ADVERTISEMENT

ನಗರಸಭೆ ಅಧ್ಯಕ್ಷೆ- ಸದಸ್ಯರ ಜಟಾಪಟಿ

ಚಿಂತಾಮಣಿ: ರಾಜೀನಾಮೆ ನೀಡಲು ಆಗ್ರಹಿಸಿ ವಾಗ್ವಾದ; ಪರಸ್ಪರರ ವಿರುದ್ಧ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 26 ಮೇ 2018, 9:40 IST
Last Updated 26 ಮೇ 2018, 9:40 IST
ಚಿಂತಾಮಣಿ ನಗರಸಭೆ ಅಧ್ಯಕ್ಷರ ಕೊಠಡಿಯಲ್ಲಿ ವಾಗ್ವಾದ ನಡೆದ ದೃಶ್ಯ
ಚಿಂತಾಮಣಿ ನಗರಸಭೆ ಅಧ್ಯಕ್ಷರ ಕೊಠಡಿಯಲ್ಲಿ ವಾಗ್ವಾದ ನಡೆದ ದೃಶ್ಯ   

ಚಿಂತಾಮಣಿ: ನಗರಸಭೆಯ ಅಧ್ಯಕ್ಷರ ರಾಜೀನಾಮೆ ವಿಚಾರವಾಗಿ ಅಧ್ಯಕ್ಷೆ ಮತ್ತು ಸದಸ್ಯರ ನಡುವೆ ವಾಗ್ವಾದ ನಡೆದಿದೆ. ಅವರವರ ಬೆಂಬಲಿಗರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದ ಪ್ರಕರಣ ಶುಕ್ರವಾರ ನಗರಸಭೆಯಲ್ಲಿ ನಡೆದಿದೆ.

ಸುಜಾತಾ ಶಿವಣ್ಣ ಜೆಡಿಎಸ್‌ನಿಂದ ಆಯ್ಕೆಯಾಗಿದ್ದು 20 ತಿಂಗಳಿನಿಂದ ನಗರಸಭೆ ಅಧ್ಯಕ್ಷೆಯಾಗಿದ್ದಾರೆ. ಜೆಡಿಎಸ್‌ನ ಒಂದು ಗುಂಪು ಅವರ ರಾಜೀನಾಮೆಗೆ ಒತ್ತಾಯಿಸುತ್ತ ಕಿರುಕುಳ ನೀಡುತ್ತಿತ್ತು. ಇದರಿಂದ ಬೇಸತ್ತ ಅಧ್ಯಕ್ಷೆ ಸುಜಾತಾ, ಡಾ.ಎಂ.ಸಿ.ಸುಧಾಕರ್‌ ಬಣಕ್ಕೆ ಸೇರ್ಪಡೆಯಾಗಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಡಾ.ಎಂ.ಸಿ.ಸುಧಾಕರ್‌ ಪರವಾಗಿ ಪ್ರಚಾರ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಸುಜಾತಾ ಮತ್ತು ಸದಸ್ಯ ನಟರಾಜ್‌ ನಡುವೆ ಮಾತಿನ ಚಕಮುಕಿ ನಡೆದಿದೆ. ರಾಜೀನಾಮೆ ನೀಡಬೇಕು ಎಂದು ನಟರಾಜ್‌ ಒತ್ತಾಯಿಸಿದಾಗ ಅಧ್ಯಕ್ಷೆ ಪರವಾಗಿ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿ ದರು. ಗಲಾಟೆ ಹೆಚ್ಚಾದಾಗ ನಗರಸಭೆ ಅಧಿಕಾರಿಗಳು ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ ಎಂದು ತಿಳಿಸಿ ಎಲ್ಲರನ್ನು ಹೊರಗಡೆ ಕಳುಹಿಸಿ, ಅಧ್ಯಕ್ಷರ ಕೊಠಡಿಗೆ ಬೀಗ ಹಾಕಿದರು.

ADVERTISEMENT

ನಗರಸಭೆಯ ಮುಂಭಾಗದಲ್ಲೂ ಬೆಂಬಲಿಗರ ನಡುವೆ ಮಾತಿನ ಚಕಮಕಿ, ಕೈ–ಕೈ ಮಿಲಾಯಿಸುವ ಪರಿಸ್ಥಿತಿ ಉಂಟಾಗಿತ್ತು. ಈ ಬಗ್ಗೆ ನಗರಸಭೆ ಅಧ್ಯಕ್ಷೆ ಸುಜಾತಾ ಹಾಗೂ ಸದಸ್ಯ ನಟರಾಜ್‌ ಪರಸ್ಪರ ದೂರು ನೀಡಿದ್ದಾರೆ.

ನಗರದ ಕೆಲವು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದಾಗ ಕಚೇರಿಗೆ ಆಗಮಿಸಿದ ನಟರಾಜ್‌ ಕೂಡಲೇ ರಾಜೀನಾಮೆ ನೀಡಬೇಕು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಅಧ್ಯಕ್ಷೆ ದೂರಿನಲ್ಲಿ ತಿಳಿಸಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಕೇಳಲು ಹೋದಾಗ ಅಧ್ಯಕ್ಷರು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಬೆಂಬಲಿಗರಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅಧ್ಯಕ್ಷೆ ಕಚೇರಿಯಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ ಎಂದು ನಟರಾಜ್‌ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.