ADVERTISEMENT

ಬರದಲ್ಲಿ ರಾಜಕೀಯ ಬಿಡಿ: ರೈತರ ಆಕ್ರೋಶ

ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 6:35 IST
Last Updated 2 ಫೆಬ್ರುವರಿ 2017, 6:35 IST
ಬರದಲ್ಲಿ ರಾಜಕೀಯ ಬಿಡಿ: ರೈತರ ಆಕ್ರೋಶ
ಬರದಲ್ಲಿ ರಾಜಕೀಯ ಬಿಡಿ: ರೈತರ ಆಕ್ರೋಶ   
ಚಿಂತಾಮಣಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬರಗಾಲದ ಬಗ್ಗೆಯೂ ರಾಜಕೀಯ ಮಾಡದೆ ಜನರು ಮತ್ತು ಜಾನುವಾರುಗಳಿಗೆ ನೀರು, ಮೇವು, ಆಹಾರ ಒದಗಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
 
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಹಿಂದೆಂದೂ ಕಾಣದಂತಹ ಭೀಕರವಾದ ಬರಗಾಲ ತಲೆದೋರಿದೆ. ರೈತರು, ಕೃಷಿ ಕಾರ್ಮಿಕರು ಜೀವನ ನಡೆಸಲು ಪರದಾಡುತ್ತಿದ್ದು ವಲಸೆ ಹೋಗುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ದೂರುತ್ತಾ ರಾಜಕೀಯ ನಡೆಸುತ್ತಿವೆ  ಎಂದು ಪ್ರತಿಭಟನಾಕಾರರು ಆರೋಪಿಸಿದರು.
 
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಗೋಪಿನಾಥ್‌ ಮಾತನಾಡಿ ಸರ್ಕಾರ ಕೇವಲ ಬರಗಾಲದ ಘೋಷಣೆ ಮಾಡಿರುವುದನ್ನು ಹೊರತುಪಡಿಸಿ ಯಾವ ಕ್ರಮವನ್ನು ಕೈಗೊಂಡಿಲ್ಲ. ರೈತರಿಗೆ ಕೆಲಸ ಮತ್ತು ಜಾನುವಾರುಗಳಿಗೆ ಮೇವು ನೀರು  ಕೊಡುವ ಕೆಲಸ ಸಮರ್ಪಕವಾಗಿ ಮಾಡಬೇಕು ಎಂದು ಒತ್ತಾಯಿಸಿದರು.
 
ಹೋಬಳಿಗೊಂದು ಗೋಶಾಲೆಗಳನ್ನು ತೆರೆದರೆ ಪ್ರಯೋಜನವಿಲ್ಲ. ಸೀಮೆ ಹಸುಗಳನ್ನು ದೂರ ನಡೆಸಿಕೊಂಡು ಹೋಗಲು ಸಾಧ್ಯವಿಲ್ಲ. ಪ್ರತಿ ಪಂಚಾಯಿತಿಯಲ್ಲೂ ಗೋಶಾಲೆಗಳನ್ನು ತೆರೆಯಬೇಕು. ಉಚಿತವಾಗಿ ಮೇವು ಮತ್ತು ನೀರಿನ ವ್ಯವಸ್ಥೆ ಮಾಡಬೇಕು. ರೈತರು ಬಂಡವಾಳವನ್ನು ಕೃಷಿಗಾಗಿ ಉಪಯೋಗಿಸಿ ಬರಗಾಲದಿಂದ ನಷ್ಠಹೊಂದಿದ್ದು ಹಣವಿಲ್ಲದೆ ಕೈಕಟ್ಟ ಕುಳಿತಿದ್ದಾರೆ. ಅವರಿಗೆ ಮೇವಿಗಾಗಿ ಹಣ ನೀಡಬೇಕು ಎಂದು ಕೇಳಬಾರದು ಎಂದು ಆಗ್ರಹಪಡಿಸಿದರು.
 
ಕಂಪನಿಗಳಿಗೆ ನಷ್ಠದ ಹೆಸರಿನಲ್ಲಿ ಸಾವಿರಾರು ಲಕ್ಷ ಕೋಟಿ ರೂಗಳನ್ನು ವಸೂಲಿಯಾಗದ ಹಣ ಎಂದು ಮನ್ನಾ ಮಾಡುತ್ತೀರಿ, ರೈತರಿಗೂ ಕೃಷಿಗಾಗಿ ಮಾಡಿರುವ ಎಲ್ಲ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
 
ಗ್ರಾಮೀಣ ಭಾಗಗಳಲ್ಲಿ ಈಗಾಗಲೇ ನೀರಿನ ಕೊರತೆ ತೀವ್ರವಾಗಿ ಬಾಧಿಸುತ್ತಿದೆ. ಕೆರೆ, ಕುಂಟೆಗಳಿಗೆ ನೀರು ಬರಲಿಲ್ಲ, ಕೊಳವೆಬಾವಿಗಳು ಬತ್ತಿ ಹೋಗಿವೆ. ಮುಂದಿನ ಮಾರ್ಚಿ, ಏಪ್ರಿಲ್‌ನಲ್ಲಿ ಪರಿಸ್ಥಿತಿ ಇನ್ನೂ ಭೀಕರವಾಗುತ್ತದೆ. ಕುಡಿಯುವ ನೀರನ್ನು ಒದಗಿಸಲು ಸಮರ್ಪಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
 
ಭೀಕರ ಬರಗಾಲ ಹಾಗೂ ಕೇಂದ್ರ ಸರ್ಕಾರದ ನೋಟುಗಳ ಅಮಾನ್ಯೀಕರಣದ ಪರಿಣಾಮವಾಗಿ ಜನತೆಗೆ ಕೆಲಸ ಸಿಗದಂತಾಗಿದೆ, ಹಣದ ಕೊರತೆ ಉಂಟಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಸೂಕ್ತವಾಗಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಪಡಿಸಿದರು.
 
ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ ಮಾತನಾಡಿ ಬರಗಾಲದ ಹಿನ್ನಲೆಯಲ್ಲಿ ಪ್ರತಿ ಎಕರೆಗೆ 25 ಸಾವಿರ ರೂ ಬೆಳೆನಷ್ಠ ಪರಿಹಾರವನ್ನು ನೀಡಬೇಕು. ಪಡಿತರ ಅಂಗಡಿಗಳ ಮೂಲಕ ಸಮರ್ಪಕವಾಗಿ ಆಹಾರ ಪದಾರ್ಥಗಳನ್ನು ರಿಯಾಯಿತಿ ದರದಲ್ಲಿ ನೀಡಬೇಕು ಎಂದರು.
 
ತಹಶೀಲ್ದಾರ್‌ ಪರವಾಗಿ ಶಿರಸ್ತೆದಾರ್‌ ಅಣ್ಣಪ್ಪ ಮನವಿ ಸ್ವೀಕರಿಸಿ, ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸುವುದಾಗಿ ಭರವಸೆ ನೀಡಿದರು.
 
ಕೃಷ್ಣಾರೆಡ್ಡಿ, ಗೋಪಸಂದ್ರ ಶಂಕರಪ್ಪ, ಮುರಳಿ, ನರಸಿಂಹಪ್ಪ, ನಾರಾಯಣಸ್ವಾಮಿ, ದೊಡ್ಡಗಂಜೂರು ಕೃಷ್ಣಾರೆಡ್ಡಿ, ರತ್ನಮ್ಮ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
 
**
ನರೇಗಾ ಕೂಲಿ ಕೆಲಸದ ದಿನಗಳನ್ನು 150 ರಿಂದ 200 ದಿನಗಳಿಗೆ ಹಾಗೂ ಕೂಲಿಯನ್ನು ₹224 ರಿಂದ 275 ಕ್ಕೆ ಹೆಚ್ಚಿಸಬೇಕು.
–ಸಿ.ಗೋಪಿನಾಥ್‌
ಜಿಲ್ಲಾ  ಘಟಕದ ಅಧ್ಯಕ್ಷ, 
ಕರ್ನಾಟಕ ಪ್ರಾಂತ  ರೈತ  ಸಂಘ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.