ADVERTISEMENT

ಗೆಲ್ಲಿಸಿದರೆ ಉಚಿತ ಮದ್ಯ, ಮಟನ್!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಸೋಜಿಗದ ಕರಪತ್ರ, ಜನಸಾಮಾನ್ಯರಲ್ಲಿ ಚರ್ಚೆಗೆ ಎಡೆಮಾಡಿದ ಪದವೀಧರನ ಪ್ರಣಾಳಿಕೆಗಳು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 7:13 IST
Last Updated 7 ಏಪ್ರಿಲ್ 2018, 7:13 IST

ಚಿಕ್ಕಬಳ್ಳಾಪುರ: ‘ಪ್ರಿಯ ಮತದಾರರೇ, ನನ್ನನ್ನು ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಿಸಿ ಶಾಸಕನಾಗಿ ಮಾಡಿ. ನಾನು ನಿಮಗೆ ಉಚಿತವಾಗಿ ಮೂರು ಹೊತ್ತು ಊಟ, ವಾರಕ್ಕೆ 2 ಬಾರಿ ಮಟನ್‌ ಮತ್ತು ಚಿಕನ್‌, 18 ವರ್ಷದ ದಾಟಿದ ಎಲ್ಲರಿಗೂ ತಿಂಗಳ ಲೆಕ್ಕದಲ್ಲಿ ಮದ್ಯ ಕೂಡ ನೀಡುತ್ತೇನೆ. ಜತೆಗೆ ಹಬ್ಬಕ್ಕೆ ಬಟ್ಟೆ, ಬಸ್ ಪ್ರಯಾಣ, ವೈದ್ಯಕೀಯ ಸೇವೆ, ವಿದ್ಯಾರ್ಥಿಗಳಿಗೆ ಶಿಕ್ಷಣ, ಮೊಬೈಲ್‌ಗೆ ಕರೆನ್ಸಿ ಜತೆಗೆ ಡಾಟಾ, ಮದುವೆಗೆ ಮಾಂಗಲ್ಯ, ಟಿ.ವಿಗೆ ಕೇಬಲ್ ಸಂಪರ್ಕ ಎಲ್ಲವೂ ಪುಕ್ಕಟ್ಟೆಯಾಗಿ ನೀಡುತ್ತೇನೆ.

ಇದು ಯಾವುದೇ ಹಾಸ್ಯ ಸಿನಿಮಾದ ಚಿತ್ರಕಥೆಯಲ್ಲಿರುವ ಸಂಭಾಷಣೆಯಲ್ಲ. ವಿಧಾನಸಭೆ ಚುನಾವಣೆಯಲ್ಲಿ ಚಿಂತಾಮಣಿ ಕ್ಷೇತ್ರದಿಂದ ಕಣಕ್ಕಿಳಿಯಲು ನಿರ್ಧರಿಸಿರುವ ಸುರೇಶ್‌ ಯನಮಲಪಾಡಿ ಅವರ ಪ್ರಣಾಳಿಕೆಯಲ್ಲಿರುವ ಭರವಸೆಗಳು! ಸದ್ಯ ಈ ಪ್ರಣಾಳಿಕೆಯ ಕರಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶಾಶ್ವತ ನೀರಾವರಿ ಯೋಜನೆ ಮೂರು ವರ್ಷಗಳಲ್ಲಿ ಅನುಷ್ಠಾನಗೊಳಿಸಿ ರೈತ ವರ್ಗದ ವಲಸೆ ತಪ್ಪಿಸುವುದು, ಚಿಂತಾಮಣಿ ತಾಲ್ಲೂಕಿನಲ್ಲಿ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಮತ್ತು ಕೈಗಾರಿಕೆಗಳನ್ನು ಸ್ಥಾಪಿಸುವುದು ಮತ್ತು ನೂಲು ಮತ್ತು ಜವಳಿ ಕಾರ್ಖಾನೆ ಸ್ಥಾಪಿಸುವುದು ಇವರ ಮೊದಲ ಆದ್ಯತೆಗಳಂತೆ.

ADVERTISEMENT

ಬಿಎಸ್‌ಸಿ ಪದವೀಧರರಾಗಿರುವ ಸುರೇಶ್ ಅವರು ಸದ್ಯ ಚಿಂತಾಮಣಿ ಮತ್ತು ಹೊಸಕೋಟೆಯಲ್ಲಿ ‘ಟಾಂಟಾಂ ಬುಕ್ಕಿಂಗ್’ ಎಂಬ ಸಾರಿಗೆಗೆ ಸಂಬಂಧಿಸಿದ ಉದ್ಯಮವೊಂದನ್ನು ನಡೆಸುತ್ತಿರುವುದಾಗಿ ಹೇಳುತ್ತಾರೆ.

‘ಈ ಎಲ್ಲ ಪ್ರಣಾಳಿಕೆಗಳನ್ನು ಈಡೇರಿಸಲು ಸಾಧ್ಯವೆ’ ಎಂಬ ಪ್ರಶ್ನೆಗೆ, ‘ಸಾಧ್ಯವೇ ಎಂದರೆ ನಾನೂ ಹೇಗೋ ಮಾಡುತ್ತೇನೆ. ತುಂಬಾ ಜನ ಪಡಿತರ ಅಕ್ಕಿ ಗುಣಮಟ್ಟ ಸರಿಯಿಲ್ಲ ಎಂದು ಊಟಕ್ಕೆ ಬಳಸದೆ ಮಾರಾಟ ಮಾಡುತ್ತಿದ್ದಾರೆ. ಅದಕ್ಕಾಗಿ ಪಡಿತರ ವ್ಯವಸ್ಥೆಯನ್ನೇ ರದ್ದುಪಡಿಸಿ ಕ್ಯಾಂಟಿನ್ ತೆರೆಯುತ್ತೇನೆ. ಅಲ್ಲಿ ಕ್ಷೇತ್ರದ ಜನರಿಗೆ ದಿನಕ್ಕೆ 3 ಬಾರಿ ಊಟ ಹಾಗೂ 2 ಬಾರಿ ಕಾಫಿ, ಟಿ ಜತೆಗೆ ವಾರಕ್ಕೆ 2 ಬಾರಿ ಒಬ್ಬರಿಗೆ 300 ಗ್ರಾಂ ನಂತೆ ಮಟನ್‌ ಮತ್ತು ಚಿಕನ್‌ ಊಟ ಒದಗಿಸುತ್ತೇನೆ’ ಎನ್ನುತ್ತಾರೆ.

‘ಇದಕ್ಕೆಲ್ಲ ಕಾನೂನಿನಲ್ಲಿ ಅವಕಾಶ ಇದೆಯೇ?’ ಎಂದರೆ, ‘ನಮ್ಮ ತಾಲ್ಲೂಕಿನ ಜನ ನನ್ನನ್ನು ಬೆಂಬಲಿಸಿದಾಗ ನಮ್ಮ ತಾಲ್ಲೂಕಿನ ಒಳಗೆ ನಾವು ಏನೂ ಬೇಕಾದರೂ ಮಾಡಿಕೊಳ್ಳುತ್ತೇವೆ. ಇದಕ್ಕೆಲ್ಲ ಖರ್ಚಾಗುವ ಹಣಕ್ಕೆ ಏನು ಮಾಡಬೇಕು ಎನ್ನುವುದಕ್ಕೆ ನಮ್ಮದೇ ಆದ ಚಿಂತನೆಗಳಿವೆ. ಇದು ಒಂದೆರಡು ದಿನಗಳ ಪ್ರಣಾಳಿಕೆಯಲ್ಲ. ಆರು ತಿಂಗಳಿಂದ ರೂಪಿಸಿಕೊಂಡು ಬಂದಿದ್ದೇವೆ’ ಎಂದು ತಿಳಿಸಿದರು.

‘ಗೆದ್ದ ಮೇಲೆ ಮದ್ಯ ಎಷ್ಟು ಪ್ರಮಾಣ ಕೊಡಬೇಕು ಎಂದು ನಿರ್ಧರಿಸುತ್ತೇವೆ. ತಾಲ್ಲೂಕು ಹತ್ತಿ ಬೆಳೆಯುವುದರಲ್ಲಿ ಮುಂಚೂಣಿಯಲ್ಲಿದೆ. ನಾವೇ ಜವಳಿ ಗಿರಣಿ ಆರಂಭಿಸಿ ಉಚಿತವಾಗಿ ಎಲ್ಲರಿಗೂ ಹಬ್ಬಕ್ಕೆ ಬಟ್ಟೆ ನೀಡುತ್ತೇವೆ. ಉಚಿತ ಕರೆನ್ಸಿ, ಡಾಟಾ ಎಷ್ಟು ನೀಡಬೇಕು ಎನ್ನುವುದು ಗೆದ್ದ ಮೇಲೆ ನಿರ್ಧರಿಸುತ್ತೇವೆ. ಸದ್ಯ ಕೇಬಲ್ ಆಪರೇಟರ್‌ಗಳು ಬಹಳಷ್ಟು ಸುಲಿಗೆ ಮಾಡುತ್ತಿದ್ದಾರೆ. ಅದನ್ನು ತಪ್ಪಿಸಲು ಪುಕ್ಕಟ್ಟೆ ನಾವೇ ಕೇಬಲ್ ಸಂಪರ್ಕ ನೀಡುತ್ತೇವೆ’ ಎನ್ನುತ್ತಾರೆ.

‘ಮಾದರಿ ನೀತಿ ಸಂಹಿತೆ ಜಾರಿ ಇರುವ ಸಂದರ್ಭದಲ್ಲಿ ಈ ರೀತಿ ಮತದಾರರಿಗೆ ಭರವಸೆ ನೀಡುವುದು ನೀತಿ ಸಂಹಿತೆ ಉಲ್ಲಂಘನೆಯಲ್ಲವೆ?’ ಎಂದರೆ, ‘ಜಿಲ್ಲಾ ಚುನಾವಣೆ ನೋಡಲ್ ಅಧಿಕಾರಿಗಳಿಗೆ ಪ್ರಣಾಳಿಕೆ ಮುದ್ರಣಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದೇವೆ. ಇನ್ನೂ ಅನುಮತಿ ಸಿಕ್ಕಿಲ್ಲ. ಅಷ್ಟರೊಳಗೆ ಈ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ. ಅದನ್ನು ಯಾರು ಮಾಡಿದ್ದಾರೋ ಗೊತ್ತಿಲ್ಲ’ ಎಂದು ಸುರೇಶ್ ತಿಳಿಸಿದರು.

**

ಮಾದರಿ ನೀತಿ ಸಂಹಿತೆ ಸಂದರ್ಭದಲ್ಲಿ ಈ ರೀತಿ ಪ್ರಣಾಳಿಕೆ ಬಿಡುಗಡೆ ಮಾಡುವುದು ಅಪರಾಧ, ಸಂಬಂಧಪಟ್ಟ ಚುನಾವಣಾಧಿಕಾರಿಗೆ ಕ್ರಮಕ್ಕೆ ಸೂಚನೆ ನೀಡುತ್ತೇನೆ – ದೀಪ್ತಿ ಕಾನಡೆ, ಜಿಲ್ಲಾ ಚುನಾವಣಾಧಿಕಾರಿ

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.