ADVERTISEMENT

ನಗರಸಭೆ ಮೂದಲಿಸುವ ಚಾಳಿ ಬಿಡಿ

ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ‘ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ’

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 7:37 IST
Last Updated 31 ಜನವರಿ 2017, 7:37 IST
ನಗರಸಭೆ ಮೂದಲಿಸುವ ಚಾಳಿ ಬಿಡಿ
ನಗರಸಭೆ ಮೂದಲಿಸುವ ಚಾಳಿ ಬಿಡಿ   
ಚಿಕ್ಕಬಳ್ಳಾಪುರ: ‘ನಗರದಾದ್ಯಂತ ಕಸ ಚೆಲ್ಲಿ ನಗರಸಭೆಯನ್ನು ಮೂದಲಿಸುವ ಪ್ರವೃತ್ತಿಯನ್ನು ನಾಗರಿಕರು ಬಿಡಬೇಕು. ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಬದ್ಧತೆ ತೋರಿಸಬೇಕು’ ಎಂದು ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಧೀಶ ಎ.ಎಸ್.ಬೆಳ್ಳುಂಕೆ ಹೇಳಿದರು.
 
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನಗರಸಭೆ ಸಹಯೋಗದಲ್ಲಿ ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ‘ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
 
‘ನಮ್ಮ ಸುತ್ತಲಿನ ಪರಿಸರವನ್ನು ಬೇರೊಬ್ಬರು ಬಂದು ಸ್ವಚ್ಛಗೊಳಿಸಬೇಕು ಎನ್ನುವ ಆಲೋಚನೆ ಬಿಡಬೇಕು. ನಗರವನ್ನು ಸ್ವಚ್ಛವಾಗಿಡಲು ಪ್ರತಿಯೊಬ್ಬರೂ ನಗರಸಭೆಯೊಂದಿಗೆ ಕೈಜೋಡಿಸಬೇಕು. ವಿದೇಶಗಳಲ್ಲಿ ಇರುವಂತೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಈ ವಿಚಾರದಲ್ಲಿ ದೃಢ ಸಂಕಲ್ಪದ ಅಗತ್ಯವಿದೆ’ ಎಂದು ಹೇಳಿದರು. 
 
‘ಇಂದು ಮಹಾತ್ಮ ಗಾಂಧಿ ಅವರು ಹುತಾತ್ಮರಾದ ದಿನ. ಗ್ರಾಮ ಸ್ವರಾಜ್ಯ ಮತ್ತು ಸ್ವಚ್ಛ ಭಾರತದ ಕನಸು ಕಂಡಿದ್ದ ಗಾಂಧೀಜಿ, ಜಾತೀಯತೆ ಮಿತಿಮೀರಿದ್ದ ದಿನಗಳಲ್ಲಿ ದಲಿತರ ಕೇರಿಗಳಿಗೆ ಹೋಗಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ಅರಿವು ಮೂಡಿಸಿದರು. ಅವರ ವಾರಸುದಾರರಾದ ನಾವು, ಅವರ ಕನಸನ್ನು ನನಸು ಮಾಡುವ ಕೆಲಸ ಮಾಡಬೇಕು. ಸಂಪೂರ್ಣ ಸ್ವಚ್ಛತಾ ಆಂದೋಲನಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕಿದೆ’ ಎಂದು ತಿಳಿಸಿದರು.
 
ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಕೆ.ಪ್ರಕಾಶ್ ಮಾತನಾಡಿ, ‘ಬಹು ಸಂಸ್ಕೃತಿಗೆ ಹೆಸರಾದ ನಮ್ಮ ದೇಶ ಸ್ವಚ್ಛತೆಯಲ್ಲಿ ಹಿಂದೆ ಉಳಿದಿದೆ. ಸ್ವಚ್ಛತೆಯ ಬಗ್ಗೆ ಜನರಲ್ಲಿ ಇನ್ನೂ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ನಗರಸಭೆಯವರು ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಅನುಕೂಲವಾಗುವಂತೆ ಜನರು ಒಣ ಮತ್ತು ಹಸಿ ಕಸವನ್ನು ವಿಂಗಡಿಸಿ ಕೊಡಬೇಕು’ ಎಂದು ತಿಳಿಸಿದರು.  
 
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಜಿ.ವಿ.ತುರಮರಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್. ಶೋಭಾ, ಕೋಮಲಾ, ಲೋಕೇಶ್, ಸಿವಿಲ್‌ ನ್ಯಾಯಾಧೀಶರಾದ ಅನುಪಮಾ, ಅರುಣ್‌ಕುಮಾರ್, 2ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶೆ ಶೈಲಾ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಮಟಮಪ್ಪ, ಹಿರಿಯ ವಕೀಲ ರಘುರಾಂ, ಸರ್ಕಾರಿ ಅಭಿಯೋಜಕ ಎಲ್.ದೇವರಾಜ್ ಇದ್ದರು.
 
**
ನಿತ್ಯ  34 ಟನ್ ಕಸ ವಿಲೇವಾರಿ
‘ನಗರದಲ್ಲಿ ಪ್ರತಿದಿನ  34 ಟನ್ ವಿಲೇವಾರಿ ಆಗುತ್ತಿದೆ ಎಂದು ನಗರಸಭೆ ಆಯುಕ್ತ ಉಮಾ ಕಾಂತ್ ಹೇಳಿದರು. 68 ಸಾವಿರ ಜನಸಂಖ್ಯೆ ಹೊಂದಿ ರುವ ಈ ನಗರದ ತ್ಯಾಜ್ಯವನ್ನು ಕೇವಲ 120 ಜನ ಪೌರ ಕಾರ್ಮಿಕರು ತೆಗೆಯುತ್ತಾರೆ. ಜನರು ಎಲ್ಲೆಂದ ರಲ್ಲಿ ಕಸ ಎಸೆಯುವ ಪ್ರವೃತ್ತಿ ಬಿಟ್ಟು, ನಗರ ಸಭೆಯ ವಾಹನ ಗಳಿಗೆ ಕಸ ನೀಡಬೇಕು’ ಎಂದು ಹೇಳಿದರು. ಪೌರಕಾರ್ಮಿ ಕರು ಕಸ ಸ್ವಚ್ಛಗೊಳಿ ಸುವ ಮುನ್ನ ತಮ್ಮ ಬಡಾವಣೆಯ ನಿಗದಿತ ಸ್ಥಳದಲ್ಲಿ ಕಸ ಹಾಕ ಬೇಕು. ನಗರ ವನ್ನು ಸ್ವಚ್ಛವಾಗಿ ಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು  ಎಂದರು. 
 
 
**
ಸ್ವಚ್ಛತೆ ಆರೋಗ್ಯವಂತ ದೇಶದ ಪ್ರಮುಖ ಲಕ್ಷಣ. ಬರೀ ಭಾಷಣದಿಂದ ಸ್ವಚ್ಛತೆ ಸಾಧ್ಯವಿಲ್ಲ. ಪ್ರತಿಯೊಬ್ಬರಲ್ಲೂ ಬದ್ಧತೆ, ದೃಢ ಸಂಕಲ್ಪ ಇರಬೇಕು.
-ಎ.ಎಸ್.ಬೆಳ್ಳುಂಕೆ ,
ಜಿಲ್ಲಾ ಪ್ರಧಾನ  ಹಾಗೂ ಸೆಷನ್ಸ್‌ ನ್ಯಾಯಾಧೀಶ 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.