ADVERTISEMENT

ಮಾವು ಬೆಳೆಗಾರರ ನನಸಾಗದ ಕನಸು

ಮಾಡಿಕೆರೆ ಕ್ರಾಸ್‌ನಲ್ಲಿ ಉದ್ಘಾಟನೆಯಾಗಿ ಎರಡು ವರ್ಷವಾದರೂ ಕಾರ್ಯಾರಂಭ ಮಾಡದ ಮಾವು ಅಭಿವೃದ್ಧಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 22 ಮೇ 2018, 10:55 IST
Last Updated 22 ಮೇ 2018, 10:55 IST
ಮಾಡಿಕೆರೆಯ ಮಾವು ಅಭಿವೃದ್ಧಿ ಕೇಂದ್ರದ ಹೊರನೋಟ
ಮಾಡಿಕೆರೆಯ ಮಾವು ಅಭಿವೃದ್ಧಿ ಕೇಂದ್ರದ ಹೊರನೋಟ   

ಚಿಂತಾಮಣಿ: ನಗರದ ಹೊರವಲಯದ ಮಾಡಿಕೆರೆ ಕ್ರಾಸ್‌ನಲ್ಲಿ ಮಾವು ಬೆಳೆಗಾರರ ಅನುಕೂಲಕ್ಕಾಗಿ ₹ 7 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮಾವು ಅಭಿವೃದ್ಧಿ ಕೇಂದ್ರ ಕೇವಲ ನಾಮಫಲಕಕ್ಕೆ ಮಾತ್ರ ಸೀಮಿತವಾಗಿದೆ.

ಕೇಂದ್ರವು 2016 ನೇ ಆಗಸ್ಟ್‌ 22ರಂದು ಉದ್ಘಾಟನೆಯಾಯಿತು. ಉದ್ಘಾಟನೆಯಾಗಿ 2 ವರ್ಷ ಕಳೆದಿದೆ. ಆದರೆ ಈ ಬಾರಿ ಮಾವಿನ ಹಂಗಾಮು ಪ್ರಾರಂಭವಾಗಿದ್ದರೂ ಪೂರ್ಣ ಪ್ರಮಾಣದಲ್ಲಿ ಕೇಂದ್ರ ಕಾರ್ಯಾರಂಭ ಮಾಡದೆ ನಿರುಪಯುಕ್ತವಾಗಿದೆ.

ಉದ್ಘಾಟನೆ ವೇಳೆ ಸಂಸದ ಕೆ.ಎಚ್‌.ಮುನಿಯಪ್ಪ, ಶಾಸಕ ಎಂ.ಕೃಷ್ಣಾರೆಡ್ಡಿ, ಅಂದಿನ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷೆ ಕಮಲಾಕ್ಷಿ ರಾಜಣ್ಣ ‘ಕೇಂದ್ರ ಶೀಘ್ರ ಕಾರ್ಯಾರಂಭ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದರು. ಇದರಿಂದ ಮಾವು ಬೆಳೆಗಾರರಿಗೆ ಅನುಕೂಲವಾಗುತ್ತದೆ ಎಂದು ರೈತರು ಕನಸು ಕಂಡರು. ಆದರೆ ಅವರ ಕನಸು ನನಸಾಗಲೇ ಇಲ್ಲ.

ADVERTISEMENT

ರಾಜ್ಯದಲ್ಲಿ 1.62 ಲಕ್ಷ ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗುತ್ತಿದೆ. ಅದರಲ್ಲಿ ಶೇ 40 ರಷ್ಟು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಬೆಳೆಯುವರು. ಕೋಲಾರ ಜಿಲ್ಲೆಯಲ್ಲಿ ಶ್ರೀನಿವಾಸಪುರ ತಾಲ್ಲೂಕು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಿಂತಾಮಣಿ ತಾಲ್ಲೂಕು ಪ್ರಥಮ ಸ್ಥಾನದಲ್ಲಿವೆ. ಇವು ಮಾವಿನ ಮಡಿಲುಗಳು ಎನ್ನುವ ಖ್ಯಾತಿ ಪಡೆದಿವೆ.

ಡಾ.ಎಂ.ಸಿ.ಸುಧಾಕರ್‌ ಶಾಸಕರಾಗಿದ್ದಾಗ ‘ರಾಷ್ಟ್ರೀಯ ಕೃಷಿ ವಿಕಾಸ’ ಯೋಜನೆಯಡಿ ₹ 14.33 ಕೋಟಿ ವೆಚ್ಚದಲ್ಲಿ ಮಾವು ಅಭಿವೃದ್ಧಿ ಕೇಂದ್ರ ಸ್ಥಾಪಿಸುವ ಪ್ರಸ್ತಾವ ಸಿದ್ದಪಡಿಸಿ ದಾಖಲೆಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದರು. ಅದಕ್ಕೆ ಮಂಜೂರಾತಿ ಸಹ ದೊರೆಯಿತು.

ಜಿಲ್ಲೆ ವಿಭಜನೆಯಾಗಿದ್ದರಿಂದ ಕೋಲಾರ ಜಿಲ್ಲೆಗೂ ಅಭಿವೃದ್ಧಿ ಕೇಂದ್ರ ಬೇಕು ಎಂದು ಶಾಸಕ ರಮೇಶ್‌ಕುಮಾರ್‌ ಆಗ್ರಹಿಸಿದರು. ಯೋಜನೆ ರೂಪಿಸಿ, ಪ್ರಸ್ತಾವ ಸಲ್ಲಿಸಿದ್ದರು. ಅದಕ್ಕೂ ಮಂಜೂರಾತಿ ಪಡೆದರು. ಆಗ ಮಾವು ಅಭಿವೃದ್ಧಿ ಕೇಂದ್ರವನ್ನು ವಿಭಜಿಸಿ ಶ್ರೀನಿವಾಸಪುರದ ಹೊಗಳ್ಗೆರೆ ಮತ್ತು ಚಿಂತಾಮಣಿಯ ಮಾಡಿಕೆರೆಯಲ್ಲಿ ತಲಾ ₹ 7 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಬೇಕು. ಗಿಡಗಳ ನಾಟಿಯಿಂದ ಹಿಡಿದು ಹಣ್ಣು ಬರುವವರೆಗೂ ಹೊಗಳ್ಗೆರೆಯ ಕೇಂದ್ರದಲ್ಲಿ ಹಾಗೂ ಹಣ್ಣು ಕೊಯ್ಲಿನ ನಂತರ ಮಾರುಕಟ್ಟೆಯವರೆಗೂ ಮಾಡಿಕೆರೆ ಅಭಿವೃದ್ಧಿ ಕೇಂದ್ರದಲ್ಲಿ ಬೆಳೆಗಾರರಿಗೆ ಅಗತ್ಯವಾದ ತರಬೇತಿ ನೀಡಲು ತೀರ್ಮಾನವಾಯಿತು.

ಮಾಡಿಕೆರೆ ಕೇಂದ್ರದಲ್ಲಿ ಮಾವು ಹಣ್ಣಿನ ಕೊಯ್ಲೋತ್ತರದ ನಂತರ ತಂತ್ರಜ್ಞಾನವನ್ನು ಬೆಳೆಗಾರರಿಗೆ ನೀಡುವುದು ಪ್ರಮುಖ ಉದ್ದೇಶವಾಗಿತ್ತು. 2 ಎಕರೆಯಲ್ಲಿ ತರಬೇತಿ ಕೇಂದ್ರ, ಅಧಿಕಾರಿಗಳ ಕೊಠಡಿಗಳು, ಪ್ರಾತ್ಯಕ್ಷಿಕೆ ಕೇಂದ್ರ, ಮಾವಿನ ಬೇರ್ಪಡೆ (ಗ್ರೇಡಿಂಗ್‌) ಮಾಡುವುದು, ಹಣ್ಣನ್ನು ಮಾಗಿಸುವ ಕೇಂದ್ರ, ಬೇರೆ ಬೇರೆ ಜಿಲ್ಲೆಗಳಿಂದ ಬಂದ ರೈತರು ಉಳಿದುಕೊಳ್ಳಲು 50 ಜನರಿಗೆ ವಸತಿ ಸೌಲಭ್ಯ, ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಉಳಿದುಕೊಳ್ಳಲು ವಿಶ್ರಾಂತಿ ಗೃಹ ನಿರ್ಮಾಣವಾಗಿದೆ.

ಹಣವಿಲ್ಲ ಎಂದು ಯೋಜನೆಗಳು ತಡವಾಗುವುದು, ಸ್ಥಗಿತಗೊಳ್ಳುವುದು ಸಾಮಾನ್ಯ. ಆದರೆ ಜಿಲ್ಲಾ ಪಂಚಾಯಿತಿ ಖಾತೆಯಲ್ಲಿ ಹಣವಿದ್ದರೂ ಈ ಯೋಜನೆ ಪೂರ್ಣವಾಗಿಲ್ಲ. ಕೇಂದ್ರದಲ್ಲಿ ಕಟ್ಟಡಗಳು ಪೂರ್ಣವಾಗಿವೆ. ಹಣ್ಣನ್ನು ಬೇರ್ಪಡಿಸುವುದು (ಗ್ರೇಡಿಂಗ್‌), ಸ್ವಚ್ಛಗೊಳಿಸುವುದು, ಮಾಗಿಸುವುದು ಮತ್ತಿತರ ಯಂತ್ರಗಳನ್ನು ಅಳವಡಿಸುವ ಕೆಲಸ ನಡೆಯುತ್ತಿದೆ. ಶೀಘ್ರವೇ ಕೇಂದ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಬೆಳೆಗಾರರು ಮಾತ್ರ ಈ ಬಗ್ಗೆ ಹೆಚ್ಚು ಆಶಾವಾದವನ್ನು ಹೊಂದಿಲ್ಲ.

ರೈತರಿಗೆ ಸಹಾಯಧನ ದೊರೆಯುತ್ತಿತ್ತು

ಮಾವಿನ ಹಣ್ಣಿನ ಕೊಯ್ಲಿನಿಂದ ಹಿಡಿದು ಮಾರುಕಟ್ಟೆಯ ಪ್ರತಿ ಹಂತದ ಬಗ್ಗೆ ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ, ಹಣ್ಣಿನ ರಫ್ತಿಗೆ ಉತ್ತೇಜನ ಹಾಗೂ ಎಲ್ಲ ತೋಟಗಾರಿಕಾ ಬೆಳೆಗಳಿಗೆ ತರಬೇತಿ ನೀಡುವುದು ಕೇಂದ್ರದ ಸ್ಥಾಪನೆ ಗುರಿಯಾಗಿತ್ತು. ಕೇಂದ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದ್ದರೆ ಬೆಳೆಗಾರರಿಗೆ ಹಣ್ಣನ್ನು ಬೇರ್ಪಡಿಸಲು, ಮಾಗಿಸಲು, ಪ್ಯಾಕಿಂಗ್‌ ಮಾಡಲು ಸಹಾಯಧನ ದೊರೆಯುತ್ತಿತ್ತು ಎಂದು ಡಾ.ಎಂ.ಸಿ.ಸುಧಾಕರ್‌ ತಿಳಿಸಿದರು.

ಕೇಂದ್ರದಿಂದ ರೈತರಿಗೆ ಅನುಕೂಲ

ಮಾವು ಕೋಯ್ಲೋತ್ತರ ಅಭಿವೃದ್ಧಿ ಕೇಂದ್ರ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದ್ದರೆ  ಬೆಳೆಗಾರರಿಗೆ ಅನೇಕ ಸೌಲಭ್ಯಗಳು ದೊರೆಯುತ್ತಿದ್ದವು. ಹಣ್ಣಿನ ಗುಣಮಟ್ಟ ಕಾಪಾಡುವುದು, ಪ್ಯಾಕಿಂಗ್‌ ಮತ್ತು ರಫ್ತು  ಬಗ್ಗೆ ಜಾಗೃತಿ ಹಾಗೂ ತರಬೇತಿ ದೊರೆಯುತ್ತಿತ್ತು. ನನೆಗುದಿಗೆ ಬಿದ್ದಿರುವ ಯೋಜನೆಗೆ ಕಾಯಕಲ್ಪ ನೀಡಬೇಕು ಎಂದು ಮಾವು ಬೆಳೆಗಾರ ನಾಗಿರೆಡ್ಡಿ ಆಗ್ರಹಿಸುವರು.

**
ಮಾವಿನ ಹಣ್ಣು ಬೇರ್ಪಡಿಸುವುದು, ಸ್ವಚ್ಛಗೊಳಿಸುವುದು, ಮಾಗಿಸುವುದು ಮತ್ತಿತರ ಯಂತ್ರಗಳನ್ನು ಅಳವಡಿಸುವ ಕೆಲಸ ಸಾಗುತ್ತಿದೆ. ಶೀಘ್ರದಲ್ಲೇ ಕೇಂದ್ರ ಕಾರ್ಯಾರಂಭ ಮಾಡಲಿದೆ 
– ಎಂ.ಗಾಯತ್ರಿ,ಉಪನಿರ್ದೇಶಕರು, ಮಾವು ಅಭಿವೃದ್ಧಿ ಕೇಂದ್ರ.

–ಎಂ.ರಾಮಕೃಷ್ಣಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.