ADVERTISEMENT

ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 5:40 IST
Last Updated 15 ಜುಲೈ 2017, 5:40 IST

ಚಿಕ್ಕಬಳ್ಳಾಪುರ: ‘ಪ್ರತಿಯೊಬ್ಬ ರೈತರು ತಮ್ಮ ರಾಸುಗಳಿಗೆ ಜೀವ ವಿಮೆ ಮಾಡಿಸುವ ಮೂಲಕ ಆಕಸ್ಮಿಕವಾಗಿ ಜರುಗುವ ರಾಸುಗಳ ಜೀವ ಹಾನಿಯಿಂದ ಉಂಟಾಗುವ ಆರ್ಥಿಕ ನಷ್ಟದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು’ ಎಂದು ಕೋಲಾರ–ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ಚಿಕ್ಕಬಳ್ಳಾಪುರ ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಪಾಪೇಗೌಡ ಹೇಳಿದರು.

ತಾಲ್ಲೂಕಿನ ನಾಯನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ರಾಸುಗಳ ವಿಮಾ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಬರಗಾಲದಿಂದ ತತ್ತರಿಸಿರುವ ಜಿಲ್ಲೆಯ ರೈತರಿಗೆ ಹೈನೋದ್ಯಮವೇ ಮುಖ್ಯ ಜೀವನಾಧಾರವಾಗಿದೆ. ರಾಸುಗಳು ಕೆಲವೊಮ್ಮೆ ವಿವಿಧ ಸೋಂಕು, ಕಾಯಿಲೆಗೆ ತುತ್ತಾಗಿ ಅಸುನೀಗಿದರೆ ಸಂಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಆದ್ದರಿಂದ ಒಕ್ಕೂಟ ರಾಸುಗಳಿಗೆ ವಿಮೆ ಮಾಡಿಸಲು ಆದ್ಯತೆ ನೀಡಿದೆ’ ಎಂದು ತಿಳಿಸಿದರು.

ADVERTISEMENT

‘₹ 60 ಸಾವಿರದವರೆಗೆ ಮೌಲ್ಯ ಹೊಂದಿರುವ ಹಸುವಿಗೆ ವಿಮೆ ಮಾಡಿಸಲು ವಾರ್ಷಿಕ ₹ 948 ವಿಮಾ ಮೊತ್ತ ಪಾವತಿಸಬೇಕಾಗುತ್ತದೆ. ಇದರಲ್ಲಿ ಶೇ 50ರಷ್ಟನ್ನು ಒಕ್ಕೂಟ ಭರಿಸಲಿದೆ. ಉಳಿದ ₹ 474 ರೈತರು ಕಟ್ಟಿದರೆ ಸಾಕು ಒಂದು ವರ್ಷದ ವರೆಗೆ ನೆಮ್ಮದಿಯಿಂದ ಇರಬಹುದು. ಒಂದೊಮ್ಮೆ ಹಸು ಮೃತಪಟ್ಟರೆ ಅದರ ಮೌಲ್ಯವನ್ನು ವಿಮಾ ಕಂಪೆನಿ ಭರಿಸುತ್ತದೆ. ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ  ₹ 5 ಕೋಟಿಗೂ ಅಧಿಕ ವಿಮಾ ಪರಿಹಾರ ವಿತರಿಸಲಾಗಿದೆ’ ಎಂದರು.

ಯನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ‘ಬರಗಾಲದ ನಡುವೆಯೂ ಹೈನುಗಾರಿಕೆ ನಂಬಿ ಜೀವನ ಸಾಗಿಸುತ್ತಿರುವ ರೈತರು ತಮ್ಮ ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಇಲ್ಲದಿದ್ದರೆ ಕಾಲು ಬಾಯಿ ಜ್ವರ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಹಸು ಬಲಿಯಾದರೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ’ ಎಂದು ಹೇಳಿದರು.

ಸಂಘದ ನಿರ್ದೇಶಕರಾದ ಎನ್‌.ಡಿ.ವೆಂಕಟೇಶ್‌, ಮುನಿನಾರಾಯಣ, ಬಿ.ಆರ್.ನಟೇಶ್, ಸುನಂದಮ್ಮ, ಆರ್.ವೆಂಕಟೇಶ್, ಕಾರ್ಯದರ್ಶಿ ಸಿ.ವಿ.ಮೋಹನ್, ಮುಖಂಡರಾದ ಎನ್‌.ಸಿ.ನಾರಾಯಣಸ್ವಾಮಿ, ಯಶೋಧ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.