ADVERTISEMENT

ಗೂಳೂರು ಗ್ರಾಮಸ್ಥರಿಂದ ವಿರೋಧ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 11:26 IST
Last Updated 7 ಜುಲೈ 2017, 11:26 IST

ಬಾಗೇಪಲ್ಲಿ: ತಾಲ್ಲೂಕಿನ ಗೂಳೂರು ಹೋಬಳಿ ಸದ್ದುಪಲ್ಲಿ ಕ್ರಾಸ್‌ನಲ್ಲಿ ಮದ್ದಲ ಖಾನ ಗ್ರಾಮದ ಕೆರೆಗೆ ನೀರು ಹಾಯಿಸಲು ನಡೆಯುತ್ತಿರುವ ಕಾಲುವೆ ಕಾಮಗಾರಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಕಾರಣ ಕಾಮಗಾರಿ ಸ್ಥಗಿತವಾಗಿದೆ.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ₹ 30 ಲಕ್ಷ ವೆಚ್ಚದಲ್ಲಿ ಕಾಲುವೆ ನಿರ್ಮಾಣಕ್ಕೆ ಭೂಮಿ ಪೂಜೆ  ನೆರವೇರಿಸಿದ್ದರು. ಜೆಸಿಬಿ ಮೂಲಕ  ಕಾಮಗಾರಿ ಪ್ರಾರಂಭಿಸಲಾ ಗಿತ್ತು. ಗೂಳೂರು, ಚನ್ನರಾಯನಪಲ್ಲಿ, ನಂಜಿರೆಡ್ಡಿಪಲ್ಲಿ ಗ್ರಾಮಸ್ಥರು ಏಕಾಏಕಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಬಂದು ಕಾಮಗಾರಿಗೆ ತಡೆಯೊಡ್ಡಿದ್ದಾರೆ.

ಈ ವೇಳೆ ಎಪಿಎಂಸಿ ನಿರ್ದೇಶಕ ಟಿ.ನರಸಿಂಹಪ್ಪ ಮಾತನಾಡಿ, ‘ಗೂಳೂರು ಗ್ರಾಮದ ದೊಡ್ಡ ಕೆರೆಯನ್ನು  ಬ್ರಿಟಿಷರ ಆಡಳಿತದಲ್ಲಿ ನಿರ್ಮಾಣ ಮಾಡಲಾಗಿತ್ತು. ಈ ಕೆರೆಗೆ ಕಾಲವೆಯ ಮೂಲಕ ನೀರು ಬರುತ್ತದೆ. ಆದರೆ ಈಗ ಈ ಕಾಲುವೆಯ ದಿಕ್ಕುತಪ್ಪಿಸಲು ಈ ಹೊಸ ಕಾಮಗಾರಿಗೆ ಚಾಲನೆ ನೀಡಲಾಗಿದೆ’ ಎಂದು ದೂರಿದರು.

ADVERTISEMENT

‘ಗೂಳೂರು ಕೆರೆಗೆ ನೀರು ಹರಿದು ಬರುವ ಏಕೈಕ ಕಾಲುವೆಯನ್ನು ಮುಚ್ಚಿ ಮದ್ದಲಖಾನ ಕೆರೆ ಕಡೆಗೆ ತಿರುಗಿಸಿದರೆ ಈ ಭಾಗದ ರೈತರ ಪರಿಸ್ಥಿತಿ ಕಷ್ಟವಾಗಲಿದೆ. ಕಾಮಗಾರಿಗೆ ನಕಾಶೆ ಇಲ್ಲದಿದ್ದರೂ ಮಾನದಂಡಗಳನ್ನು ಉಲ್ಲಂಘಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ’ ಎಂದು ಆರೋಪಿಸಿದರು. 

ಗೂಳೂರು ಗ್ರಾಮದ ಮುಖಂಡ ರಾಮಪ್ಪ ಮಾತನಾಡಿ, ‘ಶತಮಾನ ಗಳಿಂದಲೂ ಸದ್ದುಪಲ್ಲಿ ಬೆಟ್ಟಗಳ ನೀರು  ಪ್ರಕೃತಿದತ್ತವಾಗಿ ಗೂಳೂರು ದೊಡ್ಡ ಕೆರೆಗೆ ಹರಿಯುತ್ತಿದೆ. ಇಂತಹ ಅವೈಜ್ಞಾನಿಕ ಕಾಮಗಾರಿಯಿಂದ ರೈತರನ್ನು ಬೀದಿಪಾಲು ಮಾಡುವ ಹುನ್ನಾರ ಅಡಗಿದೆ’ ಎಂದರು.

  ಜೆಸಿಬಿ ಮಾಲೀಕರ ಮತ್ತು ಗ್ರಾಮಸ್ಥರ ನಡುವೆ ಜಟಾಪಟಿ ನಡೆಯಿತು. ತಿಮ್ಮಂಪಲ್ಲಿ ಗ್ರಾಮ ಪಂಚಾಯತಿ  ಸದಸ್ಯ ರಾಮಚಂದ್ರರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಗೆ ಏಕೆ ಅಡ್ಡಿಪಡಿಸುತ್ತಿದ್ದೀರಾ? ಎಂದರು. ಇದರಿಂದ ಮತ್ತಷ್ಟು ಕೆರಳಿದ ಗ್ರಾಮಸ್ಥರು ಇದಕ್ಕೂ ನಿನಗೂ ಸಂಬಂಧವಿಲ್ಲ. ನಮ್ಮ ಗ್ರಾಮದ ಕೆರೆಗೆ ಹೋಗುವ ಕಾಲುವೆ ಇದು. ತಂಟೆಗೆ ಬರಬೇಡ ಎಂದು ಗದರಿದರು. ರಾಮಚಂದ್ರರೆಡ್ಡಿ ಹಾಗೂ ಗ್ರಾಮಸ್ಥರ ನಡುವೆ ಅವಾಚ್ಯ ಶಬ್ದಗಳ ನಿಂದನೆ ನಡೆಯಿತು.

ಗ್ರಾಮಸ್ಥರ ಒತ್ತಡಕ್ಕೆ ಮಣಿದ ಕಾಲುವೆಗೆ ತೆಗೆದಿದ್ದ ಗುಂಡಿ ಮುಚ್ಚಲಾಯಿತು. ಪಿ.ವೆಂಕಟರಾಯಪ್ಪ, ನರಸಿಂಹರೆಡ್ಡಿ, ಆವುಲಪ್ಪ, ನಂಜು ಂಡಪ್ಪ, ಸುಂದರರಾಮರೆಡ್ಡಿ, ರಾಮಪ್ಪ, ವಿರೂಪಾಕ್ಷ, ರಾಮಕೃಷ್ಣಾರೆಡ್ಡಿ, ನರೇಂದ್ರ, ಜಿ.ಬಿ.ವೆಂಕಟೇಶ್, ಆದಿ ನಾರಾಯಣಪ್ಪ, ನರಸಿಂಹಪ್ಪ, ಶಂಕರರೆಡ್ಡಿ, ಅಮಾನುಲ್ಲಾ, ಭಾಷ ಸಾಬ್, ನಾರಾಯಣಪ್ಪ, ಚನ್ನರಾಯನ ಪಲ್ಲಿ ದೇವೇಂದ್ರ, ನಂಜಿರೆಡ್ಡಿಪಲ್ಲಿ ಸೋಮಶೇಖರ್, ಶಿವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.