲೂಟಿ

ಅಮಾನಿಕೆರೆ ಜೀವಕ್ಕೆ ಸಂಜೀವಿನಿಯೂ ವರವಾಗಲಿಲ್ಲ

ಎಂ.ಚಂದ್ರಪ್ಪ
Published 28 ಸೆಪ್ಟೆಂಬರ್ 2016, 11:06 IST
Last Updated 28 ಸೆಪ್ಟೆಂಬರ್ 2016, 11:06 IST

ಚಿಕ್ಕಬಳ್ಳಾಪುರ: ನಗರದ ಮುಕುಟ ಮಣಿಯಂತಿರುವ ಕಂದವಾರ ಅಮಾನಿಕೆರೆ ಅಭಿವೃದ್ಧಿ ಕಾಣದೇ ಸೊರಗಿದೆ. ಜಲಮೂಲ ರಕ್ಷಣೆಗೆ ಸರ್ಕಾರ, ಜಾರಿಗೆ ತಂದಿರುವ ಕೆರೆ ಸಂಜೀವಿನಿ ಯೋಜನೆ ಕೂಡ ಕೆರೆಗೆ ಪುನರ್ ಜೀವ ನೀಡಿಲ್ಲ.

ಪ್ರವಾಸಿ ತಾಣಗಳಾದ ನಂದಿಬೆಟ್ಟ, ಸರ್‌ ಎಂ.ವಿಶ್ವೇಶ್ವರಯ್ಯ ಅವರ ಹುಟ್ಟೂರು ಮುದ್ದೇನಹಳ್ಳಿ, ನಂದಿಯ ಭೋಗ ನಂದೀಶ್ವರ ದೇವಾಲಯ ಸೇರಿದಂತೆ ದೊಡ್ಡಬಳ್ಳಾಪುರ ಮಾರ್ಗವಾಗಿ ಬರುವವರಿಗೆ ಇದು ಪ್ರವೇಶದ್ವಾರದಂತಿದೆ. ಆದರೆ ಕೆರೆ ಏರಿಯ ಬುಡದಲ್ಲಿ ಬರುವ ಪ್ರಯಾಣಿಕರು, ಪ್ರವಾಸಿಗರಿಗೆ ಜಿಲ್ಲೆಯ ಲಕ್ಷಣಗಳೇ ಕಾಣದಂತಾಗಿದೆ.
ಸುಮಾರು ಒಂದೂವರೆ ಕಿ.ಮೀ ಉದ್ದದ ಕೆರೆಯ ಏರಿ ನಿರ್ಜೀವ ಸ್ಥಿತಿಯಲ್ಲಿದೆ. ನಗರ ಸೌಂದರ್ಯ ಹೆಚ್ಚಿಸಲು ಪ್ರಯತ್ನಗಳೇ ನಡೆದಿಲ್ಲ.

ಕೆರೆಯಲ್ಲಿ ಮಣ್ಣು, ಮರಳು ತೆಗೆದು ಸೃಷ್ಟಿಯಾಗಿರುವ ಹಳ್ಳಗಳು ಗಾಯಗಳಂತೆ ಗೋಚರಿಸುತ್ತಿವೆ. ಕೆರೆಯ ಏರಿ ಮೇಲೆ ನಿಂತು ನೋಡಿದರೆ ಒಂದೆಡೆ ಹಚ್ಚ ಹಸುರಿನ ಬೆಳೆ( ಖಾನೆ), ಮತ್ತೊಂದೆಡೆ ಬೆಟ್ಟದ ಸಾಲುಗಳ  ಚೆಲುವು ಎಲ್ಲರನ್ನು ಸೆಳೆಯುತ್ತದೆ.

ವಾಯು ವಿಹಾರಿಗರ ನಡಿಗೆ: ವಾಹನಗಳ ಆರ್ಭಟ, ರಸ್ತೆಗಳಲ್ಲಿ ದೂಳಿನ ಮಜ್ಜನದಿಂದ ಜರ್ಜರಿತರಾಗಿರುವ ನಗರವಾಸಿಗಳು ಕೊಂಚ ನೆಮ್ಮದಿ, ಆಹ್ಲಾದಕರ ವಾತಾವರಣಕ್ಕಾಗಿ ಪ್ರತಿನಿತ್ಯ ಮುಂಜಾನೆ, ಸಂಜೆ ಏರಿ ಮೇಲೆ ವಾಯು ವಿವಾಹ ಮಾಡುತ್ತಾರೆ. ಆದರೆ, ಮಳೆಗಾಲದಲ್ಲಿ ಯಾರೊಬ್ಬರೂ ಇತ್ತ ಹೆಜ್ಜೆ ಇಡುವುದಿಲ್ಲ. ಕೆರೆ ಏರಿ ಪ್ರದೇಶವನ್ನು ಸುಂದರ ಉದ್ಯಾನದ ರೀತಿ ನಿರ್ಮಿಸಿ, ಸಿಮೆಂಟ್‌ ಇಟ್ಟಿಗೆಯ ನೆಲಹಾಸು ಮಾಡಿದರೆ ನಗರ ಪ್ರವೇಶ ಸುಂದರವಾಗಿರುತ್ತದೆ. ಜತೆಗೆ ನಗರವಾಸಿಗಳಿಗೆ ಉತ್ತಮ ವಾತಾವರಣವೂ ಸಿಗಲಿದೆ.

‘ಕಂದವಾರ ಅಮಾನಿಕೆರೆ ನಗರ ಅಂಟಿಕೊಂಡಿರುವ ಏಕೈಕ ಹಾಗೂ ದೊಡ್ಡ ಕೆರೆ. ಇದನ್ನು ಅಭಿವೃದ್ಧಿಪಡಿಸಬೇಕು ಎಂಬ ಕಲ್ಪನೆ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರವಾಗಲಿ, ಸಣ್ಣ  ನೀರಾವರಿ ಇಲಾಖೆಗಾಗಲಿ ಬಾರದಿರುವುದು ದುರದೃಷ್ಟಕರ’ ಎಂದು ಕಂದವಾರಪೇಟೆ ನಿವಾಸಿ ಸತ್ಯನಾರಾಯಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.
ಕೆರೆ ಪ್ರದೇಶ ಒತ್ತುವರಿ: ಕಂದವಾರ ಗ್ರಾಮದ ಕೆರೆಯ ಭಾಗದಲ್ಲಿ ಹಲವರು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದಾರೆ. ಕೆರೆಯ ಅಚ್ಚುಕಟ್ಟು ಪ್ರದೇಶ 518.70 ಎಕರೆ ವಿಸ್ತೀರ್ಣವಿದ್ದು, ಅಲ್ಲಲ್ಲಿ ಒತ್ತುವರಿ ನಡೆದಿದೆ.

ಒತ್ತುವರಿ ಜಾಗ ತೆರವು ಮಾಡುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹಲವು ಬಾರಿ ಸೂಚನೆ ನೀಡಿದರೂ ನಗರಸಭೆ ಅನುದಾನ ಪಡೆದೇ ಮನೆ ಕಟ್ಟಲಾಗುತ್ತಿದೆ.
ಕೆರೆಯ ಗಡಿ ಗುರುತಿಸಲು ಇಲಾಖೆ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಬೆಟ್ಟದ ನೀರೆ ಗತಿ
‘518.70 ಎಕರೆ ವಿಸ್ತೀರ್ಣದಲ್ಲಿ ಕೆರೆಯ ಅಚ್ಚುಕಟ್ಟು ಪ್ರದೇಶವಿದೆ.  ಇದು ಪಾಪಾಗ್ನಿ ಬ್ರಹ್ಮದೇವರ ಆಶ್ರಮದಿಂದ ಮೇಲನಹಳ್ಳಿ, ಕಣಜೇನಹಳ್ಳಿ, ಕಣಿವೆ ತಿಪ್ಪೇನಹಳ್ಳಿವರೆಗೂ ಹಬ್ಬಿದೆ. ಕಳವಾರ ಬೆಟ್ಟಗಳ ಸಾಲು, ರಂಗಸ್ಥಳ, ರಂಗಧಾಮ ಕೆರೆ, ನಂದಿ ಬೆಟ್ಟದ ಸಾಲಿನಿಂದ ಬರುವ ಮಳೆ ನೀರು ಕೆರೆ ಸೇರುತ್ತದೆ’ ಎಂದು ನಿವೃತ್ತ ನೀರುಗಂಟಿ ಕಂದವಾರದ ಗ್ರಾಮದ ರಾಮದಾಸ್‌ ಪ್ರಜಾವಾಣಿಗೆ ತಿಳಿಸಿದರು.

‘ಆದರೆ ಹಲವೆಡೆ ಕಾಲುವೆಗಳು ಸರಿಯಾಗಿ ಇಲ್ಲದ ಕಾರಣ ನೀರು ಸರಾಗವಾಗಿ ಹರಿಯುತ್ತಿಲ್ಲ’ ಎಂದರು.

ಜಿಲ್ಲೆಯಲ್ಲಿ 28 ಕೆರೆಗಳ ಅಭಿವೃದ್ಧಿ
‘ಕೆರೆ ಪ್ರದೇಶದಲ್ಲಿ ಹೊಸದಾಗಿ ಏರಿಯ ಬಂಡ್‌ ನಿರ್ಮಿಸಲಾಗಿದೆ. ತೂಬು ಸರಿಪಡಿಸಲಾಗಿದೆ. ಆದರೆ, ಕಂದವಾರ ಅಮಾನಿಕೆರೆಯು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಕಾರಣ ಕೆರೆ ಸಂಜೀವಿನಿ ಯೋಜನೆಗೆ ಆಯ್ಕೆ ಮಾಡಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ಮಂಜುನಾಥ್‌ ಪ್ರಜಾವಾಣಿಗೆ ತಿಳಿಸಿದರು.

‘ಜಿಲ್ಲೆಯಲ್ಲಿ 1600 ಕೆರೆಗಳಿದ್ದು, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ 400, ಪಂಚಾಯಿತಿ ವ್ಯಾಪ್ತಿಗೆ 200 ಕೆರೆಗಳು ಬರುತ್ತವೆ. ಪಂಚಾಯಿತಿ ವ್ಯಾಪ್ತಿಯ ಕೆರೆಗಳಲ್ಲಿ 28 ಕೆರೆಗಳನ್ನು ಕೆರೆ ಸಂಜೀವಿನಿ ಯೋಜನೆಗೆ ಆಯ್ಕೆ ಮಾಡಲಾಗಿದೆ’ ಎಂದರು.

‘ಈ ಹಿಂದೆ ಕಂದವಾರ ಅಮಾನಿಕೆರೆಯ ಕೋಡಿ ಹೊಡೆದಿತ್ತು.ಈಗ ಅದನ್ನು ಸರಿಪಡಿಸಲಾಗಿದೆ. ಪ್ರವಾಹ ಹಾಗೂ ನೈಸರ್ಗಿಕ ವಿಕೋಪಗಳಿಂದಾಗುವ ಹಾನಿಗೆ ಪ್ರತ್ಯೇಕ ನಿಧಿ ಇದೆ. ಆ ಹಣದಿಂದಲೇ ಕೆರೆಯ ಅಭಿವೃದ್ಧಿ ಕೈಗೊಳ್ಳಬಹುದು’ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT