ADVERTISEMENT

ಮಂಜು ಮೋಡ ಕವಿದಿದೆ...

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2014, 10:00 IST
Last Updated 24 ನವೆಂಬರ್ 2014, 10:00 IST
ಚಿಕ್ಕಬಳ್ಳಾಪುರ ರೈಲ್ವೆ ನಿಲ್ದಾಣ ದಟ್ಟವಾದ ಮಂಜು ಕವಿದಿರುವುದು.
ಚಿಕ್ಕಬಳ್ಳಾಪುರ ರೈಲ್ವೆ ನಿಲ್ದಾಣ ದಟ್ಟವಾದ ಮಂಜು ಕವಿದಿರುವುದು.   

ಚಿಕ್ಕಬಳ್ಳಾಪುರ: ಯಾವುದೇ ಕೆಲಸ­ಕಾರ್ಯ­ವಿಲ್ಲದೇ ಬೆಳಿಗ್ಗೆ 6ರಿಂದ 8ರ ವರೆಗೆ ಬಿಡುವಾಗಿದ್ದರೆ ಮತ್ತು ಮನಸ್ಸು ಕೊಂಚ ಪ್ರಶಾಂತವಾಗಿದ್ದರೆ, ಆಹ್ಲಾದ­ಕರ ವಾತಾವರಣ ಹುಡು­ಕುತ್ತ ಹೆಚ್ಚು ದೂರ ಹೋಗ­ಬೇಕಿಲ್ಲ. ನಗರದ ಹೃದ­ಯಭಾಗ­ದಲ್ಲಿರುವ ರೈಲ್ವೆ ನಿಲ್ದಾಣಕ್ಕೆ ಹೋದರೆ ಸಾಕು, ಮಂಜಿನಲ್ಲಿ ಮಿಂದೆದ್ದ ಚೆಂದನೆಯ ಅನುಭವ ಉಂಟಾ­ಗುತ್ತದೆ. 10 ಅಡಿ ದೂರದಲ್ಲಿ ನಿಂತಿರುವ ವ್ಯಕ್ತಿಯೂ ಕಾಣದಂತೆ ಆವ­ರಿ­ಸಿಕೊಳ್ಳುವ ಮಂಜು ಇಡಿ ವಾತಾ­ವ­ರಣ ಶ್ವೇತಮಯ­ಗೊಳಿಸುತ್ತದೆ.

ರೈಲ್ವೆ ನಿಲ್ದಾಣದ ಇಡಿ ಆವರಣ­ವ­ಲ್ಲದೇ ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ಬರಿ ಮಂಜು ಕಾಣಿಸುತ್ತದೆ. ಪುಟ್ಟ ಪುಟ್ಟ ಹೆಜ್ಜೆಯಿಟ್ಟು ನಡೆಯುತ್ತ ಹೋದಷ್ಟು ಶ್ವೇತ ಬಣ್ಣದೊಳಗೆ ಕಳೆದುಹೋಗು­ತ್ತಿ­ದ್ದೇವೆ ಎಂಬಂತೆ ಭಾಸವಾಗುತ್ತದೆ. ಆದರೆ ಮನಸೋಇಚ್ಛೆ ಮಂಜಿನ ಒಂದು ಅಂಶವನ್ನು ಸಹ ಆಚೀಚೆ ಕದಲಿಸಲು ಆಗುವುದಿಲ್ಲ. ದೂರದಿಂದ ಬರುತ್ತಿರುವ ವಾಯು ವಿಹಾರಿಗಳನ್ನು ಕಂಡು ಬಿಟ್ಟರಂತೂ ಯಾವುದೋ ಕಣಿವೆ ಪ್ರದೇಶದಿಂದ ಬರುತ್ತಿರುವಂತೆ ಕಾಣುತ್ತಾರೆ.

ಅಂದವಾದ ಬಿಳಿ ಮೊಗದ ಮೇಲೆ ಕೆಂಪು ಕುಂಕುಮ ಇಟ್ಟಂತೆ ಸಿಗ್ನಲ್‌ ದೀಪ ಕಂಡರೆ, ಉದ್ದನೆಯ ರೈಲಿನ ಅರ್ಧ ಭಾಗವನ್ನು ಮಂಜು ತನ್ನ ವಶಕ್ಕೆ ತೆಗೆದುಕೊಂಡಂತೆ ಕಾಣುತ್ತದೆ. ಬಾಯ್ತೆ­­ರೆದರೆ ಹೊರಬರುವ ಹೊಗೆಯು ಬಿಸಿ ಬಿಸಿ ಚಹಾ, ಕಾಫಿಯ ಹೊಗೆ ಜತೆ ಪೈಪೋಟಿ ನಡೆ­ಸುತ್ತಿ­ರು­ವಂತೆ ಗೋಚರವಾಗುತ್ತದೆ. ಬೆಚ್ಚನೆಯ ಸ್ವೆಟರ್‌, ಶಾಲು ಮತ್ತು ಜಾಕೆಟ್‌ ಇದ್ದರೂ ಅದೆಲ್ಲವನ್ನೂ ಕಳಚಿ ಹಾಕಿ ತಂಗಾಳಿ ಮೈಮೇಲೆ ಎಳೆದುಕೊಳ್ಳಲು ಮನಸ್ಸು ಹಾತೊರೆಯುತ್ತದೆ. ಇನ್ನು ಮಂಜಿನಿಂದ ಕೂದಲು ತೇವುಗೊಳ್ಳು­ತ್ತಿರುವಾಗ, ತಲೆಯ ಮೇಲೆ ಟೋಪಿ ಯಾಕೆ ಪುಟ್ಟ ಪ್ರಶ್ನೆ ಕೂಡ ಕಾಡುತ್ತದೆ.

ಇನ್ನು ರಸ್ತೆಗಳ ಮೇಲಿನ ಮಂಜಿನ ಆಧಿಪತ್ಯವನ್ನು ವರ್ಣಿಸಲು ಪದಗಳೇ ಸಿಗುವುದಿಲ್ಲ. ಬೆಳಗಿನ 8 ಗಂಟೆಯಾ­ದರೂ ವಾಹನ ಸವಾರರು ದೀಪ ಉರಿ­ಸಿ­ಕೊಂಡು ಮತ್ತು ಹಾರ್ನ್‌ ಬಾರಿಸು­ತ್ತಲೇ ಪ್ರಯಾಣಿಸಿದರೆ, ಪಾದಚಾರಿ­ಗಳು ಮಂಜನ್ನೇ ಸಂಗಾತಿಯಾಗಿಸಿ­ಕೊಂಡು ನಡೆಯುತ್ತ ಸಾಗಬೇಕು. ಶಾಲಾ ಮಕ್ಕಳು ಮಂಜನ್ನು ನೋಡಿ ಸಂಭ್ರಮಿಸಿದರೆ, ಮಕ್ಕಳಿಗೆ ಬೆಚ್ಚನೆಯ ಉಡುಪುಗಳನ್ನು ತೊಡಿಸಿ ಶಾಲಾ ವಾಹನಗಳಲ್ಲಿ ಹತ್ತಿಸುವ ವೇಳೆಗೆ ತಾಯಂದಿರ ಮೊಗದಲ್ಲಿ ಸಂತೋಷ ಅರಳಿರುತ್ತದೆ.

ನಯಾಪೈಸೆ ಖರ್ಚು ಮಾಡದೆ, ಪ್ರತಿಷ್ಠಿತ ಹೋಟೆಲ್‌ಗಳಿಗೆ ಹೋಗದೆ, ಬೆಟ್ಟ–ಗಿರಿಧಾಮಗಳನ್ನು ಹತ್ತದೆ ಉಚಿ­ತ­­ವಾಗಿ ಸಂತಸದ ಕ್ಷಣಗಳನ್ನು ಸವಿಯ­ಬೇಕಿದ್ದರೆ ಮತ್ತು ತಂಪಾದ ವಾತಾವ­ರಣದಲ್ಲಿ ಕಾಲ ಕಳೆಯಬೇಕಿದ್ದರೆ, ಬೆಳಿಗ್ಗೆ 6ರಿಂದ 8ರ ವರೆಗೆ ಬಿಡುವು ಮಾಡಿಕೊಳ್ಳಿ.

ದಟ್ಟ ಮಂಜು ಕಡಿಮೆಯಾಗುವ ಆತಂಕ
ನವೆಂಬರ್‌ನಿಂದ ಜನವರಿಯವರೆಗೆ ಕಾಣಸಿಗುವ ಈ ದಟ್ಟ ಮಂಜಿನ ವಾತಾವರಣ ಮುಂದಿನ ವರ್ಷಗಳಲ್ಲಿ ಕಡಿಮೆಯಾಗುತ್ತ ಬರಬಹುದು ಎಂಬ ಸಣ್ಣ ಆತಂಕ ಜನರಲ್ಲಿ ಕಾಡತೊಡಗಿದೆ. ನಗರ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಕಟ್ಟಡಗಳು, ಪರಿಸರ ಮಾಲಿನ್ಯ, ಹವಾಮಾನ ವೈಪರೀತ್ಯ ಮುಂತಾದವುಗಳಿಂದ ಮಂಜಿನ ಪ್ರಭಾವವು ವರ್ಷಗಳು ಕಳೆದಂತೆ ಕಡಿಮೆಯಾಗಬಹುದು ಎಂಬ ಪುಟ್ಟ ಭೀತಿ ಇಲ್ಲಿನ ನಿವಾಸಿಗಳ ಮನಸ್ಸಿನಲ್ಲಿ ಮೊಳಕೆಯೊಡೆಯತೊಡಗಿದೆ.

ನಗರದ ಹೊರವಲಯದಲ್ಲಿ ಮತ್ತು ಖಾಲಿ ಪ್ರದೇಶದಲ್ಲಿ ಮಂಜಿನ ವಾತಾವರಣ ದಟ್ಟವಾಗಿರುತ್ತದೆ. ಅಲ್ಲಿ ಯಾವುದೇ ಅಡಚಣೆಯಿರುವುದಿಲ್ಲ. ಆದರೆ ಕಟ್ಟಡಗಳ ಸಂಖ್ಯೆ ಹೆಚ್ಚಾದಷ್ಟು ಮಂಜು ಆವರಿಸಿಕೊಳ್ಳಲು ಹೆಚ್ಚಿನ ಸ್ಥಳಾವಕಾಶ ಇರುವುದಿಲ್ಲ. ತೇವಾಂಶ ಕಡಿಮೆಯಾದಷ್ಟು ಮಂಜು ದಟ್ಟವಾಗುವುದು ಕೂಡ ಕಡಿಮೆಯಾಗುತ್ತದೆ. ಜನಸಂಖ್ಯೆ ಮತ್ತು ಕಟ್ಟಡಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಎಲ್ಲವೂ ಬದಲಾಗತೊಡಗುತ್ತದೆ ಎಂದು ಪರಿಸರವಾದಿಗಳು ಹೇಳುತ್ತಾರೆ.

ಇಂತಹ ಬದಲಾವಣೆಯನ್ನು ಈಗಾಗಲೇ ಗುಡ್ಡಬೆಟ್ಟಗಳಲ್ಲಿ ನೋಡುತ್ತಿದ್ದೇವೆ. ಕಲ್ಲು ಗಣಿಗಾರಿಕೆ ಮತ್ತು ಹವಾಮಾನ ವೈಪರೀತ್ಯ ಮುಂತಾದ ಕಾರಣಗಳಿಂದ ಕೆಲ ಭಾಗಗಳಲ್ಲಿ ಮಾತ್ರ ಮಂಜು ದಟ್ಟವಾಗುತ್ತಿದೆ. ಅಂತಹದ್ದೇ ಪರಿಸ್ಥಿತಿ ಚಕ್ಕಬಳ್ಳಾಪುರ ನಗರದಲ್ಲೂ ತಲೆದೋರಬಹುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT