ADVERTISEMENT

ಪೊಲೀಸರ ವಿರುದ್ಧ ಆರೋಪ

ದಲಿತರ ಕುಂದು–ಕೊರತೆ ಸಭೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 11:10 IST
Last Updated 3 ಸೆಪ್ಟೆಂಬರ್ 2015, 11:10 IST

ಚಿಂತಾಮಣಿ: ನಗರಸಭೆ ಸಭಾಂಗಣದಲ್ಲಿ ಈಚೆಗೆ ನಡೆದ ದಲಿತರ ಕುಂದು–ಕೊರತೆ ಸಭೆಯಲ್ಲಿ ಪೊಲೀಸ್‌ ವಿರುದ್ಧ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಮುಖಂಡ ಕವಾಲಿ ವೆಂಕಟರಮಣಪ್ಪ ಮಾತನಾಡಿ, ನಗರದಲ್ಲಿ ನಿತ್ಯ ಕಳವು ಪ್ರಕರಣಗಳು ನಡೆಯುತ್ತಿದ್ದರೂ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ದೂರಿದರು.

ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಜನ ಹಾಗೂ ವಾಹನ ದಟ್ಟಣೆ ಹೆಚ್ಚಿದ್ದರೂ ಪೊಲೀಸರು ಕ್ರಮ ಜರುಗಿಸುತ್ತಿಲ್ಲ ಎಂದು ಟೀಕಿಸಿದರು. ನಗರದ ಡೈಮಂಡ್‌ ಚಿತ್ರಮಂದಿರ ರಸ್ತೆ, ಆಜಾದ್‌ ಚೌಕ ಮತ್ತಿತರ ಕಡೆಗಳಲ್ಲಿ ಮಟ್ಕಾ, ದಲಿತರ ಕಾಲೊನಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಿರಂತರವಾಗಿ ನಡೆಯುತ್ತಿದೆ ಎಂದರು.

ಮಾದಿಗ ದಂಡೋರ ಮುಖಂಡ ದೇವರಾಜ್‌ ಮಾತನಾಡಿ ಪೊಲೀಸರು ನಿಜವಾದ ಆರೋಪಿಗಳನ್ನು ಹಿಡಿಯಲಾಗದೇ ಅಮಾಯಕರ ಮೇಲೆ ಮೊಕದ್ದಮೆ ದಾಖಲಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ತಾಲ್ಲೂಕಿನ ಯಾತ್ರಾಸ್ಥಳವಾದ ಕೈವಾರದಲ್ಲಿ ಪೊಲೀಸ್‌ ಹೊರಠಾಣೆಗೆ ಅಗತ್ಯ ಸಿಬ್ಬಂದಿ ಇಲ್ಲ ಎಂದರು. ನಗರಸಭೆ ಸದಸ್ಯ ಸಾದಪ್ಪ, ಸಂಪಂಗಿರಾಮಯ್ಯ ಅವರು ತಮ್ಮನ್ನು ಸಭೆಗೆ ಆಹ್ವಾನಿಸದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ದಲಿತ ಸೇನೆಯ ಆನಂದ್‌, ಬೀಡಾ ಶ್ರೀನಿವಾಸ್‌, ದಲಿತ ಸಂಘರ್ಷ ಸಮಿತಿಯ ವಿಜಯನರಸಿಂಹ ಮಾತನಾಡಿ, ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ದಲಿತರಿಗೆ ಕ್ಷೌರ ನಿರಾಕರಿಸಲಾಗುತ್ತಿದೆ. ಪೊಲೀಸ್‌ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕು ಎಂದು ಅರುಣ್‌ಕುಮಾರ್‌ ಕೋರಿದರು.

ಪೊಲೀಸ್‌ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್‌ ಮಾತನಾಡಿ, 2014ರಲ್ಲಿ 100ಕ್ಕೂ ಹೆಚ್ಚು ಅಕ್ರಮ ಮರಳು ಸಾಗಣೆ ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ₹2 ಕೋಟಿ ದಂಡ ವಸೂಲಿ ಮಾಡಲಾಗಿದೆ. 2015 ನೇ ಸಾಲಿನಲ್ಲಿ ಈವರೆಗೆ 119 ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು. ಡಿವೈಎಸ್ಪಿ ಸಣ್ಣತಿಮ್ಮಪ್ಪ, ಗ್ರಾಮಾಂತರ ವಿಭಾಗದ ಸರ್ಕಲ್‌ ಇನ್‌ಸ್ಪೆಕ್ಟರ್‌, ಆನಂದಕುಮಾರ್‌, ನಗರಠಾಣೆಯ ಇನ್‌ ಸ್ಪೆಕ್ಟರ್‌ ಎಂ.ಮಂಜುನಾಥ್‌ ಹಾಗೂ ಮತ್ತಿತರರು ಸಭೆಯಲ್ಲಿ   ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.