ADVERTISEMENT

ಜಲಮೂಲ ರಕ್ಷಣೆ ನಮ್ಮೆಲ್ಲರ ಹೊಣೆ

ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಕಡೆಗಳಲ್ಲಿ ವಿಶ್ವ ಜಲ ದಿನಾಚರಣೆ: ನೀರು ಸಂರಕ್ಷಣೆ, ಸಂಗ್ರಹದ ಪಾಠ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 4:47 IST
Last Updated 23 ಮಾರ್ಚ್ 2017, 4:47 IST

ಚಿಕ್ಕಬಳ್ಳಾಪುರ: ‘ಪ್ರಕೃತಿ ಸಮತೋಲನ ತಪ್ಪುತ್ತಿದೆ. ಇದರಿಂದ ಉಂಟಾಗುವ ದುಷ್ಪರಿಣಾಮಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ತುರ್ತಾಗಿ ಜಲಮೂಲಗಳನ್ನು ಪುನರುಜ್ಜೀವನ ಗೊಳಿಸುವ ಅಗತ್ಯವಿದೆ’ ಎಂದು ಹೆಚ್ಚು ವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ.ವಿ. ತುರಮರಿ ಪ್ರತಿಪಾದಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಬುಧವಾರ ಶಿಡ್ಲಘಟ್ಟ ರಸ್ತೆಯ ತಮ್ಮನಾಯಕನಹಳ್ಳಿ ಗೇಟ್‌ ಬಳಿ ಇರುವ ‘ಶೆಲ್’ ಸಿದ್ಧ ಉಡುಪು ತಯಾರಿಕೆ ಕಾರ್ಖಾನೆಯಲ್ಲಿ ಆಯೋಜಿಸಿದ್ದ ‘ವಿಶ್ವ ಜಲ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಕಲ ಜೀವ ರಾಶಿಗೂ ಜೀವಜಲವಾದ ನೀರನ್ನು ನಾವು ಇಂದು ಸಂರಕ್ಷಣೆ ಮಾಡದೆ ಹೋದರೆ ಮುಂದೊಂದು ದಿನ ಇಡೀ ಜೀವ ಸಂಕುಲವೇ ವಿನಾಶದ ಅಂಚಿಗೆ ತಲುಪುವುದರಲ್ಲಿ ಅನುಮಾನ ವಿಲ್ಲ. ಆದ್ದರಿಂದ ನಾವು ಕೆರೆ, ಕುಂಟೆ ಸೇರಿದಂತೆ ಜಲ ಮೂಲಗಳಲ್ಲಿ ಮಳೆ ನೀರು ಸಂಗ್ರಹಿಸುವ ಜತೆಗೆ ನೀರನ್ನು ಮಿತವಾಗಿ ಬಳಸುವುದು ರೂಢಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಪರಿಸರದ ಮಹತ್ವ ಅರಿತಿದ್ದ ನಮ್ಮ ಪೂರ್ವಿಕರು ಪ್ರಕೃತಿಯನ್ನು ದೈವಿಕ ಭಾವನೆಯಿಂದ ಪೂಜಿಸುತ್ತಿದ್ದರು. ಆದರೆ ಇವತ್ತು ಪರಿಸರ ಸಂಪನ್ಮೂಲ ಮನುಷ್ಯನ ಸ್ವಾರ್ಥಕ್ಕೆ ಕೊಳ್ಳೆಯಾಗುತ್ತಿದೆ. ದಿನೇ ದಿನೇ ಕಾಡು ಕಡಿಮೆಯಾಗಿ ಕಾಂಕ್ರಿಟ್ ನಾಡು ತಲೆ ಎತ್ತುತ್ತಿದೆ. ಭವಿಷ್ಯದ ದೃಷ್ಟಿಯಿಂದ ಪ್ರತಿಯೊಬ್ಬರು ಪರಿಸರ ಕಾಪಾಡಿಕೊಳ್ಳಲು ಕಾಳಜಿ ವಹಿಸಬೇಕು’ ಎಂದರು.

ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್ ಮಾತನಾಡಿ, ‘ಜನಸಂಖ್ಯೆ ಏರಿಕೆಯಿಂ ದಾಗಿ ದಿನೇ ದಿನೇ ಕುಡಿಯುವ ನೀರಿನ ಬೇಡಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಅಂತರ್ಜಲ ಕುಸಿತವಾಗು ತ್ತಿರುವುದು ಆತಂಕಕಾರಿ ಸಂಗತಿ. ಆದರಿಂದ ಇಂದಿನಿಂದಲೇ ನೀರು ಉಳಿಸುವ ನಿಟ್ಟಿನಲ್ಲಿ ಯೋಚಿಸಬೇಕಾದ ಅಗತ್ಯವಿದೆ’ ಎಂದರು.

‘ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳುವ ಜತೆಗೆ ನೀರಿನ ಮಿತ ಬಳಕೆ ಮಾಡಬೇಕಿದೆ. ಇಂಗುಗುಂಡಿ, ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಿಸಬೇಕು. ಯುವಜನರು ಜಲ ಮೂಲಗಳನ್ನು ಸ್ವಚ್ಛಗೊಳಿಸಿ ಮಳೆ ನೀರು ಸಂಗ್ರಹಿಸುವ ಕೆಲಸ ಮಾಡಬೇಕು. ಅಂದಾಗ ಮಾತ್ರ ಮುಂದಿನ ಪೀಳಿಗೆ ನೆಮ್ಮದಿಯಿಂದ ಬದುಕಲು ಸಾಧ್ಯ’ ಎಂದು ತಿಳಿಸಿದರು.

ಜಿಲ್ಲಾ ಪರಿಸರ ಅಧಿಕಾರಿ ಎಸ್. ಮಧುಸೂಧನ್, ‘ಕಾರ್ಖಾ ನೆಗಳ ತ್ಯಾಜ್ಯ ನೀರಿನಿಂದಾಗಿ ದೇಶದ ಬಹುತೇಕ ನದಿಗಳು ಕಲುಷಿತಗೊಂಡಿವೆ. ಕಾರ್ಖಾನೆಗಳ ತ್ಯಾಜ್ಯ ನೀರು ನದಿ ಸೇರದಂತೆ ಕಡಿವಾಣ ಹಾಕದ ಹೊರತು ಎಷ್ಟು ಕೋಟಿ ವೆಚ್ಚ ಮಾಡಿದರೂ ನದಿಗಳು ಸ್ವಚ್ಛವಾಗುವುದಿಲ್ಲ’ ಎಂದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾ ಧೀಶೆ ಎಸ್. ಶೋಭಾ, ವಕೀಲರ ಸಂಘದ ಉಪಾಧ್ಯಕ್ಷ ಎಚ್.ಸಿ. ಪಾಪಿರೆಡ್ಡಿ, ಪ್ರಧಾನ ಕಾರ್ಯದರ್ಶಿ ಆರ್. ಶ್ರೀನಿವಾಸ್, ಖಜಾಂಚಿ ಆರ್. ಮಟಮಪ್ಪ, ಶೆಲ್ ಕಾರ್ಖಾನೆಯ ಉದಯ್ ಪ್ರಸಾದ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಅರಣ್ಯ ದಿನ
ಬಾಗೇಪಲ್ಲಿ:
‘ಭೂ ಪ್ರದೇಶದ ಅರ್ಧದಷ್ಟು ಅರಣ್ಯವಿದ್ದರೆ ಜೀವ ಸಂಕುಲಕ್ಕೆ ಅನುಕೂಲವಾಲಿದೆ. ಆದರೆ ದೇಶದಲ್ಲಿ ಶೇ 19ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಇದರಿಂದ ವನ್ಯಜೀವಿಗಳು ಆತಂಕಕ್ಕೆ ಸಿಲುಕಿವೆ’ ಎಂದು ಪರಿಸರ ಅಭಿವೃದ್ಧಿ ಅಸೋಸಿಯೇಷನ್ ಅಧ್ಯಕ್ಷ ಬೂರಗಮಡಗು ಬಾಬು ವಿಷಾದಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪದವಿ  ವಸತಿ ನಿಲಯದಲ್ಲಿ ಬುಧವಾರ ನಡೆದ ವಿಶ್ವ ಅರಣ್ಯ ದಿನಾಚರಣೆ ಮತ್ತು ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅರಣ್ಯ ನಾಶದ ಪರಿಣಾಮ ಬರ ಎದುರಾಗಿದೆ. ವಾಹನಗಳ ದಟ್ಟಣೆಯು ಪರಿಸರದ ಮೇಲೆ ದುಷ್ಪರಿಣಾಮ ಬೀರಿದೆ. ಮನುಷ್ಯನಿಗೆ  ವಿವಿಧ ರೋಗ ಕಾಡುತ್ತಿವೆ. ವಿಶ್ವ ಪರಿಸರ ದಿನಾಚರಣೆ, ವಿಶ್ವ ಅರಣ್ಯ ದಿನಾಚರಣೆ ಮತ್ತು ವಿಶ್ವ ಜಲ ದಿನಾಚರಣೆಗಳು ಒಂದೇ ದಿನಕ್ಕೆ ಸೀಮಿತವಾಗಬಾರದು’ ಎಂದರು.

‘ಒಂದು ಮರ ಕಡಿದರೆ 20 ರಿಂದ 25 ಗಿಡ ನೆಡಬೇಕು ಎಂಬ ಪ್ರಜ್ಞೆ ಬೆಳೆಯ ಬೇಕು.ಗಿಡ ನೆಡುವ ಮೂಲಕ ಪೂರ್ವಿ ಕರು ಪರಿಸರ ರಕ್ಷಣೆಗೆ  ಪರಿಹಾರ ಕಂಡುಕೊಳ್ಳುತ್ತಿದ್ದರು. ಅದರೆ ಇಂದು ಅರಣ್ಯ ನಾಶ ಮಾಡುತ್ತಿದ್ದೇವೆ’ ಎಂದರು.

‘ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಹ್ಯಾದ್ರಿ ಸಂರಕ್ಷಣಾ ಸಂಚಯ ಮತ್ತು ಸಮಾನ ಮನಸ್ಕ ಸಂಘಟನೆಗಳ ಜೊತೆ ಸೇರಿ ಎತ್ತಿನಹೊಳೆ ತಿರುಗಿಸುವ ಸರ್ಕಾರದ ಯೋಜನೆಯ ವಿರುದ್ಧ ಚಳವಳಿ ನಡೆಸುತ್ತಿದಾರೆ. ಎತ್ತಿನ ಹೊಳೆ ಯೋಜನೆಯಿಂದ ಕರಾವಳಿಯ ಜನರಿಗೆ ಯಾವುದೇ ತೊಂದರೆಯಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.