ADVERTISEMENT

ಜನವಸತಿ ಪರಿಗಣಿಸಿ ಕ್ರಿಯಾಯೋಜನೆ

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸದನ ಸಮಿತಿ ಅಧ್ಯಕ್ಷ ಶಿವಮೂರ್ತಿ ನಾಯಕ್‌

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 4:51 IST
Last Updated 14 ಏಪ್ರಿಲ್ 2017, 4:51 IST

ಚಿಕ್ಕಬಳ್ಳಾಪುರ:  ‘ಕಂದಾಯ ಗ್ರಾಮಗಳಾಗಿ ಪರಿವರ್ತನೆ ಹೊಂದುವ ದಾಖಲೆ ರಹಿತ ಜನವಸತಿ ಪ್ರದೇಶಗಳಲ್ಲಿರುವ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡು ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಎಸ್‌ಸಿ,ಎಸ್‌ಟಿ) ಕಲ್ಯಾಣಕ್ಕಾಗಿ ಕ್ರಿಯಾಯೋಜನೆ ರೂಪಿಸಲು ಸರ್ಕಾರ ಚಿಂತನೆ ನಡೆಸಿದೆ’ ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸದನ ಸಮಿತಿ ಅಧ್ಯಕ್ಷ ಶಿವಮೂರ್ತಿ ನಾಯಕ್‌ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾವ ಪ್ರದೇಶಗಳಲ್ಲಿ ಎಷ್ಟು ಸಂಖ್ಯೆಯಲ್ಲಿ ಎಸ್‌ಸಿ, ಎಸ್‌ಟಿ ಜನರು ವಾಸಿಸುತ್ತಿದ್ದಾರೆ. ಆಯಾ ಭಾಗಕ್ಕೆ ಎಷ್ಟು ಹಣ ಮೀಸಲಿಡಬೇಕು?

ಎಂತಹ ಯೋಜನೆಗಳನ್ನು ರೂಪಿಸಬೇಕು? ಎನ್ನುವಂತಹ ವೈಜ್ಞಾನಿಕವಾದ, ವಿಶ್ಲೇಷಣಾತ್ಮಕ ಕ್ರಿಯಾಯೋಜನೆ ರೂಪಿಸುವ ಆಸೆ ಇದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಯೋಜನಾ ಆಯೋಗ ಸೇರಿ ಅನುದಾನ ನೀಡಿದರೆ ಕಲ್ಯಾಣ ಯೋಜನೆಗಳು ಯಶಸ್ವಿಯಾಗುತ್ತವೆ’ ಎಂದು ಹೇಳಿದರು.

‘ದಾಖಲೆ ರಹಿತ ಜನವಸತಿ ಪ್ರದೇಶಗಳಲ್ಲಿರುವ ಜನರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸರ್ಕಾರ, ರಾಜ್ಯದಾದ್ಯಂತ ದಾಖಲೆ ಇಲ್ಲದೇ ಇರುವ ಸುಮಾರು 58 ಸಾವಿರಕ್ಕೂ ಹೆಚ್ಚು ತಾಂಡಾಗಳು, ಹಾಡಿಗಳು, ಹಟ್ಟಿಗಳು, ಕ್ಯಾಂಪ್‌ಗಳು, ಕಾಲೊನಿಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸುವ ಕ್ರಾಂತಿಕಾರಿ ಮಸೂದೆಗೆ ಜಾರಿಗೆ ತರಲು ಹೊರಟಿದೆ’ ಎಂದರು.

‘ಕಂದಾಯ ಸಚಿವರು ಮಂಡಿಸಿದ ಕರ್ನಾಟಕ ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕ 2016 ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿದೆ. ಸದ್ಯ ವಿಧೇಯಕಕ್ಕೆ ರಾಜ್ಯಪಾಲರು ಸಹಿ ಹಾಕುವುದು ಬಾಕಿ ಇದೆ. 

ಮಸೂದೆಗೆ ಅಂಕಿತವಾದ ಬಳಿಕ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಉಪಸ್ಥಿತಿಯಲ್ಲಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ’ ಎಂದು ಹೇಳಿದರು.

‘ಈ ಪರಿಷ್ಕೃತ ಕಾಯ್ದೆಯಿಂದಾಗಿ ಕೃಷಿ ಕಾರ್ಮಿಕರು, ಅಲೆಮಾರಿಗಳು, ಅರೆ ಅಲೆಮಾರಿಗಳು, ಗುಳೆ ಹೋಗುವವರು, ಪರಿಶಿಷ್ಟ ಜಾತಿ, ಅರಣ್ಯವಾಸಿಗಳಿಗೆ ತುಂಬಾ ಅನುಕೂಲವಾಗಲಿದೆ. ವಸತಿ ಭೂಮಿಯ ಹಕ್ಕುದಾರಿಕೆ ಪತ್ರ ದೊರೆತರೆ ಜನರಿಗೆ ಬ್ಯಾಂಕ್‌ ಸಾಲ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಕಾರಿಯಾಗಲಿದೆ. ಹೊಸ ಕಂದಾಯ ಗ್ರಾಮ ರಚನೆ ಕುರಿತಾಗಿ ಈಗಾಗಲೇ ಸರ್ಕಾರ ವಿಶೇಷ ಕೋಶ ರಚನೆ ಮಾಡಿದೆ’ ಎಂದು ತಿಳಿಸಿದರು.

‘ಹೊಸ ಕಾನೂನು ಜಾರಿಗೆ ಬಂದ ಬಳಿಕ ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳನ್ನು ಸಮೀಕ್ಷೆ ಮಾಡಿ ಮಾಹಿತಿ ಕ್ರೋಡೀಕರಿಸಲಾಗುತ್ತದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಕಬಳಿಕೆ ಮಾಡುವವರಿಗೆ ಕಡಿವಾಣ ಹಾಕಲಾಗುತ್ತದೆ’ ಎಂದರು.

ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಕಾನಡೆ ಮಾತನಾಡಿ, ‘ಜಿಲ್ಲೆಯಲ್ಲಿ ಹೊಸದಾಗಿ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು 204 ಮಜರೆ ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆ ಪೈಕಿ ಈಗಾಗಲೇ 98 ಗ್ರಾಮಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅದರಲ್ಲಿ ಸರ್ಕಾರ 73 ಗ್ರಾಮಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಬಾಕಿ ಉಳಿದ 25 ಗ್ರಾಮಗಳ ಪ್ರಾಥಮಿಕ ಅಧಿಸೂಚನೆ ಕೆಲವೆ ದಿನಗಳಲ್ಲಿ ಹೊರಬೀಳಲಿದೆ’ ಎಂದು ಹೇಳಿದರು.

‘ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಭೂಮಾಪಕರು 106 ಗ್ರಾಮಗಳ ಕಡತಗಳನ್ನು ತಯಾರಿಸುತ್ತಿದ್ದಾರೆ. ಅವುಗಳನ್ನು ಹಂತ ಹಂತವಾಗಿ ಸರ್ಕಾರಕ್ಕೆ ಕಳುಹಿಸಿ ಕೊಡಲಾಗುತ್ತದೆ. ಒಂದೂವರೆ ತಿಂಗಳಲ್ಲಿ ಬಾಕಿ ಇರುವ ಎಲ್ಲಾ ಮಜರೆ ಗ್ರಾಮಗಳ ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಸುತ್ತೇವೆ’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ಮಂಜುನಾಥ್, ಭೂದಾಖಲೆಗಳ ಉಪನಿರ್ದೇಶಕ ವಿ.ಅಜ್ಜಪ್ಪ, ಡಿವೈಎಸ್ಪಿ ಎಂ.ಎಲ್.ಪುರುಷೋತ್ತಮ್ ಇದ್ದರು.

*
ವಾಸಿಸುವವನಿಗೆ ಮನೆಯ ಒಡೆತನ ನೀಡುವ ಮಹತ್ವದ ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ  ವಿಧೇಯಕ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ.
–ಶಿವಮೂರ್ತಿ ನಾಯಕ್‌,
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸದನ ಸಮಿತಿ ಅಧ್ಯಕ್ಷ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.