ADVERTISEMENT

ಬಾಲ್ಯ ವಿವಾಹದ ವಿರುದ್ಧ ಜಾಗೃತಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 11:30 IST
Last Updated 22 ಜೂನ್ 2017, 11:30 IST

ಗೌರಿಬಿದನೂರು: ‘ಬಾಲ್ಯ ವಿವಾಹಗಳು ತಡೆಗಟ್ಟುವಲ್ಲಿ ಸರ್ಕಾರಗಳು ಅನೇಕ ಕಟ್ಟುನಿಟ್ಟಿನ ಕ್ರಮಗಳು ಜಾರಿಗೊಳಿಸಿದರೂ ಸಹ ಅಧಿಕಾರಿಗಳ ಕಣ್ಣು ತಪ್ಪಿಸಿ ಪೋಷಕರು ತಮ್ಮ ಮಕ್ಕಳಿಗೆ ವಿವಾಹ ಮಾಡುತ್ತಿರುವುದು ದುರಂತವೇ ಸರಿ’ ಎಂದು ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ರಾಜೇಂದ್ರ ಪ್ರಸಾದ್ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನ ಗಂಗಸಂದ್ರ ಗ್ರಾಮದಲ್ಲಿ ದಿ ಹಂಗರ್ ಪ್ರಾಜೆಕ್ಟ್ ಮತ್ತು ಸುಗ್ರಾಮ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಸಂಘದ ವತಿಯಿಂದ ಬಾಲ್ಯವಿವಾಹ ನಿಷೇಧ, ಅಕ್ರಮ ಮದ್ಯ ಮಾರಾಟ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವ ಕಾರಣ ಮಂಗಳವಾರ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ತಾಯಿ ಮತ್ತು ಮಗುವಿನ ಹಿತದೃಷ್ಟಿಯಿಂದ ಬಾಲ್ಯ ವಿವಾಹಗಳನ್ನು ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಜಾರಿಗೊಳಿಸಲಾಗಿದೆ’ ಎಂದರು.
‘ಬಾಲ್ಯ ವಿವಾಹದಲ್ಲಿ ಭಾಗವಹಿಸುವ ಪೋಷಕರು ಹಾಗೂ ಸಂಬಂಧಿಕರು, ಮದುವೆ ಮಾಡಿಸುವ ಪುರೋಹಿತ, ನಾಧಸ್ವರ ನುಡಿಸುವವರು ಎಲ್ಲರು ಕಾನೂನಿನ ದೃಷ್ಟಿಯಲ್ಲಿ ಅಪರಾಧಿಗಳಾಗುತ್ತಾರೆ. ತಮ್ಮ ಸುತ್ತಮುತ್ತ  ನಡೆಯುವ ಬಾಲ್ಯ ವಿವಾಹಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು’ ಎಂದರು.

ADVERTISEMENT

‘ತಾಲ್ಲೂಕಿನಲ್ಲಿ ಮಕ್ಕಳ ಸಹಾಯವಾಣಿ 1098 ಕ್ಕೆ ಕರೆ ಮಾಡುವ ಮೂಲಕ ಮಾಹಿತಿ ತಿಳಿಸಿಬಹುದು. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು  ಸೂಕ್ತ ಕ್ರಮಕೈಗೊಳ್ಳುತ್ತಾರೆ’ ಎಂದು ಹೇಳಿದರು.

ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮಕ್ಕಳು ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಗ್ರಾಮದಲ್ಲಿ ಜಾಥಾ ನಡೆಸುವ ಮೂಲಕ ಕರಪತ್ರಗಳನ್ನು ಹಂಚಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ನಾಮಗೊಂಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮಣಿ, ಅಸೆಡಾ ಸಂಸ್ಥೆ ಮೇಲ್ವಿಚಾರಕಿ ಸೌಭಾಗ್ಯ, ಗಂಗಸಂದ್ರ ಗ್ರಾಮ ಪಂಚಾಯಿ ಅಭಿವೃದ್ಧಿ ಅಧಿಕಾರಿ ರೂಪಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.