ADVERTISEMENT

ದಾನ ಬಂದ ಭೂಮಿಯ ಬಗ್ಗೆ ಮುಖ್ಯ ಶಿಕ್ಷಕರ ಅಸಡ್ಡೆ!

ಈರಪ್ಪ ಹಳಕಟ್ಟಿ
Published 6 ಏಪ್ರಿಲ್ 2017, 11:08 IST
Last Updated 6 ಏಪ್ರಿಲ್ 2017, 11:08 IST
ದಾನ ಬಂದ ಭೂಮಿಯ ಬಗ್ಗೆ ಮುಖ್ಯ ಶಿಕ್ಷಕರ ಅಸಡ್ಡೆ!
ದಾನ ಬಂದ ಭೂಮಿಯ ಬಗ್ಗೆ ಮುಖ್ಯ ಶಿಕ್ಷಕರ ಅಸಡ್ಡೆ!   

ಚಿಕ್ಕಬಳ್ಳಾಪುರ:  ತಾಲ್ಲೂಕಿನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳ ಪೈಕಿ ಶೇ 71 ರಷ್ಟು ಶಾಲೆಗಳು ಉದಾರ ಮನಸ್ಸಿನ ದಾನಿಗಳು ನೀಡಿದ ದಾನದ ಜಾಗದಲ್ಲಿದ್ದು, ಈ ಪೈಕಿ ಭೂದಾನ ಪಡೆದ ಶಾಲೆಗಳ ಮುಖ್ಯ ಶಿಕ್ಷಕರು ಈವರೆಗೆ ದಾನದ ಭೂಮಿಯನ್ನು ಶಾಲೆ ಹೆಸರಿಗೆ ನೋಂದಾಯಿಸಿಕೊಳ್ಳುವ ಗೊಡವೆಗೆ ಹೋಗಿಲ್ಲ. ಅದರಿಂದಾಗಿ ಅನೇಕ ಕಡೆಗಳಲ್ಲಿ ಭೂವ್ಯಾಜ್ಯಗಳು ತಲೆದೋರಿ ಸಮಸ್ಯೆಗಳು ಉದ್ಭವವಾಗುತ್ತಿವೆ.

ತಾಲ್ಲೂಕಿನಲ್ಲಿ 332 ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. ಈ ಪೈಕಿ ಕೇವಲ 95 ಶಾಲೆಗಳು ಮಾತ್ರ ಸರ್ಕಾರಿ ಜಾಗದಲ್ಲಿವೆ. ಉಳಿದಂತೆ 237 ಶಾಲೆಗಳು ದಾನಿಗಳು ನೀಡಿದ ಜಾಗದಲ್ಲಿ ಅನೇಕ ದಶಕಗಳಿಂದ ಕಾರ್ಯನಿರ್ವಹಿಸುತ್ತ ಬರುತ್ತಿವೆ. ದಾನದ ಜಾಗದಲ್ಲಿರುವ ಶಾಲೆಗಳ ಪೈಕಿ ಎಷ್ಟು ಶಾಲೆಗಳ ಬಳಿ ಅಧಿಕೃತ ದಾಖಲೆಗಳಿವೆ ಎನ್ನುವ ಮಾಹಿತಿಯೇ ಶಿಕ್ಷಣ ಇಲಾಖೆ ಬಳಿ ಇಲ್ಲ!

ಚಿಕ್ಕಬಳ್ಳಾಪುರ ಪ್ರತ್ಯೇಕ ಜಿಲ್ಲೆಯಾಗಿ ರೂಪುಗೊಂಡ ಬಳಿಕ ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಂತೆ ಇರುವ ಭೂಮಿಗೆ ಚಿನ್ನದ ಬೆಲೆ ಸಿಗಲು ಆರಂಭವಾಗುತ್ತಿದ್ದಂತೆ ಕೆಲವೆಡೆ ಭೂದಾನಿಗಳ ಕುಟುಂಬದವರು ಶಾಲೆಗೆ ನೀಡಿದ ಜಮೀನನ್ನು ವಾಪಸ್‌ ಪಡೆಯುವ ನಿಟ್ಟಿನಲ್ಲಿ ನ್ಯಾಯಾಲಯದ ಮೆಟ್ಟಿಲುಗಳನ್ನು ಹತ್ತಿರುವ ಉದಾಹರಣೆಗಳಿವೆ.

ADVERTISEMENT

ಇಷ್ಟಾದರೂ ಶಾಲೆಯ ಮುಖ್ಯ ಶಿಕ್ಷಕರಾಗಲಿ, ಶಿಕ್ಷಣ ಇಲಾಖೆಯ ಅಧಿಕಾರಿಗಳಾಗಲಿ ಎಚ್ಚೆತ್ತುಕೊಂಡು ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ದೊರೆತ ಆಸ್ತಿಗಳಿಗೆ ಖಾತೆ, ಪಹಣಿ ಮಾಡಿಸಿಕೊಳ್ಳುವ ಮೂಲಕ ಆಸ್ತಿ ರಕ್ಷಣೆ ಕೆಲಸಕ್ಕೆ ಮುಂದಾಗದಿರುವುದು ಶೋಚನೀಯ ಸಂಗತಿಯಾಗಿದೆ. ಸೋಜಿಗವೆಂದರೆ ಅನೇಕ ಶಾಲೆಗಳಲ್ಲಿ ಮುಖ್ಯ ಶಿಕ್ಷಕರು ಭೂದಾನ ಪತ್ರಗಳನ್ನು  ಸಂರಕ್ಷಿಸಿ ಇಡುವ ಕೆಲಸ ಕೂಡ ಮಾಡದೆ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ.

ಶಿಕ್ಷಕರ ಈ ಮನಸ್ಥಿತಿಯಿಂದಾಗಿ ಅನೇಕ ಕಡೆಗಳಲ್ಲಿ ಸರ್ಕಾರಿ ಶಾಲೆಗಳ ಜಾಗಗಳನ್ನು ಭೂಗಳ್ಳರು ರಾಜಾರೋಷವಾಗಿ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಅತಿಕ್ರಮಣದ ವಿರುದ್ಧ ಧ್ವನಿ ಎತ್ತಬೇಕಾದ ಶಿಕ್ಷಕರ ಬಳಿ ಈ ಜಾಗ ನಮ್ಮದು ಎಂದು ಹೇಳಿ ಹಕ್ಕು ಸಾಧಿಸಬಹುದಾದ ಯಾವುದೇ ದಾಖಲೆಗಳು ಇಲ್ಲ. ಇದರಿಂದ ದಾನಿಗಳು ನೀಡಿದ ಲಕ್ಷಾಂತರ, ಕೋಟಿಗಟ್ಟಲೇ ಮೌಲ್ಯದ ಆಸ್ತಿಗಳು ಕೈತಪ್ಪುವ ಪರಿಸ್ಥಿತಿ ಬರುತ್ತಿದೆ ಎಂದು ಶಿಕ್ಷಣ ಇಲಾಖೆಯ ಕೆಲ ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಇನ್ನೊಂದೆಡೆ ಸರ್ಕಾರಿ ಶಾಲೆಗಳನ್ನು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿ ಯೋಜನೆಯಡಿ ಅಭಿವೃದ್ಧಿಪಡಿಸಲು ಮುಂದೆ ಬರುವ ಕಂಪೆನಿಗಳು, ಸರ್ಕಾರೇತರ ಸಂಘ ಸಂಸ್ಥೆಗಳು ಶಾಲೆಯ ಬಳಿ ಜಾಗದ ದಾಖಲಾತಿ ಇಲ್ಲದ ಕಾರಣಕ್ಕೆ ತಮ್ಮ ಯೋಜನೆಯಿಂದ ಹಿಂದೆ ಸರಿದ ಉದಾಹರಣೆಗಳು ಕೂಡ ಇವೆ ಎನ್ನಲಾಗಿದೆ.

ಸದ್ಯ, ಎಸ್.ಗೊಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜರ್ಮನಿಯ ಕಂಪೆನಿಯೊಂದರ ಸಹಯೋಗದಲ್ಲಿ ಬೆಂಗಳೂರಿನ ರೋಟರಿ ಸಂಸ್ಥೆ ಎರಡು ಕೊಠಡಿಗಳು, ಅಡುಗೆ ಕೋಣೆ ಮತ್ತು ಶೌಚಾಲಯ ನಿರ್ಮಿಸಿಕೊಡಲು ಮುಂದೆ ಬಂದಿದೆ. ಆದರೆ ಆ ಶಾಲೆಯಲ್ಲಿ ಜಾಗಕ್ಕೆ ಸಂಬಂಧಿಸಿದ ಒಂದೇ ಒಂದು ದಾಖಲೆ ಇಲ್ಲ.

ಬಹುಪಾಲು ಶಾಲೆಯ ಶಿಕ್ಷಕರು ಸ್ಥಳೀಯ ಗ್ರಾಮ ಪಂಚಾಯಿತಿ ನೀಡುವ ಹೌಸ್‌ಲಿಸ್ಟ್‌ ಸಂಖ್ಯೆಯನ್ನೇ ಅಧಿಕೃತ ಆಸ್ತಿಯ ದಾಖಲೆ ಎಂದು ಭಾವಿಸಿದ್ದಾರೆ. ಅದು ತಪ್ಪು ಕಲ್ಪನೆ. ಶಾಲೆ ಇರುವ ಜಾಗ ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕರಾಗಲಿ ಅಥವಾ ರಾಜ್ಯಪಾಲರ ಹೆಸರಿನಲ್ಲಿ ನೋಂದಾವಣೆ ಆಗಿದ್ದರೆ, ಅದಕ್ಕೆ ಸಂಬಂಧಿಸಿದಂತೆ ಖಾತೆ ಮಾಡಿಸಿಕೊಂಡರೆ ಮಾತ್ರ ಅದು ಶಾಲೆಯ ಅಧಿಕೃತ ಆಸ್ತಿಯಾಗಲು ಸಾಧ್ಯ ಎಂದು ಅಧಿಕಾರಿಗಳು ಹೇಳುತ್ತಾರೆ.

ಈಗಾಗಲೇ ಮರಸನಹಳ್ಳಿ, ವಡ್ರೇಪಾಳ್ಯದ ಶಾಲೆಗಳ ಜಾಗಕ್ಕೆ ಸಂಬಂಧಿಸಿದಂತೆ ವಿವಾದಗಳು ನ್ಯಾಯಾಲಯದ ಮೆಟ್ಟಿಲೇರಿವೆ. ಇನ್ನು ತಿರ್ನಳ್ಳಿ, ಬನ್ನಿಕುಪ್ಪೆ, ಶ್ರೀರಾಮಪುರ ಸೇರಿದಂತೆ ಶಾಲೆ ಜಾಗಗಳು ಒತ್ತುವರಿಗೆ ಒಳಗಾಗಿವೆ. ಮುಖ್ಯ ಶಿಕ್ಷಕರೊಂದಿಗೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಈಗಲಾದರೂ ತುರ್ತಾಗಿ ಶಾಲೆಯ ಆಸ್ತಿ ಉಳಿಸುವ ಕೆಲಸ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.