ADVERTISEMENT

ಬರ ಪರಿಹಾರ ನೀಡದೇ ನಿರ್ಲಕ್ಷ್ಯ

ಬಿಜೆಪಿ ಕಾರ್ಯಕರ್ತರಿಂದ ತಹಶೀಲ್ದಾರ್‌ಗೆ ಮನವಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2017, 8:47 IST
Last Updated 10 ಮಾರ್ಚ್ 2017, 8:47 IST

ಶಿಡ್ಲಘಟ್ಟ: ರಾಜ್ಯ ಸರ್ಕಾರ ಕೇವಲ ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿ ಬರ ಪರಿಹಾರ ನೀಡದೇ ನಿರ್ಲಕ್ಷ್ಯ ತೋರುತ್ತಿದೆ ಎಂದು ಬಿಜೆಪಿ ತಾಲ್ಲೂಕು ಘಟಕ ಅಧ್ಯಕ್ಷ ಬಿ.ಸಿ.ನಂದೀಶ್‌ ಆರೋಪಿಸಿದರು.

ನಗರದ ತಾಲ್ಲೂಕು ಕಚೇರಿಯ ಮುಂದೆ ಗುರುವಾರ ಬಿಜೆಪಿ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಬರ ನಿರ್ವಹಣೆಗೆ ರಾಜ್ಯ ಸರ್ಕಾರದಿಂದ ಈಗಾಗಲೇ ಸಮರೋಪಾದಿಯಲ್ಲಿ ಪರಿಹಾರ ಕಾರ್ಯವನ್ನು ಕೈಗೊಳ್ಳಬೇಕಿತ್ತು.

ಸಚಿವರು ರಾಜ್ಯದಲ್ಲಿ ಪ್ರವಾಸ ಕೈಗೊಂಡು ರೈತರ ನೆರವಿಗೆ ಧಾವಿಸಬೇಕಿತ್ತು. ಆದರೆ ಅವರು ಬೆಂಗಳೂರಿನಲ್ಲಿ ಕುಳಿತು ಕೇಂದ್ರ ಸರ್ಕಾರದ ದೂಷಣೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ  ಎಂದು ಹೇಳಿದರು.

ಕೂಡಲೇ ರೈತರ ಸಾಲ ಮನ್ನಾ ಮಾಡಬೇಕು. ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಕಡೆ ಟ್ಯಾಂಕರುಗಳಿಂದ ನೀರನ್ನು ಒದಗಿಸಬೇಕು. ರೈತರಲ್ಲಿ ಆತ್ಮವಿಶ್ವಾಸ ತುಂಬಲು ಜಿಲ್ಲಾ ಉಸ್ತುವಾರಿ ಸಚಿವರು ತಾಲ್ಲೂಕು ಹಾಗೂ ಜಿಲ್ಲೆಗಳಲ್ಲಿ ರೈತರನ್ನು ಭೇಟಿ ಮಾಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಸದಸ್ಯರು ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ ಅವರಿಗೆ ಮನವಿ ಸಲ್ಲಿಸಿದರು.

ಬಿಜೆಪಿ ಸದಸ್ಯರಾದ ಮುನಿರಾಜು, ಶ್ರೀರಾಮರೆಡ್ಡಿ, ಸುರೇಂದ್ರಗೌಡ, ಸುಜಾತಮ್ಮ, ಮಂಜುಳಮ್ಮ, ದಾಮೋದರ್‌, ಬೈರರೆಡ್ಡಿ, ದೊಣ್ಣಹಳ್ಳಿ ರಾಮಣ್ಣ, ಕೆಂಪರೆಡ್ಡಿ, ರತ್ನಮ್ಮ, ಅಶ್ವಖ್‌ ಅಹ್ಮದ್‌, ನಯಾಜ್‌ ಅಹಮದ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT