ADVERTISEMENT

ಪತ್ರಿಕಾ ವಿತರಕರಿಗೆ ಸರ್ಕಾರ ಸಹಾಯ ಮಾಡಲಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 8:33 IST
Last Updated 5 ಸೆಪ್ಟೆಂಬರ್ 2017, 8:33 IST
ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಆಯೋಜಿಸಿದ್ದ ‘ಪತ್ರಿಕಾ ವಿತರಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಶಿವರಾಂ ಮಾತನಾಡಿದರು (ಎಡ ಚಿತ್ರ). ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪತ್ರಿಕಾ ವಿತರಕರು
ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಆಯೋಜಿಸಿದ್ದ ‘ಪತ್ರಿಕಾ ವಿತರಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಶಿವರಾಂ ಮಾತನಾಡಿದರು (ಎಡ ಚಿತ್ರ). ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪತ್ರಿಕಾ ವಿತರಕರು   

ಚಿಕ್ಕಬಳ್ಳಾಪುರ: ‘ಸಮಾಜದ ಆಗುಹೋಗುಗಳನ್ನು ಅನೇಕ ಸವಾಲುಗಳ ನಡುವೆಯೂ ಮನೆ ಮನೆ ತಲುಪಿಸುವುದನ್ನು ನಿತ್ಯ ಕಾಯಕ ಮಾಡಿಕೊಂಡಿರುವ ಪತ್ರಿಕಾ ವಿತರಕರಿಗೆ ಸರ್ಕಾರ ಆರ್ಥಿಕ ಸಹಾಯ ಮಾಡಬೇಕು’ ಎಂದು ಹಿರಿಯ ಪತ್ರಕರ್ತ ಶಿವರಾಂ ಅಭಿಪ್ರಾಯಪಟ್ಟರು.

ಸರ್‌.ಎಂ.ವಿ. ಪತ್ರಿಕಾ ವಿತರಕರ ಬಳಗದ ವತಿಯಿಂದ ನಗರದಲ್ಲಿ ಸೋಮ ವಾರ ಆಯೋಜಿಸಿದ್ದ ‘ಪತ್ರಿಕಾ ವಿತರಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವರ್ಷವೀಡಿ ಮಳೆ, ಚಳಿ ಲೆಕ್ಕಿಸದೆ ಮನೆ ಮನೆಗೆ ತೆರಳಿ ಪತ್ರಿಕೆ ಹಾಕುವ ವಿತರಕರು ಅನೇಕ ಬಾರಿ ಓದುಗರ ಬೈಗುಳ ಕೂಡ ಸಹಿಸಿಕೊಂಡು ತಾಳ್ಮೆಯಿಂದ ತಮ್ಮ ವೃತ್ತಿಯನ್ನು ಮಾಡುತ್ತಾರೆ. ಅನೇಕ ಸಕಾಲಕ್ಕೆ ಪತ್ರಿಕೆ ತಲುಪಿಸುವ ಧಾವಂತದಲ್ಲಿ ಅಪಘಾತಕ್ಕೆ ಇಡಾಗಿ ಪ್ರಾಣ ಕಳೆದುಕೊಂಡವರೂ ಇದ್ದಾರೆ. ಆದ್ದರಿಂದ ವಿತರಕರನ್ನು ನೋಡುವ ನಮ್ಮ ದೃಷ್ಟಿಕೋನ ಬದಲಾಗಬೇಕಿದೆ’ ಎಂದು ತಿಳಿಸಿದರು.

ADVERTISEMENT

‘ಸ್ವಾತಂತ್ರ್ಯ ಕಾಲಘಟ್ಟದಲ್ಲಿ ದೇಶಸೇವೆಗಾಗಿಯೇ ಜೈಲಿಗೆ ಹೋದ ವಿತರಕರಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪತ್ರಿಕಾ ವಿತರಕರ ಮನೆ ಮೇಲೆ ಪೊಲೀಸರು ದಾಳಿ ಮಾಡಿ, ಜೈಲಿಗೆ ತಳ್ಳಿದ ಉದಾಹರಣೆಗಳಿವೆ. ಹೀಗಾಗಿ ಪತ್ರಿಕೆ ವಿತರಣೆ ಕೆಲಸ ಕೂಡ ಅತ್ಯಂತ ಪವಿತ್ರವಾದ ಕೆಲಸವಾಗಿದೆ. ಸಮಾಜ ವಿತರಕರನ್ನು ಬರೀ ಟೀಕೆ ಮಾಡುವುದಲ್ಲ. ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಪತ್ರಕರ್ತ ಪುಟ್ಟರಾಜು ಮಾತನಾಡಿ, ‘ಪತ್ರಿಕೋದ್ಯಮದಲ್ಲಿ ಎಲ್ಲ ಕಾಲಕ್ಕೂ ಪತ್ರಿಕಾ ವಿತರಕರು ಮಹತ್ವದ ಪಾತ್ರ ನಿರ್ವಹಿಸುತ್ತ ಬಂದಿದ್ದಾರೆ. ಎಷ್ಟೇ ಅಚ್ಚುಕಟ್ಟಾಗಿ ಪತ್ರಿಕೆಯನ್ನು ಹೊರತಂದರೂ ಅದು ಸಕಾಲಕ್ಕೆ ಓದುಗರ ಕೈ ಸೇರದಿದ್ದರೆ ಅವರ ಉದ್ದೇಶವೇ ವ್ಯರ್ಥವಾಗುತ್ತದೆ. ವರ್ಷಪೂರ್ತಿ ಅನೇಕ ಸವಾಲುಗಳ ನಡುವೆಯೇ ಪತ್ರಿಕಾ ವಿತರಕರು ಬದ್ಧತೆಯಿಂದ ಪತ್ರಿಕೆಯನ್ನು ಓದುಗರಿಗೆ ತಲುಪಿಸುವ ಮೂಲಕ ತಮ್ಮ ವೃತ್ತಿಧರ್ಮ ಪಾಲಿಸಿಕೊಂಡು ಬರುತ್ತಿದ್ದಾರೆ. ಅವರಿಲ್ಲದೆ ಪತ್ರಿಕೆಗಳು ಇಲ್ಲ’ ಎಂದರು.

ಪತ್ರಿಕಾ ವಿತರಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಚಂದ್ರ ರೆಡ್ಡಿ ಮಾತನಾಡಿ, ‘ಜಗತ್ತು ಮಲಗಿರುವಾಗಲೇ ಎಲ್ಲರಿಗಿಂತಲೂ ಮೊದಲು ಎದ್ದು, ಮಳೆ, ಚಳಿ, ಗಾಳಿ ಲೆಕ್ಕಿಸದೆ ಎಷ್ಟೇ ಕಷ್ಟಗಳು ಇದ್ದರೂ ಪತ್ರಿಕೆ ವಿತರಣೆ ಮಾಡುತ್ತೇವೆ. ಆದರೆ ಈವರೆಗೆ ವಿತರಕರನ್ನು ಯಾರೂ ಗುರುತಿಸುವ ಕೆಲಸ ಮಾಡಿಲ್ಲ. ಇನ್ನು ಮುಂದೆ ಇದಕ್ಕೆ ನಾವೇ ಕ್ರಮಕೈಗೊಳ್ಳಬೇಕಾದ ಹೊತ್ತು ಬಂದಿದೆ’ ಎಂದು ಹೇಳಿದರು.

ಪತ್ರಿಕಾ ವಿತರಕ ಕಾಂತರಾಜ್ ಮಾತನಾಡಿ, ‘ಆಧುನಿಕತೆ, ಮಾಹಿತಿ ತಂತ್ರಜ್ಞಾನ ಮುಂದುವರಿದು ಅನೇಕ ಬಗೆಯ ಸುದ್ದಿ ಮಾಧ್ಯಮಗಳನ್ನು ಪರಿಚಯಿಸಿದಾಗಲೂ ಇಂದಿಗೂ ಇಂದಿಗೂ ಜನರು ಪತ್ರಿಕೆಗಳನ್ನು ಅವಲಂಬಿಸುವುದು ಕಡಿಮೆಯಾಗಿಲ್ಲ. ಸುದ್ದಿಯ ವಿಶ್ವಾಸಾರ್ಹತೆ ಕಾಪಾಡುವಲ್ಲಿ ಪತ್ರಿಕೆಗಳ ಪಾತ್ರ ಬಹುಮುಖ್ಯವಾಗಿದೆ. ತೀವ್ರ ಸ್ಪರ್ಧೆಯ ಈ ಕಾಲದಲ್ಲಿ ವಿತರಕರು ಕೂಡ ಇನ್ನಷ್ಟು ಚುರುಕಾಗಿ ಕೆಲಸ ಮಾಡುವ ಅಗತ್ಯವಿದೆ’ ಎಂದು ಹೇಳಿದರು.

ಪತ್ರಕರ್ತ ನಾರಾಯಣಸ್ವಾಮಿ, ಪತ್ರಿಕಾ ವಿತರಕರ ಸಂಘದ ಪದಾಧಿಕಾರಿಗಳಾದ ಲಕ್ಷ್ಮೀನಾರಾಯಣ, ಎಸ್‌.ಎನ್‌. ಮಂಜುನಾಥ್, ಮುನಿ ರಾಜು, ಮುನೇಗೌಡ, ಪತ್ರಿಕೆ ವಿತರಕರು ಮತ್ತು ವಿವಿಧ ಪತ್ರಿಕೆಗಳ ಪ್ರಸರಣ ವಿಭಾಗದ ಪ್ರತಿನಿಧಿಗಳು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.