ADVERTISEMENT

ಬರಗಾಲ ಎದುರಿಸಲು ಸಜ್ಜಾಗಿ: ಸೂಚನೆ

ಚಿಂತಾಮಣಿಯಲ್ಲಿ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2014, 5:13 IST
Last Updated 18 ಸೆಪ್ಟೆಂಬರ್ 2014, 5:13 IST

ಚಿಂತಾಮಣಿ: ಜಿಲ್ಲೆ, ತಾಲ್ಲೂಕಿನಲ್ಲಿ ತಲೆದೋರಿರುವ ಬರಗಾಲ ಪರಿಸ್ಥಿತಿ­ಯನ್ನು ಎದುರಿಸಲು ಸಮರೋಪಾ­ದಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ಎನ್‌.­ಕೇಶವರೆಡ್ಡಿ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಆದೇಶ ನೀಡಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣ­ದಲ್ಲಿ ಬುಧವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ, ಮಳೆ ಕೊರತೆಯಿಂದ ರೈತರಿಗೆ ಆದ ನಷ್ಟದ ಬಗ್ಗೆ ಸೂಕ್ತ ಸಮೀಕ್ಷೆ ನಡೆಸಿ ಸಮಗ್ರ ವರದಿ ಸಲ್ಲಿಸು­ವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನಲ್ಲಿ ಆಗಸ್ಟ್‌ನಲ್ಲಿ ಶೇ 25ರಷ್ಟು ಮಾತ್ರ ಮಳೆಯಾಗಿದೆ. 27,­456 ಎಕೆರೆಯಲ್ಲಿ ಬಿತ್ತನೆ ಮಾಡಿದ್ದು ಶೇ.10ರಷ್ಟು ಮಾತ್ರ ಬೆಳೆ ಸಿಗಬಹು­ದೆಂದು ಅಂದಾಜಿಸಲಾಗಿದೆ. ಮುಂಗಾನ­ಹಳ್ಳಿ ಹೋಬಳಿಯಲ್ಲಿ ತೊಗರಿ, ನೆಲಗಡಲೆ ಸಂಪೂರ್ಣ­ವಾಗಿ ಹಾಳಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ನಯೀಂ ಪಾಷಾ ತಿಳಿಸಿದರು.

ತಾಲ್ಲೂಕಿನಲ್ಲಿ ಜಾನುವಾರುಗಳಿಗೆ ಮೇವು ಇದೆಯೇ? ಮೇವಿನ ಬೀಜ ವಿತರಿಸಿದ್ದೀರಾ, ಮೇವು ಬೆಳೆ ಬಂದಿ­ದೆಯೇ ಎಂದು ಜಿಲ್ಲಾ ಪಂಚಾ­ಯಿತಿ ಸದಸ್ಯ ಚಿನ್ನಪ್ಪ ಕೇಳಿದ ಪ್ರಶ್ನೆಗಳಿಗೆ ಪಶು­ವೈದ್ಯಾಧಿಕಾರಿಗಳು ಸಮರ್ಪಕ ಉತ್ತರ ನೀಡಲಿಲ್ಲ. ಜಾನುವಾರು ಮೇವಿನ ಸಮಸ್ಯೆ ಬಗ್ಗೆಯೂ ಸಮಗ್ರವಾಗಿ ಪರಿಶೀಲಿಸಿ ಮೇವು ಬ್ಯಾಂಕ್‌ ಸ್ಥಾಪನೆ ಬಗ್ಗೆ  ಪ್ರಸ್ತಾ­ವನೆ ಸಲ್ಲಿಸುವಂತೆ ಪಶು­ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚಿಸ­ಲಾಯಿತು.

ಪಶುಪಾಲನಾ ಇಲಾಖೆಯಿಂದ ತಾಲ್ಲೂ­­ಕಿನಾದ್ಯಂತ 1,03,597 ಜಾ­ನು­­ವಾರುಗಳಿಗೆ ಕರಳುಬೇನೆ ಲಸಿಕೆ ಮತ್ತು 25,975 ಗಳಲೆ ರೋಗ ಲಸಿ­ಕೆ­ಯ­ನ್ನು ಹಾಕಲಾಗಿದೆ ಎಂದು ಪಶು­ವೈ­ದ್ಯಾ­­ಧಿಕಾರಿ ಮಧುಸೂದನರೆಡ್ಡಿ ತಿಳಿಸಿದರು. ಕಳೆದ  ತಿಂಗಳಿನಲ್ಲಿ ಎಸ್‌ಎಂಎಸ್‌ ಮಾಡಿ­ರುವ ಆಹಾರ ಪಡಿತರ ಚೀಟಿಗಳ ಮಾಹಿತಿಯನ್ನು ನೀಡಲು ವಿಫಲರಾದ ಆಹಾರ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಳ್ಳಲಾಯಿತು.

ಹಾಸ್ಟೆಲ್‌ಗಳಲ್ಲಿ ಶೌಚಾಲಯ, ಕುಡಿ­ಯುವ ನೀರು, ತಟ್ಟೆ–ಲೋಟ, ಹೊದಿಕೆ ಮತ್ತಿತರರ ವಸ್ತುಗಳ ವಿತರಣೆಯಲ್ಲಿ ಗುಣಮಟ್ಟ ಕಾಪಾಡಬೇಕು. ಕಳಪೆ ವಸ್ತುಗಳ ವಿತರಣೆ ತಡೆಗೆ ಕ್ರಮ, ತಾಲ್ಲೂಕು ಸಮಾಜ ಕಲ್ಯಾಣ ಇಲಾ­ಖೆಯ ಅಧಿಕಾರಿಗಳು ಮೂಲ­ಸೌಲ­ಭ್ಯಗಳನ್ನು ಕಲ್ಪಿಸಲು 1 ತಿಂಗ­ಳೊಳಗಾಗಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಕಠಿಣ ಕ್ರಮಕೈಗೊಳ್ಳ­ಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.

ಮೀನುಗಾರಿಕೆ ಇಲಾಖೆ ವತಿಯಿಂದ ಆರು ಜನ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಾಗೇಂದ್ರ ತಿಳಿಸಿದರು. ಶಿಕ್ಷಣ, ಆರೋಗ್ಯ, ಅರಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿ­ಶೀಲನೆ ನಡೆಸಿ, ಅಧಿಕಾರಿಗಳ ಕಾರ್ಯ­ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಶೀಘ್ರವಾಗಿ ಕೆಲಸ ಮಾಡಲು ಸೂಚಿಸಿದರು.ಜಿ.ಪಂ.ಉಪಾಧ್ಯಕ್ಷೆ ವೀಣಾ­ಗಂಗು­ಲಪ್ಪ, ಸದಸ್ಯರಾದ ಉಮಾ­ದೇವಿ, ಮಂಜುಳಮ್ಮಾ, ಶ್ರೀರಾಮ­ರೆಡ್ಡಿ, ಇಒ ವಸಂತಕುಮಾರ್‌, ತಾಲ್ಲೂಕಿನ ಇತರ ಇಲಾಖೆಗಳ ಅಧಿಕಾರಿಗಳು ಭಾಗವ­ಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.