ADVERTISEMENT

ದ್ರಾಕ್ಷಿಯಲ್ಲಿನ ನಷ್ಟ ಸರಿದೂಗಿಸಿದ ದಾಳಿಂಬೆ

ಮೇಲೂರಿನ ರೈತ ನಂಜೇಗೌಡರ ಗಮನಾರ್ಹ ಸಾಧನೆ

​ಪ್ರಜಾವಾಣಿ ವಾರ್ತೆ
Published 25 ಮೇ 2017, 5:11 IST
Last Updated 25 ಮೇ 2017, 5:11 IST
ಮೇಲೂರಿನ ರೈತ ಕೆ.ಎಸ್‌.ನಂಜೇಗೌಡ ತಾವು ಬೆಳೆದ ದಾಳಿಂಬೆ ಫಸಲನ್ನು ತೋರಿಸುತ್ತಿರುವುದು
ಮೇಲೂರಿನ ರೈತ ಕೆ.ಎಸ್‌.ನಂಜೇಗೌಡ ತಾವು ಬೆಳೆದ ದಾಳಿಂಬೆ ಫಸಲನ್ನು ತೋರಿಸುತ್ತಿರುವುದು   

ಶಿಡ್ಲಘಟ್ಟ: ‘ದಾಳಿಂಬೆ ನನ್ನ ಅದೃಷ್ಟದ ಬೆಳೆ. ಅದನ್ನು ಸರಿಯಾಗಿ ನೋಡಿಕೊಂಡಲ್ಲಿ ರೈತನನ್ನು ಕೈಬಿಡುವುದಿಲ್ಲ. ಇದು ನನ್ನ ಸ್ವಂತ ಅನುಭವ...’
ಇದು ಮೇಲೂರಿನ ರೈತ ಕೆ.ಎಸ್‌. ನಂಜೇಗೌಡ ಅವರ ಮನದ ಮಾತು.

ಕಳೆದ ವರ್ಷ ಬಿದ್ದ ಆಲಿಕಲ್ಲು ಸಹಿತ ಮಳೆಗೆ ತಾಲ್ಲೂಕಿನ ಮೇಲೂರು, ಅಪ್ಪೇಗೌಡನಹಳ್ಳಿ, ಚೌಡಸಂದ್ರ, ಗಂಗನಹಳ್ಳಿ, ಕಂಬದಹಳ್ಳಿ, ಮುತ್ತೂರು, ಮಳ್ಳೂರು ಗ್ರಾಮಗಳ ದ್ರಾಕ್ಷಿ ಬೆಳೆ ನೆಲಕಚ್ಚಿತ್ತು. ಆಗ ನಂಜೇಗೌಡರೂ ನಷ್ಟ ಅನುಭವಿಸಿದರು. ಆದರೆ ತಮ್ಮ ತೋಟದ ಪಕ್ಕದಲ್ಲಿಯೇ ಒಂದೂವರೆ ಎಕರೆಯಲ್ಲಿ ನೆಟ್ಟಿದ್ದ ದಾಳಿಂಬೆ ಮುಳುಗುತ್ತಿದ್ದವರನ್ನು ದಡಕ್ಕೆ ಸೇರಿಸಿತು.

‘ಮೂರು ವರ್ಷಗಳಿಂದ ಆಲಿಕಲ್ಲು ಮಳೆ ರೈತರನ್ನು ಕಂಗೆಡಿಸುತ್ತಿದೆ. ಅದಕ್ಕೆ ನಾವೂ ಹೊರತಾಗಿಲ್ಲ. ಆದರೆ ದಾಳಿಂಬೆ ಗಿಡಗಳು ಕೈಬಿಡುವುದಿಲ್ಲ ಎಂಬ ವಿಶ್ವಾಸವಿತ್ತು. ಆಲಿಕಲ್ಲು ಬಿದ್ದಾಗ ದಾಳಿಂಬೆ ಉದುರಿದ್ದರೂ ಔಷಧಿ ಸಿಂಪಡಿಸಿದ ನಂತರ ಗಿಡ ಚಿಗುರಿ ಕಾಯಿಯಾದವು. ಎರಡು ತಿಂಗಳು ತಡವಾದರೂ 11 ಟನ್‌ ಇಳುವರಿ ಬಂದು ₹ 10 ಲಕ್ಷ ಆದಾಯ ಕೊಟ್ಟಿತು’ ಎನ್ನುತ್ತಾರೆ ರೈತ ನಂಜೇಗೌಡ.

‘ದ್ರಾಕ್ಷಿ ಬೆಳೆಯ ಬೆಲೆ ಕುಸಿತ, ಮಾರುಕಟ್ಟೆ ಅವ್ಯವಸ್ಥೆ ಸಾಕಷ್ಟು ಹಾನಿ ಮಾಡಿತು. ಇದರಿಂದ ಬೇಸತ್ತು ಒಂದೂವರೆ ಎಕರೆ ಜಮೀನಿನಲ್ಲಿದ್ದ ದ್ರಾಕ್ಷಿ ತೆಗೆದು ಹೈದರಾಬಾದಿನಿಂದ 600 ಸಸಿಗಳನ್ನು ತಂದು ನಾಟಿ ಮಾಡಿದೆವು. ಮೊದಲ ವರ್ಷ ಖರ್ಚು ಹೆಚ್ಚಾಗಿತ್ತು. ಆದರೆ ನಂತರ ಕೈ ಹಿಡಿಯಿತು’ ಎಂದು ತಮ್ಮ ಬೆಳೆ ಬದಲಾವಣೆಯ ಆರಂಭದ ಹಂತವನ್ನು ವಿವರಿಸಿದರು.

ವೈರಾಣು ತಡೆಯಲು ಹೊಲದ ಸುತ್ತ ಪ್ಲಾಸ್ಟಿಕ್‌ ನೆಟ್‌ ಅಳವಡಿಸಿ, ಭೂಮಿಗೆ ಸಾಕಷ್ಟು ಕೊಟ್ಟಿಗೆ ಗೊಬ್ಬರ, ಹಿಂಡಿ ಹಾಕಿ ಸಮರ್ಪಕವಾಗಿ ನಿರ್ವಹಣೆ ಮಾಡಿದ್ದರಿಂದ ಮೊದಲ ವರ್ಷ 5 ಟನ್‌ ಇಳುವರಿ ಕೈ ಸೇರಿತು. ಎರಡನೇ ವರ್ಷ 8 ಟನ್‌, ಮೂರನೇ ವರ್ಷ ಆಲಿಕಲ್ಲು ಮಳೆಯ ನಡುವೆಯೂ 11 ಟನ್‌ ದಾಳಿಂಬೆ ಸಿಕ್ಕಿದೆ.

ಈ ಬಾರಿ ಆಗಸ್ಟ್‌ನಲ್ಲಿ ಫಸಲು ಕೈಸೇರಲಿದ್ದು, 15 ಟನ್‌ ನಿರೀಕ್ಷೆಯಿದೆ. ಮಾರಾಟಕ್ಕೂ ಸಮಸ್ಯೆ ಇಲ್ಲ ಎನ್ನುತ್ತಾರೆ ನಂಜೇಗೌಡ.
‘ದಾಳಿಂಬೆಗೆ ಹೆಚ್ಚಿನ ತೇವಾಂಶ ಬೇಕಿಲ್ಲ. ಒಂದು ಸಾವಿರ ಗ್ಯಾಲನ್‌ ನೀರಿದ್ದು, ಹನಿ ನೀರಾವರಿ ಮೂಲಕ ಹರಿಸುವುದರಿಂದ 600 ದಾಳಿಂಬೆ ಗಿಡಗಳನ್ನು ಚೆನ್ನಾಗಿ ನೋಡಿಕೊಳ್ಳಬಹುದು’ ಎನ್ನುವರು.

‘ದಾಳಿಂಬೆ ಹಣ್ಣಿನ ಮೇಲೆ ಮೊದಲ ಮಳೆ ಹನಿ ಬಿದ್ದಾಗ ಸಿಪ್ಪೆ ಮೇಲೆ ಕಪ್ಪು ಮಚ್ಚೆ ಕಾಣಲು ಶುರುವಾಗುತ್ತದೆ. ಇದೊಂದು ಶಿಲೀಂಧ್ರದಿಂದ ಬರುವ ರೋಗ. ಕಾಯಿ, ಎಲೆ, ಹಣ್ಣುಗಳ ಮೇಲೆ ಕೆಂಪು, ಕಪ್ಪು ಬಣ್ಣದ ಸಣ್ಣ ಮಚ್ಚೆಗಳಿವು. ಅವುಗಳಿಂದ ಹಣ್ಣು ಕೊಳೆಯಲು ಶುರುವಾಗುತ್ತದೆ. ಹಾಗಾದಾಗ ಬೆಳೆಗೆ ಬೆಲೆಯೂ ಸಿಗಲ್ಲ. ಅದಕ್ಕೆ ಮುಂಜಾಗ್ರತೆ ವಹಿಸಿದರೆ ನಷ್ಟದಿಂದ ಪಾರಾಗಬಹುದು.

ಅಂಥ್ರಾಕ್ನೋಸ್, ಗಿಡಗಳ ಹಿಮ್ಮುಖ ಒಣಗುವಿಕೆ (ಡೈಬ್ಯಾಕ್‌) ರೋಗದಿಂದ ಬೆಳೆ ರಕ್ಷಿಸುವುದು ಮುಖ್ಯ. ಮನೆಯ ಮಕ್ಕಳಂತೆ ಬೆಳೆ ಕಾಪಾಡಿದರೆ ದಾಳಿಂಬೆ ಕೃಷಿ ಲಾಭದಾಯಕ ಎಂದೂ ನಂಜೇಗೌಡ ವಿವರಿಸುವರು.
ಡಿ.ಜಿ. ಮಲ್ಲಿಕಾರ್ಜುನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT