ADVERTISEMENT

ಜನಸ್ಪಂದನೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲ

ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿದ ರೈತಸಂಘದ ಪದಾಧಿಕಾರಿಗಳು, ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2017, 11:32 IST
Last Updated 11 ಫೆಬ್ರುವರಿ 2017, 11:32 IST
ಬರ ಪರಿಹಾರ ಕಾಮಗಾರಿ ಅನುಷ್ಠಾನದಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಗುರುವಾರ ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.
ಬರ ಪರಿಹಾರ ಕಾಮಗಾರಿ ಅನುಷ್ಠಾನದಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಗುರುವಾರ ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.   

ಚಿಕ್ಕಬಳ್ಳಾಪುರ: ಬರ ಪರಿಹಾರ ಕಾಮಗಾರಿ ಅನುಷ್ಠಾನ ಮತ್ತು ಜನಸಾಮಾನ್ಯರ ನೋವಿಗೆ ಸ್ಪಂದಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಗುರುವಾರ ನಗರದಲ್ಲಿರುವ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿ, ಪ್ರತಿಭಟಿಸಿದರು.

ನಗರದ ಬಿ.ಬಿ.ರಸ್ತೆಯಲ್ಲಿರುವ ಶನಿ ಮಹಾತ್ಮಾ ದೇವಸ್ಥಾನದಿಂದ ಬೃಹತ್ ಮೆರವಣಿಗೆಯಲ್ಲಿ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಜಿಲ್ಲಾಡಳಿತದ ಭವನದ ಎದುರು ಕುಳಿತು ಜಿಲ್ಲಾಧಿಕಾರಿ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ‘ಸತತ 6 ವರ್ಷಗಳಿಂದ ಜಿಲ್ಲೆಯ ರೈತರು ಬರಗಾಲ ಅನುಭವಿಸುತ್ತ ಸಂಕಷ್ಟದಲ್ಲಿದ್ದಾರೆ. ಇಷ್ಟಾದರೂ ಈವರೆಗೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ. ಜಿಲ್ಲಾಧಿಕಾರಿ ಅವರು ರೈತರ ಸಭೆ ಕರೆದು ಸಮಸ್ಯೆಗಳನ್ನು ಆಲಿಸಬೇಕು ಎಂದು ಒತ್ತಾಯಿಸಿ ಉಸ್ತುವಾರಿ ಸಚಿವರಿಗೆ 3 ಬಾರಿ ಮನವಿ ಸಲ್ಲಿಸಿದರೂ ಈವರೆಗೆ ಜಿಲ್ಲಾಧಿಕಾರಿ ಸಭೆ ಕರೆದಿಲ್ಲ.

ಅನ್ನದಾತರ ಮೇಲೆ ಕರುಣೆ, ಮಮತೆ ಇಲ್ಲದ ಮೇಲೆ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳು ಜಿಲ್ಲೆಯಲ್ಲಿ ಏಕಿರಬೇಕು’ ಎಂದು ಖಾರವಾಗಿ ಪ್ರಶ್ನಿಸಿದರು.

ADVERTISEMENT

‘ಮಳೆ, ಬೆಳೆ ಇಲ್ಲದೆ ರೈತರು, ಕೂಲಿ ಕಾರ್ಮಿಕರು ಕೆಲಸ ಅರಸಿಕೊಂಡು ಪರಸ್ಥಳ, ಹೊರರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಅನೇಕ ಗ್ರಾಮಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ. ದನಕರುಗಳಿಗೆ ಮೇವು ದೊರೆಯುತ್ತಿಲ್ಲ. ನೆರೆಯ ಕೋಲಾರ ಜಿಲ್ಲೆಯಲ್ಲಿ 10 ಸಾವಿರ ಮೇವಿನ ಕಿಟ್ ವಿತರಿಸಿದರೂ ನಮ್ಮಲ್ಲಿ ಮಾತ್ರ ಈವರೆಗೆ ಒಂದು ಕಾಳು ಸಹ ನೀಡಿಲ್ಲ. ಜಿಲ್ಲಾಡಳಿತಕ್ಕೆ ರೈತಪರ ಕಾಳಜಿಯೇ ಇಲ್ಲ’ ಎಂದು ಕಿಡಿಕಾರಿದರು.

‘ಜಿಲ್ಲೆಯ ಎಲ್ಲ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ರಿಯಲ್‌ ಎಸ್ಟೇಟ್‌ ಮಾಫಿಯಾ, ಭೂಗಳ್ಳರಿಗೆ ಅನುಕೂಲವಾಗುತ್ತಿದೆ ವಿನಾ ರೈತರ ಅಹವಾಲು ಆಲಿಸುವವರು ಇಲ್ಲ. ಇದಕ್ಕೆ ಜಿಲ್ಲಾಡಳಿತದ ವೈಫಲ್ಯವೇ ಕಾರಣ. ಜಿಲ್ಲಾಧಿಕಾರಿ ಮತ್ತು ಎಲ್ಲಾ ತಹಶೀಲ್ದಾರ್ ಅವರು ರೈತರ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ’ ಎಂದು ಆರೋಪಿಸಿದರು.

‘ಜಿಲ್ಲೆಯಲ್ಲಿ ಭೂಹೀನ ರೈತರಿಗೆ ಹಕ್ಕುಪತ್ರ ವಿತರಿಸುವ ಕೆಲಸವಾಗುತ್ತಿಲ್ಲ. ಹಕ್ಕುಪತ್ರ ನೀಡುವಲ್ಲಿ ಭ್ರಷ್ಟಾಚಾರ ಮೀತಿಮೀರಿದೆ. ರಾಜಕಾರಣಿಗಳ ಹಿಂಬಾಲಕರು ಅದರ ಲಾಭ ಮಾಡಿಕೊಳ್ಳುತ್ತಿದ್ದಾರೆ. ವಿದ್ಯುತ್‌ ಕಣ್ಣು ಮುಚ್ಚಾಲೆ ಹೆಚ್ಚಿರುವ ಕಾರಣ ರೈತರು, ವಿದ್ಯಾರ್ಥಿಗಳು ತೊಂದರೆ ಎದುರಿಸುತ್ತಿದ್ದಾರೆ. ಬೆಸ್ಕಾಂನವರು ಸಕಾಲಕ್ಕೆ ರೈತರಿಗೆ ಟ್ರಾನ್ಸ್‌ಫಾರ್ಮರ್‌ಗಳನ್ನು ನೀಡದೆ ಅಲೆದಾಡಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ಜಿಲ್ಲೆ ಬರಪರಿಹಾರ ಕಾಮಗಾರಿಗೆ ₹ 3.75 ಕೋಟಿ ಬಿಡುಗಡೆ ಮಾಡಿರುವುದಾಗಿ ಮುಖ್ಯಮಂತ್ರಿ ಅವರು ಮಾಧ್ಯಮಗಳಲ್ಲಿ ಪ್ರಚಾರ ಪಡೆಯುತ್ತಿದ್ದಾರೆ. ಇಲ್ಲಿ ನೋಡಿದರೆ ದನಕರುಗಳಿಗೆ ಮೇವು, ನೀರಿಲ್ಲ. ಕುಡಿಯಲು ನೀರು ಕೊಡದೇ ಇದ್ದ ಮೇಲೆ ಜಿಲ್ಲಾಡಳಿತ ಏಕೆ ಬೇಕು? ಇನ್ನು ಮುಂದಾದರೂ ಜಿಲ್ಲಾಧಿಕಾರಿ ಅವರು ರೈತರ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದೇ ಹೋದರೆ ರಾಜ್ಯಮಟ್ಟದಲ್ಲಿ ದೊಡ್ಡ ಚಳವಳಿ ನಡೆಸುವ ಯೋಜನೆ ರೂಪಿಸುತ್ತೇವೆ’ ಎಂದು ಹೇಳಿದರು.

ರೈತಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ, ‘ಬರ ನಿರ್ವಹಣೆ ಮತ್ತು ರೈತರ ಅಹವಾಲು ಆಲಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಜಿಲ್ಲಾಧಿಕಾರಿ ಅವರ ಬೇಜವಾಬ್ದಾರಿತನದಿಂದ ಕೆಳಹಂತದಲ್ಲಿರುವ ಎಸಿ, ತಹಶೀಲ್ದಾರ್‌ ಅವರು ಬರದ ನೆಪದಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಗ್ರಾಮಸಭೆಗಳಲ್ಲಿ ರೈತರನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿಲ್ಲ. ರಾಜಕಾರಣಿಗಳು ಮತ್ತವರ ಬೆಂಬಲಿಗರು ಮಾತ್ರ ಸಭೆ ನಡೆಸಿ ಸರ್ಕಾರಿ ಯೋಜನೆಗಳ ಲಾಭ ಪಡೆದುಕೊಳ್ಳುತ್ತಿದ್ದಾರೆ’ ಎಂದು ದೂರಿದರು.

‘ಅಧಿಕಾರಿಗಳು ದುಡ್ಡು ಮಾಡುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ತಾಲ್ಲೂಕು ಕಚೇರಿಗಳಲ್ಲಿ ಹಣ ನೀಡದ ಹೊರತು ರೈತರ ಯಾವುದೇ ಕೆಲಸಗಳು ಆಗುತ್ತಿಲ್ಲ. ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಂಘದ ವತಿಯಿಂದ ಬಹಿರಂಗ ಸಭೆ ಆಯೋಜಿಸಿದರೆ ಅಧಿಕಾರಿಗಳು ಕಳ್ಳರಂತೆ ಪಲಾಯನ ಮಾಡುತ್ತಾರೆ. ರೈತರ ವಿಚಾರದಲ್ಲಿ ಇದೇ ನಿರ್ಲಕ್ಷ್ಯ ಧೋರಣೆ ಮುಂದುವರಿದರೆ ಅಧಿಕಾರಿಗಳು ದೊಡ್ಡ ಮಟ್ಟದ ಹೋರಾಟ ನೋಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.