ADVERTISEMENT

ಬಾಗಿಲು ತೆರೆಯದ ಪಂಚಾಯಿತಿ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 8:35 IST
Last Updated 23 ಸೆಪ್ಟೆಂಬರ್ 2017, 8:35 IST

ಬಾಗೇಪಲ್ಲಿ: ತಾಲ್ಲೂಕಿನ ಯಲ್ಲಂಪಲ್ಲಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆಯಾದರೂ ಪಂಚಾಯಿತಿ ಕಚೇರಿ ಬಾಗಿಲನ್ನು ತೆರೆಯದ ಕಾರಣಕ್ಕೆ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತಿ ವ್ಯಾಪ್ತಿಗೆ 22 ಹಳ್ಳಿಗಳು ಬರುತ್ತವೆ. ಶೌಚಾಲಯ, ನರೇಗಾ ಹಾಗೂ ಕುಡಿಯುವ ನೀರು, ಚರಂಡಿ ಹೀಗೆ ಅನೇಕ ವಿಚಾರಗಳಿಗಾಗಿ ಪ್ರತಿ ದಿನ ನೂರಾರು ಗ್ರಾಮಸ್ಥರು ಪಂಚಾಯಿತಿಗೆ ಭೇಟಿ ನೀಡುತ್ತಾರೆ. ಆದರೆ ಪಂಚಾಯಿತಿ ಸಿಬ್ಬಂದಿ ಮಧ್ಯಾಹ್ನವಾದರೂ ಕಚೇರಿ ಬಾಗಿಲು ತೆರೆಯದ ಕಾರಣಕ್ಕೆ ಜನರು ಕೆಲಸ ಬಿಟ್ಟು ಪಂಚಾಯಿತಿಗೆ ಅಲೆದಾಡುವಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರೆಡ್ಡಪ್ಪ ಅವರನ್ನು ಪ್ರಶ್ನಿಸಿದರೆ, ‘ಯಲ್ಲಂಪಲ್ಲಿ ಪಿಡಿಒ ನಾರಾಯಣಸ್ವಾಮಿ ಅವರನ್ನು ಮೂರು ಗ್ರಾಮ ಪಂಚಾಯಿತಿಗಳಿಗೆ ನಿಯೋಜನೆ ಮಾಡಲಾಗಿದೆ. ಆದ್ದರಿಂದ ಕೆಲಸಗಳ ಒತ್ತಡದಿಂದ ಹೀಗೆ ಆಗಿರಬಹುದು. ಕಚೇರಿ ಸಿಬ್ಬಂದಿಗೆ ಜ್ವರ ಬಂದಿರುವ ಕಾರಣಕ್ಕೆ ಆಸ್ಪತ್ರೆಗೆ ಹೋಗಿದ್ದಾರೆ. ಹೀಗಾಗಿ ಕಚೇರಿ ಬಾಗಿಲು ತೆರೆಯುವುದು ವಿಳಂಬವಾಗಿರುಬಹುದು’ ಎಂದು ಹೇಳಿದರು.

ADVERTISEMENT

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ವರೂಪರಾಣಿ ಮಾತನಾಡಿ, ‘ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾರಾಯಣಸ್ವಾಮಿ ಅವರನ್ನು ತಾತ್ಕಾಲಿಕವಾಗಿ ನಿಯೋಜನೆ ಮಾಡಿರುವುದನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರೆಡ್ಡಪ್ಪ ಅವರ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಾನು ಬೆಳಿಗ್ಗೆ 6 ಗಂಟೆಗೆ ಕಚೇರಿ ಬಾಗಿಲು ತೆರೆದು ಸಿಬ್ಬಂದಿ ಜತೆ ಶೌಚಾಲಯ ಹಾಗೂ ಇತರ ಕೆಲಸಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಹಳ್ಳಿಗಳ ಪ್ರವಾಸದಲ್ಲಿದ್ದೇನೆ ನನಗೆ ಮೂರು ಗ್ರಾಮ ಪಂಚಾಯತಿಗಳಿಗೆ ನಿಯೋಜನೆ ಮಾಡಿದ್ದು ಕೆಲಸಗಳ ಒತ್ತಡ ಹೆಚ್ಚಾಗಿದೆ’ ಎಂದು ಪಿಡಿಒ ಕೆ.ವಿ.ನಾರಾಯಣಸ್ವಾಮಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.