ADVERTISEMENT

ಮತ್ತೆ ಗರಿಗೆದರಿದ ಕೃಷಿ ಜನಪದ

ಎಂ.ರಾಮಕೃಷ್ಣಪ್ಪ
Published 29 ಡಿಸೆಂಬರ್ 2017, 8:55 IST
Last Updated 29 ಡಿಸೆಂಬರ್ 2017, 8:55 IST

ಚಿಂತಾಮಣಿ: ತಾಲ್ಲೂಕಿನಲ್ಲಿ ಹತ್ತು ವರ್ಷಗಳ ನಂತರ ಉತ್ತಮ ಮಳೆಯಾಗಿದೆ. ರೈತರು ಕೊಯ್ಲೋತ್ತರ ಚಟುವಟಿಕೆಗಳಲ್ಲಿ ತೊಡಗಿದ್ದು, ಮೊಗದಲ್ಲಿ ಸಂಭ್ರಮ ಕಾಣುತ್ತಿದೆ. ಇದರ ಜೊತೆಗೆ ಗ್ರಾಮೀಣ ಕೃಷಿ ಸೊಗಡಿನ ಹಾಗೂ ಜನಪದ ಕಲೆಗಳು ಗರಿಗೆದರಿವೆ.

ಸಂಕ್ರಾಂತಿಯ ಸಮಯದಲ್ಲಿ ರೈತರಲ್ಲಿ ಸಂತಸ ಮನೆ ಮಾಡಿರುತ್ತದೆ, ಜತೆಗೆ ಬಿಡುವಿಲ್ಲದೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ರಾಗಿ, ಜೋಳ ಕೊಯ್ಲು ಮಾಡುವುದು, ನಂತರ ಒಣಗಿಸಿ ಸಣ್ಣ ಗುಡ್ಡೆಗಳನ್ನು ಮಾಡಿ ಹೊಲಗಳಲ್ಲಿಯೇ ಕುಪ್ಪೆ ಹಾಕುವುದು.ಉದುರಿರುವ ತೆನೆ ಹಾಯುವುದು, ಅವರೆಕಾಯಿ ಕೀಳುವುದು, ಕಣ ಮಾಡುವುದು, ಹೊಲಗಳಲ್ಲಿನ ಕುಪ್ಪೆಗಳನ್ನು ಕಣಗಳಿಗೆ ಸಾಗಿಸುವುದು ಮೊದಲಾದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಸುಗ್ಗಿಯ ಕಾಲದಲ್ಲಿ ರೈತರ ಗ್ರಾಮೀಣ ಸೊಗಡು, ಜಾನಪದ ಲೋಕ ಚುರುಕುಗೊಳ್ಳುತ್ತದೆ. ಕವಿಗಳು ವಿಶೇಷವಾಗಿ ಸುಗ್ಗಿಯ ಕಾಲದಲ್ಲಿ ರೈತ ಮಹಿಳೆಯರ ಬಾಯಿಂದ ಹೊರಬರುವ ಜನಪದ ಹಾಗು ಸೋಬಾನೆ ಪದಗಳನ್ನು ವಿಶೇಷವಾಗಿ ವರ್ಣಿಸುತ್ತಾರೆ.

ADVERTISEMENT

ಈ ವರ್ಷ ಉತ್ತಮ ಮಳೆಯಾಗಿದೆ. ಮುಂಗಾರಿನ ಆರಂಭದಲ್ಲಿ ಜೂನ್‌, ಜುಲೈನಲ್ಲಿ ಮಳೆ ಕೈಕೊಟ್ಟರೂ ಆಗಸ್ಟ್‌ನಿಂದ ಅಕ್ಟೋಬರ್‌ ವರೆಗೂ ಹದವಾಗಿ ಮಳೆಯಾಯಿತು. ಬಿತ್ತನೆಯಿಂದ ಕೊಯ್ಲಿನವರೆಗೂ ಒಮ್ಮೆಯೂ ಮಳೆಯ ಕೊರತೆ ಕಾಣಲಿಲ್ಲ. 778 ಮಿ.ಮೀ ವಾಡಿಕೆ ಮಳೆಯಾಗಬೇಕಾಗಿತ್ತು, ವಾಸ್ತವವಾಗಿ 913.18 ಮಿ.ಮೀ ಮಳೆ ಆಗುತ್ತಿತ್ತು. ತಾಲ್ಲೂಕಿನಲ್ಲಿ 35918 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿಯನ್ನು ಹೊಂದಿದ್ದು, 34734 ಹೆಕ್ಟೇರ್‌ ಬಿತ್ತನೆಯಾಗಿತ್ತು.

ರಾಗಿ ಕೊಯ್ಲಿನ ನಂತರ ಹರಿ ಮಾಡುವುದು, ಗುಡ್ಡೆ ಮಾಡುವುದು, ನಂತರ ಕುಪ್ಪೆ ಹಾಕುವುದು ರೈತರ ದಿನನಿತ್ಯದ ದಿನಚರಿ. ಕುಪ್ಪೆ ಹಾಕುವುದು ಹಾಗೂ ಕಣಕ್ಕೆ ಸಾಗಿಸಲು ಎತ್ತಿನ ಗಾಡಿಗೆ ತುಂಬುವುದಕ್ಕೆ ಊರಿನಲ್ಲಿ ಕೆಲವರು ವಿಶೇಷ ಪರಿಣಿತರಿರುತ್ತಿದ್ದರು. ಎಲ್ಲರೂ ಕುಪ್ಪೆ ಹಾಕಲು ಮತ್ತು ಗಾಡಿಗಳಿಗೆ ತುಂಬಲು ಸಾಧ್ಯವಾಗುತ್ತಿರಲಿಲ್ಲ. ಸ್ವಲ್ಪ ಹೆಚ್ಚು ಕಡಿಮೆಯಾದರೆ ನೆಲಕ್ಕೆ ಉರುಳುತ್ತಿತ್ತು. ಮಹಿಳೆಯರು ಹೊಲಗಳಲ್ಲಿ ಬಿದ್ದಿರುವ ತೆನೆಗಳನ್ನು ಆರಿಸುತ್ತಿದ್ದರು ಎಂದು ರೈತ ನಾರಾಯಣಪ್ಪ ತಿಳಿಸಿದರು.

ಗ್ರಾಮಗಳಲ್ಲಿ 4–5 ರೈತ ಕುಟುಂಬಗಳು ಸೇರಿಕೊಂಡು ಒಂದೊಂದು ಕಣ ಮಾಡುತ್ತಿದ್ದರು. ನೆಲಕ್ಕೆ ನೀರು ಹಾಯಿಸಿ ಚೆನ್ನಾಗಿ ನೆನಸಿದ ನಂತರ ಗುಂಡು ಹೊಡೆದು ಗಟ್ಟಿ ಮಾಡುತ್ತಿದ್ದರು. ಸಗಣಿ ಹಾಕಿ ಸಾರಿಸುತ್ತಿದ್ದರು. ಹೊಲಗಳಲ್ಲಿನ ರಾಗಿಯ ಹರಿಯನ್ನು ಕಣಗಳಿಗೆ ತಂದು ಕುಪ್ಪೆ ಹಾಕುತ್ತಿದ್ದರು. ಬೇಸಿಗೆ ಪ್ರಾರಂಭವಾದ ಮೇಲೆ, ಸಾಮಾನ್ಯವಾಗಿ ಶಿವರಾತ್ರಿಯ ಆಸುಪಾಸಿನಲ್ಲಿ ಹರಿಯನ್ನು ಕಣಗಳಲ್ಲಿ ಹಾಕಿ 2–3 ಗುಂಡುಗಳನ್ನು ಎತ್ತುಗಳಿಗೆ ಕಟ್ಟಿ ತುಳಿಸುತ್ತಿದ್ದರು. ಆದರೆ ಆಧುನಿಕ ಕಾಲದಲ್ಲಿ ಎತ್ತುಬಂಡಿ, ಕಣ ಮಾಡುವುದು ಮರೆಯಾಗಿವೆ. ಎತ್ತುಬಂಡಿ ಬದಲಾಗಿ ಟ್ರಾಕ್ಟರ್‌ಗಳು, ಕಣಗಳಿಗೆ ಪರ್ಯಾಯವಾಗಿ ರಸ್ತೆಗಳು ಕಣಗಳಾಗಿ ಮಾರ್ಪಟ್ಟಿವೆ. ಬಹುತೇಕರು ತೆನೆಗಳನ್ನು ಕೊಯ್ದು ಯಂತ್ರಗಳ ಮೂಲಕ ರಾಗಿ ಮಾಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.