ADVERTISEMENT

ಪರಿಸರ ರಕ್ಷಣೆ ಎಲ್ಲರ ಹೊಣೆ

ಎಲ್ಲೋಡು ಆರೋಗ್ಯ ಕೇಂದ್ರದಿಂದ ಸ್ವಚ್ಛ ಭಾರತ್ ಅಭಿಯಾನ

​ಪ್ರಜಾವಾಣಿ ವಾರ್ತೆ
Published 8 ಮೇ 2017, 6:58 IST
Last Updated 8 ಮೇ 2017, 6:58 IST
ಗುಡಿಬಂಡೆ: ‘ಪರಿಸರ ಅಸಮತೋಲನದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಎಲ್ಲರೂ   ಪರಿಸರ ರಕ್ಷಿಸಲು ಮುಂದಾಗಬೇಕು’ ಎಂದು ಎಲ್ಲೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಮಂಜುನಾಥ್ ತಿಳಿಸಿದರು.
 
 ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಯೋಜಿಸಿದ್ದ ಸ್ವಚ್ಛ ಭಾರತ್ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
 
‘ನಮ್ಮ ಸುತ್ತಲಿನ ನೀರು, ಚರಂಡಿ, ರಸ್ತೆ, ಶೌಚಾಲಯಗಳ ಸ್ವಚ್ಛತೆಯನ್ನು ಕಾಪಾಡಬೇಕು. ಜೊತೆಗೆ ಈ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಪರಿಸರ ಸ್ವಚ್ಛತೆ ಕಾಪಾಡಿಕೊಂಡಾಗ ಮಾತ್ರ ಒಳ್ಳೆಯ ಆಮ್ಲಜನಕ ದೊರೆ ಯುತ್ತದೆ. ಮನುಷ್ಯ ಆರೋಗ್ಯದಿಂದ ಜೀವನ ಸಾಗಿಸಲು ಸಾಧ್ಯ’ ಎಂದರು.
 
‘ಮಹಾತ್ಮ ಗಾಂಧಿ ಅವರು ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ್ದರು. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಸಾರ್ವಜನಿಕರು ಕೈ ಜೋಡಿಸಬೇಕು’ ಎಂದರು.
 
ಬೀಚಗಾನಹಳ್ಳಿ ಆರೋಗ್ಯ ಕೇಂದ್ರದ ವೈದ್ಯೆ ಡಾ.ಮಹಿಮಾ, ‘ಜನಸಾಮಾನ್ಯರು ನೈರ್ಮಲ್ಯದ ವಿಚಾರದಲ್ಲಿ ಸಂಕುಚಿತ ಮನೋಭಾವನೆ ಹೊಂದಿರುವುದು ವಿಷಾದನೀಯ. ಇದನ್ನು ಮನಸ್ಸಿನಿಂದ ತೊಡೆದು ಹಾಕಬೇಕು. ಮೊದಲು ನಮ್ಮ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿಟ್ಟು ಕೊಳ್ಳಬೇಕು’ ಎಂದು ಸಲಹೆ ನೀಡಿದರು.
 
‘ಪರಿಸರ ಅಸಮತೋಲನದಿಂದ ಉಷ್ಣಾಂಶ ಹೆಚ್ಚಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಮರಗಳನ್ನು ಬೆಳೆಸಬೇಕಿದೆ. ಆರೋಗ್ಯವಂತರಾಗಿ ಬಾಳಲು ಸ್ವಚ್ಛತೆ ಕಾಪಾಡಲು ಎಲ್ಲರೂ ಬದ್ಧರಾಗಿರಬೇಕು’ ಎಂದು ಸಲಹೆ ನೀಡಿದರು. 
 
ಎಲ್ಲೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಹಿರಿಯ ಆರೋಗ್ಯ ನಿರೀಕ್ಷಕರಾದ ನರಸಿಂಹಯ್ಯ,  ಗೀತಾಂಜಲಿ,  ಸಿಬ್ಬಂದಿ   ಸುನೀಲ್ ಕುಮಾರ್, ಮಂಜುನಾಥ್, ಗಂಗಾಧರ್, ನಿರ್ಮಲಾದೇವಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.