ADVERTISEMENT

ಭೋವಿ ಸಮಾಜಕ್ಕೆ ಅನ್ಯಾಯ

ಜಿ.ಪಂ ಮಾಜಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 4:50 IST
Last Updated 14 ಏಪ್ರಿಲ್ 2017, 4:50 IST

ಬಾಗೇಪಲ್ಲಿ: ‘ಸಂವಿಧಾನದಲ್ಲಿ ಒಳ ಮೀಸಲಾತಿಗೆ ಅವಕಾಶವಿಲ್ಲ. ಆದರೆ ಕೆಲವರ ರಾಜಕೀಯ ಹಿತಾಸಕ್ತಿಗಾಗಿ ಸದಾಶಿವ ಆಯೋಗವನ್ನು ರಚಿಸಿ, ವರದಿಯ ಮೂಲಕ ಭೋವಿ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಕಸಬಾ ಹೋಬಳಿಯ ಹೊಸಕೋಟೆ ಕ್ರಾಸ್ ಸುಂಕಲಮ್ಮ ದೇವಾಲಯ ಸಮೀಪ ಜಿಲ್ಲಾ ಮಟ್ಟದ ಭೋವಿ (ವಡ್ಡರ) ಯುವ ವೇದಿಕೆ ಈಚೆಗೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು.

‘ಈಗಿರುವ ಮೀಸಲಾತಿಯಲ್ಲಿಯೇ ಭೋವಿ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಅಂತಹುದರಲ್ಲಿ ಸದಾಶಿವ ಆಯೋಗದ ವರದಿಯೇನಾದರೂ ಜಾರಿಗೆ ಬಂದರೆ ಕೇವಲ ಶೇ 1ರಷ್ಟು ಮಾತ್ರ ಮೀಸಲಾತಿ ದೊರೆಯಲಿದೆ’ ಎಂದರು.

‘ನಮ್ಮನ್ನು ಆಳುವ ಸರ್ಕಾರಗಳು ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಲು ಯತ್ನಿಸುತ್ತಿವೆ. ಆದ್ದರಿಂದ ಭೋವಿ ಸಮಾಜದ ಯುವಕರು ಹೋರಾಟಕ್ಕೆ ಸಿದ್ಧರಾಗಬೇಕು. ಜತೆಗೆ ಸಂವಿಧಾನ ಬದ್ಧವಾದ ಹಕ್ಕುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು. ಅಷ್ಟೇ ಅಲ್ಲ ಸದಾಶಿವ ಆಯೋಗದ ವರದಿಯನ್ನು ವಿರೋಧಿಸಬೇಕು’ ಎಂದರು.

ಮುಖಂಡ ಲಕ್ಷ್ಮಿಪತಿ ಮಾತನಾಡಿ, ‘ಮೀಸಲಾತಿ ಪಡೆಯುವುದು ಭಿಕ್ಷೆಯಲ್ಲ, ನಮ್ಮ ಸಂವಿಧಾನ ಬದ್ಧ ಹಕ್ಕು. ಕೆಲವರು ಹೋರಾಟಕ್ಕೆ ತಮ್ಮ ಜೀವನವನ್ನು ಮೀಸಲಿಟ್ಟದ್ದಾರೆ’ ಎಂದರು.

ಭೋವಿ ಸಮಾಜದ ಗೌರಿಬಿದನೂರಿನ ವೆಂಕಟೇಶ್ ಮಾತನಾಡಿ, ‘ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಉನ್ನತಿಗೆ ಶ್ರಮಿಸಬೇಕು’ ಎಂದು ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅಶ್ವತ್ಥಪ್ಪ ಮಾತನಾಡಿ, ‘ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಭೋವಿ ಸಮುದಾಯ ಭವನ ನಿರ್ಮಾಣಕ್ಕೆ ₹ 1.5 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದೇ ಅಲ್ಲದೆ ಸೂಕ್ತ ಸ್ಥಳವನ್ನು ನೀಡಿದ್ದಾರೆ. ಇದರ ಪ್ರಯೋಜನವನ್ನು ಸಮುದಾಯ ಪಡೆದುಕೊಳ್ಳಬೇಕು’ ಎಂದರು.

ಮುಖಂಡರಾದ ವೆಂಕಟರವಣ, ಉದಯ್, ಆರ್.ವೆಂಕಟೇಶ್, ಕೆ.ವಿ.ಶ್ರೀನಿವಾಸ್, ಜಯರಾಂ, ಲಕ್ಷ್ಮಿನಾರಾಯಣ, ಮಂಜು, ರಾಮಲಿಂಗಪ್ಪ, ಸುಬ್ರಮಣಿ, ಮಂಜುನಾಥ್, ರಾಮಾಂಜಿ, ಮಂಜು, ನಾರಾಯಣಪ್ಪ, ವೆಂಕಟೇಶ್ ಭಾಗವಹಿಸಿದ್ದರು.

ನೂತನ ಪದಾಧಿಕಾರಿಗಳು: ಸಭೆಯಲ್ಲಿ ತಾಲ್ಲೂಕು ಭೋವಿ (ವಡ್ಡರ) ಯುವ ವೇದಿಕೆಯ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಕೆ.ಪಿ.ಮಂಜುನಾಥ್ (ಅಧ್ಯಕ್ಷ ), ಕೆ.ನಾರಾಯಣಸ್ವಾಮಿ (ಉಪಾಧ್ಯಕ್ಷ ), ಅಶೋಕ್, ಮಂಜುನಾಥ್ (ಪ್ರಧಾನ ಕಾರ್ಯದರ್ಶಿ),  ಎನ್.ರಾಜೇಶ್ (ಕಾರ್ಯದರ್ಶಿ), ಕೆ.ವಿ.ಅನಿಲ್‌ ಕುಮಾರ್ (ಖಜಾಂಚಿ), ಬಿ.ಮಹೇಶ್, ಟಿ.ಮುನಿರಾಜ್ (ಸಂಘಟನಾ ಸಂಚಾಲಕ), ಎಂ.ವಿ.ಶ್ರೀಕಾಂತ್, ಹರೀಶ್, ಸಿ.ರವೀಂದ್ರ, ಮೂರ್ತಿ (ಸಮಿತಿ ಸದಸ್ಯ) ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.