ADVERTISEMENT

ಕ್ರಿಯಾಶೀಲತೆ ಕಳೆದುಕೊಳ್ಳುತ್ತಿರುವ ಮಕ್ಕಳು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 4:49 IST
Last Updated 14 ಏಪ್ರಿಲ್ 2017, 4:49 IST

ಶಿಡ್ಲಘಟ್ಟ: ‘ಹಿಂದೆ ರಜೆ ಬಂದರೆ ಮಕ್ಕಳು ವಿವಿಧ ಆಟೋಟಗಳು, ಬಾವಿಗಳಲ್ಲಿ ಈಜುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ ಈಗ ಕೇವಲ ಟಿವಿ ಮುಂದೆ ಕುಳಿತುಕೊಂಡು ತಮ್ಮ ಕ್ರಿಯಾಶೀಲತೆ ಕಳೆದುಕೊಳ್ಳುತ್ತಿದ್ದಾರೆ’ ಎಂದು ಮುಖ್ಯ ಶಿಕ್ಷಕ ಎನ್‌.ಕೃಷ್ಣಮೂರ್ತಿ ಆತಂಕ ವ್ಯಕ್ತಪಡಿಸಿದರು.

ನಗರದ ಚಿಂತಾಮಣಿ ರಸ್ತೆಯಲ್ಲಿರುವ ಉಲ್ಲೂರುಪೇಟೆ ಸರ್ಕಾರಿ ಶಾಲೆಯ ಆವರಣದಲ್ಲಿ ಗುರುವಾರ ದಿವ್ಯ ಭಾರತ್‌ ಕರಾಟೆ ಡೋ ಅಸೋಸಿಯೇಷನ್‌ ಏರ್ಪಡಿಸಿದ್ದ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

‘ಕೇವಲ ಪುಸ್ತಕ ಓದಿನಲ್ಲಿ ತಲ್ಲೀನರಾದರೆ ಸಾಲದು. ದೈಹಿಕವಾಗಿಯೂ ಸದೃಢರಾಗಬೇಕು. ಅದಕ್ಕೆ ಸೂಕ್ತ ಮಾರ್ಗದರ್ಶನ ಅಗತ್ಯ. ಆದ್ದರಿಂದ ಬೇಸಿಗೆ ಶಿಬಿರವನ್ನು ಮಕ್ಕಳು ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.

ಲಯನ್‌ ಕ್ರೀಡಾ ಸಂಸ್ಥೆಯ ಗೌರವಾಧ್ಯಕ್ಷ ಮುನಿರಾಜು ಮಾತನಾಡಿ, ‘ಎಳೆಯ ವಯಸ್ಸಿನಲ್ಲಿಯೇ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ಮಕ್ಕಳನ್ನು ಪ್ರೋತ್ಸಾಹಿಸಬೇಕು’ ಎಂದು ಹೇಳಿದರು.

ದಿವ್ಯ ಭಾರತ್‌ ಕರಾಟೆ ಡೋ ಅಸೋಸಿಯೇಷನ್‌ ಶಿಕ್ಷಕ ವಿ.ಅರುಣ್‌ಕುಮಾರ್‌ ಮಾತನಾಡಿ, ‘ಪ್ರತಿ ದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಉಚಿತ ಶಿಬಿರವನ್ನು ನಡೆಸಲಾಗುತ್ತದೆ. ಹತ್ತು ದಿನಗಳ ಕಾಲ ನಡೆಯುವ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಕಲಿತದ್ದನ್ನು ಪ್ರದರ್ಶಿಸಲಿದ್ದಾರೆ’ ಎಂದರು. ರಂಗಕರ್ಮಿ ಮುನಿರಾಜು, ಶಿಕ್ಷಕರಾದ ದಾಕ್ಷಾಯಿಣಿ, ಚಂದ್ರಕಲಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.