ADVERTISEMENT

ನನೆಗುದಿಗೆ ಬಿದ್ದ ಪಶುಭಾಗ್ಯ ಯೋಜನೆ

ಫಲಾನುಭವಿಗಳ ಆಯ್ಕೆಗೆ ಶಾಸಕ ಮತ್ತು ನಾಮನಿರ್ದೇಶಿತ ಸದಸ್ಯರ ನಡುವೆ ತಿಕ್ಕಾಟ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2017, 8:57 IST
Last Updated 10 ಮಾರ್ಚ್ 2017, 8:57 IST

ಚಿಂತಾಮಣಿ: ಶಾಸಕರು ಮತ್ತು ಆಯ್ಕೆ ಸಮಿತಿಯ ಸದಸ್ಯರ ನಡುವೆ ತಲೆದೋರಿರುವ ಭಿನ್ನಾಭಿಪ್ರಾಯದಿಂದ ತಾಲ್ಲೂಕಿನಲ್ಲಿ ಪಶುಭಾಗ್ಯ ಯೋಜನೆಯ ಫಲಾನುಭವಿಗಳ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ.

ತಾಲ್ಲೂಕಿನಲ್ಲಿ ಸತತ ಬರಗಾಲದಿಂದ ಮಳೆ, ಬೆಳೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ರೈತ ಸಮುದಾಯಕ್ಕೆ ವರದಾನವಾಗಬೇಕಾಗಿದ್ದ ಪಶುಭಾಗ್ಯ ಯೋಜನೆ  ಅನುಷ್ಠಾನ ನನೆಗುದಿಗೆ ಬಿದ್ದಿದೆ. ಹೈನೋದ್ಯಮವನ್ನು ಉತ್ತೇಜಿಸಲು ಹಾಗೂ ರೈತರಿಗೆ ಆರ್ಥಿಕವಾಗಿ ನೆರವಾಗಲು ರಾಜ್ಯ ಸರ್ಕಾರ ರೂಪಿಸಿರುವ ಪಶುಭಾಗ್ಯ ಯೋಜನೆಯನ್ನು ಸೌಲಭ್ಯ ಬಡವರಿಗೆ ಮರೀಚಿಕೆಯಾಗಿದೆ.

ಪಶುಭಾಗ್ಯ ಯೋಜನೆಯ ಫಲಾನುಭವಿಗಳ ಆಯ್ಕೆ ಸಮಿತಿಯಲ್ಲಿ ಶಾಸಕ ಎಂ.ಕೃಷ್ಣಾರೆಡ್ಡಿ (ಅಧ್ಯಕ್ಷ) ಹಾಗೂ ಸಿ.ಮಂಜುನಾಥ್‌, ಕವಿತಾ, ನಾರಾಯಣಸ್ವಾಮಿ, ಆಂಜನೇಯರೆಡ್ಡಿ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ಶಾಸಕರು ಜೆಡಿಎಸ್‌, ಸದಸ್ಯರು ಕಾಂಗ್ರೆಸ್‌ ಪಕ್ಷದವರಾಗಿರುವುದು ಭಿನ್ನಾಭಿಪ್ರಾಯಕ್ಕೆ ಕಾರಣ ಎನ್ನಲಾಗಿದೆ.

ತಾಲ್ಲೂಕಿನಲ್ಲಿ ಒಟ್ಟು 79 ಫಲಾನುಭವಿಗಳಿಗೆ ಯೋಜನೆ ಮಂಜೂರಾಗಿದೆ. ಆರ್ಥಿಕ ವರ್ಷ ಕೊನೆಗೊಳ್ಳುತ್ತಿದ್ದರೂ ಈವರೆಗೂ ಫಲಾನುಭವಿಗಳ ಆಯ್ಕೆ ನಡೆದಿಲ್ಲ.  ಆಯ್ಕೆ ಪ್ರಕ್ರಿಯೆಗೆ 3 ಬಾರಿ ಸಭೆ ನಡೆಸಿದ್ದರೂ ಫಲಾನುಭವಿಗಳ ಆಯ್ಕೆ ಮಾಡಲು ವಿಫಲವಾಗಿದೆ. ಫಲಾನುಭವಿಗಳ ಆಯ್ಕೆಯಲ್ಲಿ ಶಾಸಕರು ಹಾಗೂ ಸರ್ಕಾರದ ನಾಮನಿರ್ದೇಶಿತ ಸದಸ್ಯರ ನಡುವೆ ಭಿನ್ನಾಭಿಪ್ರಾಯ ತಲೆದೋರಿರುವುದು ವೈಫಲ್ಯಕ್ಕೆ  ಕಾರಣವಾಗಿದೆ.

ತಾಲ್ಲೂಕಿಗೆ ಹಂಚಿಕೆಯಾಗಿರುವ ಫಲಾನುಭವಿಗಳನ್ನು ಪಾರದರ್ಶಕವಾಗಿ ಲಾಟರಿ ಮೂಲಕ ಆಯ್ಕೆ ಮಾಡಬೇಕು ಎನ್ನುವುದು ಶಾಸಕರ ಅಭಿಪ್ರಾಯ. ಫಲಾನುಭವಿಗಳ ಸಂಖ್ಯೆಯನ್ನು ಹಂಚಿಕೊಂಡು ಪಂಚಾಯಿತಿವಾರು ಹಂಚಿಕೆ ಮಾಡಬೇಕು ಎಂದು ನಾಮನಿರ್ದೇಶನ ಸದಸ್ಯರು ಪಟ್ಟುಹಿಡಿದಿದ್ದಾರೆ.

ಹೀಗಾಗಿ ಪಶುಭಾಗ್ಯ ಯೋಜನೆ ಫಲಾನುಭವಿಆಯ್ಕೆಯನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ ಎಂದು ಪಶು ಸಂಗೋಪನಾ ಇಲಾಖೆಯಿಂದ ತಿಳಿದು ಬಂದಿದೆ.

ಪಶುಭಾಗ್ಯ ಯೋಜನೆಯಡಿ ತಾಲ್ಲೂಕಿಗೆ 20 ಕೋಳಿ ಘಟಕ, 2 ಹಂದಿ ಘಟಕ, 9 ಕುರಿ ಘಟಕ, 29 ಹೈನುಗಾರಿಕೆ ಘಟಕ, ಅಮೃತ ಯೋಜನೆ ಹೈನುಗಾರಿಕೆಯಲ್ಲಿ 15, ವಿಶೇಷ ಅಭಿವೃದ್ದಿ ಯೋಜನೆ ಹೈನುಗಾರಿಕೆಯಲ್ಲಿ 4 ಘಟಕಗಳು ಮಂಜೂರಾಗಿವೆ. ಉಳಿದ ಫಲಾನುಭವಿಗಳಿಗೆ ಹಸು ಖರೀದಿಸಲು ಸಾಲ ಸೌಲಭ್ಯ ಒದಗಿಸುವುದು ಪಶುಭಾಗ್ಯ ಯೋಜನೆಯ ಗುರಿಯಾಗಿದೆ.

ತಾಲ್ಲೂಕಿನಲ್ಲಿ ಕೋಳಿ ಘಟಕಕ್ಕೆ 25 ಮಂದಿ, ಹಂದಿ ಘಟಕಕ್ಕೆ 6, ಕುರಿ ಘಟಕಕ್ಕೆ 82, ಹೈನುಗಾರಿಕೆಗೆ 554, ಅಮೃತ ಯೋಜನೆ ಹೈನುಗಾರಿಕೆಗೆ 31, ವಿಶೇಷ ಅಭಿವೃದ್ದಿ ಯೋಜನೆ ಹೈನುಗಾರಿಕೆಗೆ 23 ಮಂದಿ ಅರ್ಜಿ ಸಲ್ಲಿಸಿದ್ದಾರೆ. 79 ಮಂದಿ ಆಯ್ಕೆಗೆ 721 ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಪಶುಭಾಗ್ಯ ಯೋಜನೆಯಲ್ಲಿ ಬ್ಯಾಂಕುಗಳಿಂದ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಹಸು, ಕುರಿ, ಕೋಳಿ ಹಂದಿ ಘಟಕ ಸ್ಥಾಪಿಸಲು ಪಶುಸಂಗೋಪನಾ ಇಲಾಖೆಯ ಮೂಲಕ ₹ 1.20 ಲಕ್ಷ ದವರೆಗೆ ಸಾಲ ದೊರೆಯುತ್ತದೆ. ಪರಿಶಿಷ್ಟ ಜಾತಿ/ ಪಂಗಡದವರಿಗೆ ಶೇ 50 ರಷ್ಟು ಹಾಗೂ ಇತರರಿಗೆ ಶೇ 25 ರಷ್ಟು ಸಾಲದಲ್ಲಿ ಸಹಾಯಧನ ಸಿಗುತ್ತದೆ.

ಆಯ್ಕೆಯಾದ ಫಲಾನುಭವಿಗಳಿಗೆ ಬೆಳೆ ಸಾಲದ ಮಾದರಿಯಲ್ಲಿ ಸಹಕಾರಿ ಬ್ಯಾಂಕುಗಳಿಂದ ಶೂನ್ಯ ಬಡ್ಡಿ ದರದಲ್ಲಿ 50 ಸಾವಿರವರೆಗೆ ಪಶು ಆಹಾರ, ನಿರ್ವಹಣಾ ವೆಚ್ಚಕ್ಕಾಗಿ ಅಲ್ಪಾವಧಿ ಸಾಲವೂ ಸಿಗುತ್ತದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ ವಿಮಾ ಕಂತು ಪಾವತಿಸಲು ಸಹಾಯಧನವನ್ನು ನೀಡಲಾಗುತ್ತದೆ.

‘ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು’ ಗಾದೆಯಂತೆ ಶಾಸಕರು ಮತ್ತು ಸದಸ್ಯರ ತಿಕ್ಕಾಟದಿಂದ ಸೌಲಭ್ಯಗಳು ಫಲಾನುಭವಿಗಳನ್ನು ತಲುಪುವುದು  ವಿಳಂಬವಾಗಿದೆ.

ಫಲಾನುಭವಿಗಳ ಆಯ್ಕೆ  ವಿಳಂಬವಾಗಿರುವುದರಿಂದ ಯೋಜನೆಯ ಸೌಲಭ್ಯದಿಂದ ತಾಲ್ಲೂಕಿನ ರೈತರು ವಂಚಿತರಾಗುವ ಸಂಭವ ಇದೆ. ಸಕಾಲದಲ್ಲಿ ಆಯ್ಕೆ ಪಟ್ಟಿಯನ್ನು ಕಳುಹಿಸದಿದ್ದರೆ ಬ್ಯಾಂಕುಗಳು ಸಹ ಸಾಲ ಬಿಡುಗಡೆ ಮಾಡಲು ಹಿಂದೆ ಮುಂದೆ ನೋಡುತ್ತವೆ. ಬ್ಯಾಂಕ್‌ ಅಧಿಕಾರಿಗಳು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳ ಮೇಲೆ ಕೆಂಗಣ್ಣು ಬೀರುತ್ತಾರೆ.
–ಎಂ.ರಾಮಕೃಷ್ಣಪ್ಪ

*
ಯೋಜನೆಯ ಸೌಲಭ್ಯ ಪಡೆಯಲು 721 ಜನರು ಅರ್ಜಿ ಸಲ್ಲಿಸಿರುವುದರಿಂದ, ಪಕ್ಷಪಾತವಿಲ್ಲದಂತೆ ಇತರ ವಸತಿ ಯೋಜನೆಗಳಲ್ಲಿರುವಂತೆ ಲಾಟರಿ ಮೂಲಕ ಆಯ್ಕೆ ಮಾಡಿದರೆ ಪಾರದರ್ಶಕವಾಗಿರುತ್ತದೆ.
-ಎಂ.ಕೃಷ್ಣಾರೆಡ್ಡಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT