ADVERTISEMENT

ರೋಗ ರುಜಿನ ಭೀತಿ, ಇಲ್ಲಿ ಕಾಯಂ ಅತಿಥಿ!

ಈರಪ್ಪ ಹಳಕಟ್ಟಿ
Published 15 ಮೇ 2017, 5:04 IST
Last Updated 15 ಮೇ 2017, 5:04 IST
ಚಿಕ್ಕಬಳ್ಳಾಪುರದ 6ನೇ ವಾರ್ಡ್‌ನಲ್ಲಿ ತಮ್ಮ ಮನೆಯ ಬಳಿಯ ಚರಂಡಿ ಸ್ವಚ್ಛಗೊಳಿಸುತ್ತಿರುವ ನಿವೃತ್ತ ಶಿಕ್ಷಕಿ ವಿ.ಜಯಕಾಂತಮ್ಮ
ಚಿಕ್ಕಬಳ್ಳಾಪುರದ 6ನೇ ವಾರ್ಡ್‌ನಲ್ಲಿ ತಮ್ಮ ಮನೆಯ ಬಳಿಯ ಚರಂಡಿ ಸ್ವಚ್ಛಗೊಳಿಸುತ್ತಿರುವ ನಿವೃತ್ತ ಶಿಕ್ಷಕಿ ವಿ.ಜಯಕಾಂತಮ್ಮ   

ಚಿಕ್ಕಬಳ್ಳಾಪುರ: ಮಳೆಗಾಲ ರಚ್ಚೆ ಹಿಡಿದು ಸುರಿಯುವ ಮೊದಲೇ ನಗರದ 8ನೇ ವಾರ್ಡ್‌ ಬಹುಪಾಲು ಪ್ರದೇಶದಲ್ಲಿ ಚರಂಡಿಗಳು ರೊಚ್ಚು ನೀರಿನಿಂದ ಮಡುಗಟ್ಟಿ ನಿಂತಿವೆ. ದುರ್ಗಂಧ ಸೂಸುವ ಕೊಳಚೆ ನೀರು, ಹಿಂಡುಗಟ್ಟಿ ಸುಳಿದಾಡುವ ಸೊಳ್ಳೆಗಳ ಸಮೂಹ, ಕದವನ್ನೇ ತೆರೆಯದೆ ಮುಚ್ಚಿದ ಕಿಟಕಿಗಳು ಈ ವಾರ್ಡ್‌ನಲ್ಲಿ ಸಾಮಾನ್ಯ ದೃಶ್ಯಗಳಾಗಿ ಬಿಟ್ಟಿವೆ.

ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದಾಗಿ ಕಳೆದ ಅನೇಕ ವರ್ಷಗಳಿಂದ ಸಮಸ್ಯೆಯನ್ನು ಎದುರಿಸಿಕೊಂಡು ಬರುತ್ತಿರುವ 8 ಮತ್ತು 6ನೇ ವಾರ್ಡ್‌ಗಳ ನಾಗರಿಕರಿಗೆ ಈವರೆಗೆ ನೆಮ್ಮದಿ ದೊರೆತಿಲ್ಲ. ಸದಾ ಹೂಳು, ಕೊಚ್ಚೆ ನೀರಿನಿಂದಲೇ ತುಂಬಿ ನಿಂತಿರುವ ಚರಂಡಿಗಳು ಸ್ವಲ್ಪ ಮಳೆ ಸುರಿದರೂ ಸ್ಥಳೀಯರನ್ನು ಗೋಳಾಡುವಂತೆ ಮಾಡುತ್ತದೆ. ಜೋರಾಗಿ ಮಳೆ ಸುರಿದರಂತೂ ಕೆಲವೆಡೆ ಬಣ್ಣಿಸಲಾಗದಷ್ಟು ಪರಿಸ್ಥಿತಿ ಕೆಟ್ಟು ಹೋಗುತ್ತದೆ. ರೋಗ ರುಜಿನಗಳ ಭೀತಿ ಇಲ್ಲಿ ಕಾಯಂ ಅತಿಥಿ!

8ನೇ ವಾರ್ಡ್‌ನಲ್ಲಿ ಹೊಸ ಜಿಲ್ಲಾಸ್ಪತ್ರೆ ಸುತ್ತಲಿನ ಪ್ರದೇಶ, 6ನೇ ವಾರ್ಡ್‌ನಲ್ಲಿ ಬೋವಿ ಕಾಲೊನಿ ಚಿತ್ರಣ ಹದಗೆಟ್ಟ ಚರಂಡಿ ವ್ಯವಸ್ಥೆಯಿಂದಾಗಿ ಅಧ್ವಾನಗೊಂಡು ಹೋಗಿವೆ. ಪ್ರತಿ ಮಳೆಗಾಲದಲ್ಲಿ ಈ ಭಾಗದಲ್ಲಿ ಅನುಭವಿಸಬೇಕಾದ ನರಕ ಸದೃಶ್ಯ ಭಯಾನಕ ಅನುಭವಕ್ಕೆ ಬೆಚ್ಚಿ ಅನೇಕರು ತಮ್ಮ ವಾಸವನ್ನು ಬೇರೆಡೆ ಸ್ಥಳಾಂತರಿಸಿದ ಉದಾಹರಣೆಗಳಿವೆ.

ADVERTISEMENT

‘ಅವೈಜ್ಞಾನಿಕ ಚರಂಡಿಗಳಿಂದ ನಗರದ ಅನೇಕ ಪ್ರದೇಶಗಳ ನಾಗರಿಕರ ಬದುಕು ನೆಮ್ಮದಿ ಇಲ್ಲದಂತಾಗಿದೆ. ಪ್ರತಿ ಬಾರಿ ಮಳೆಗಾಲ ಬಂದಾಗಲೂ ಜನ ದೂರು ಹೇಳಿಕೊಳ್ಳುತ್ತಾರೆ. ಆಗಷ್ಟೇ ಆರಂಭ ಶೂರತ್ವ ತೋರಿ ತಾತ್ಕಾಲಿಕ ಕ್ರಮಕ್ಕೆ ಮುಂದಾಗುವ ನಗರಸಭೆ ಅಧಿಕಾರಿಗಳು ಈವರೆಗೆ ಚರಂಡಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ’ ಎಂದು 8ನೇ ವಾರ್ಡ್‌ನ ಜಿ.ಎಸ್. ಆಸ್ಪತ್ರೆ ರಸ್ತೆ ನಿವಾಸಿ, ಉಪನ್ಯಾಸಕ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು.

‘ನಗರದಲ್ಲಿ ವ್ಯವಸ್ಥಿತವಾಗಿ, ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಕೆಲಸ ನಡೆಯುತ್ತಿಲ್ಲ. ಅನೇಕ ಕಡೆಗಳಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸುತ್ತಿಲ್ಲ. ಸಾರ್ವಜನಿಕ ಪ್ರದೇಶಗಳಲ್ಲಿ ಕಸ ಸುರಿಯಲು ತೊಟ್ಟಿಗಳನ್ನು ಸಹ ಇಟ್ಟಿಲ್ಲ. ಹೀಗಾಗಿ ನಾಗರಿಕರು ಚರಂಡಿ ಸೇರಿದಂತೆ ಎಲ್ಲೆಂದರಲ್ಲಿ ಕಸ ಎಸೆಯುತ್ತಾರೆ. ಇದು ಕೂಡ ಚರಂಡಿ ಕಟ್ಟಿಕೊಂಡು ಸಮಸ್ಯೆ ಸೃಷ್ಟಿಯಾಗಲು ಕಾರಣವಾಗುತ್ತಿದೆ’ ಎಂದು ತಿಳಿಸಿದರು.

‘ಚರಂಡಿಗಳು ನೀರನ್ನು ಸರಾಗವಾಗಿ ಹರಿಯುವಂತಿರಬೇಕು. ಆದರೆ 8 ಮತ್ತು 6ನೇ ವಾರ್ಡ್‌ಗಳಲ್ಲಿ ಕೂಡ ಆ ರೀತಿ ವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿಲ್ಲ. ಈ ಸಮಸ್ಯೆಯನ್ನು ನಗರಸಭೆಯ ಎಂಜಿನಿಯರಿಂಗ್ ವಿಭಾಗದವರು ಗಂಭೀರವಾಗಿ ತೆಗೆದುಕೊಂಡು ಶಾಶ್ವತ ಪರಿಹಾರ ಕಂಡು ಹಿಡಿಯುವ ಅಗತ್ಯವಿದೆ’ ಎಂದರು.
ಮನೆಯನ್ನೇ ಬಿಟ್ಟರು!

‘ನೂತನ ಜಿಲ್ಲಾ ಆಸ್ಪತ್ರೆ ಮುಂಭಾಗದ ರಸ್ತೆ ಎಡಭಾಗ ಪ್ರದೇಶದಲ್ಲಿ ಚರಂಡಿ ಅವ್ಯವಸ್ಥೆಗೆ ಬೇಸತ್ತು ನಾಲ್ಕೈದು ಕುಟುಂಬದವರು ಮನೆ ಖಾಲಿ ಮಾಡಿಕೊಂಡು ಹೋದರು. ನನಗೋ ವಯಸ್ಸಾಯ್ತು, ಕಷ್ಟಪಟ್ಟು ಕಟ್ಟಿದ ಮನೆ ಬಿಟ್ಟು ಹೋಗುವುದು ಹೇಗೆ ಅಂತಾ ವಿಧಿ ಇಲ್ಲದೆ ಇಲ್ಲಿಯೇ ಬದುಕಿದ್ದೇವೆ’ ಎಂದು ಸ್ಥಳೀಯ ನಿವಾಸಿ ಶ್ರೀನಿವಾಸ್‌ ಹೇಳಿದರು.

‘ಎಷ್ಟೊಂದು ಅಧಿಕಾರಿಗಳು ನೂರಾರು ಸಾರಿ ಬಂದು ನೋಡಿ ಹೋದರೂ ಸಮಸ್ಯೆ ಬಗೆಹರಿದಿಲ್ಲ. ಬೆಳಿಗ್ಗೆ ಎದ್ದು ಬಾಗಿಲ ತೆಗೆಯಲು ಭಯ. ಸೊಳ್ಳೆ ಕಾಟಕ್ಕೆ ಕಿಟಕಿ ಬಾಗಿಲು ಮುಚ್ಚಿ ಬಿಟ್ಟಿದ್ದೇವೆ. ಡಿ.ಸಿ, ಎ.ಸಿ, ಯಾರೂ ಬಂದ್ರೂ ನಮ್ಮ ಪಾಡಂತೂ ತಪ್ಪಿಲ್ಲ. ನಗರ ಸಭೆ ಅಧಿಕಾರಿಗಳಂತೂ ತೀರಾ ನಿರ್ಲಕ್ಷ್ಯದಿಂದ ವರ್ತಿಸುತ್ತಾರೆ’ ಎಂದು ನೂತನ ಜಿಲ್ಲಾ ಆಸ್ಪತ್ರೆ ಮುಂಭಾಗದ ರಸ್ತೆ ನಿವಾಸಿ ಪದ್ಮಮ್ಮ ದೂರಿದರು.

‘ಮೋರಿಗಳು ಪಾಚಿ ಕಟ್ಟುತ್ತಿವೆ. ಮಳೆ ಸುರಿದರೆ ಹುಳುಗಳು ರಸ್ತೆಗೆ ಹರಿದು ಬರುತ್ತವೆ. ನಾವು ವಿಧಿ ಇಲ್ಲದೇ ಅದನ್ನೇ ದಾಟಿಕೊಂಡು ಓಡಾಡುತ್ತೇವೆ. ಚರಂಡಿ ಸ್ವಚ್ಛಗೊಳಿಸಲು ಹೇಳಿ ಸಾಕಾಯ್ತು. ಚರಂಡಿಯಲ್ಲಿರುವ ಮಣ್ಣು ಎತ್ತಿಸಿದರೆ ಸಾಕು, ನಮ್ಮ ಅರ್ಧ ಸಮಸ್ಯೆ ಬಗೆಹರಿಯುತ್ತದೆ. ಈ ಹಿಂದೆ ಜಿಲ್ಲಾಧಿಕಾರಿಗಳು ಬಂದು ನೋಡಿಕೊಂಡು ಹೋದರೂ ನಮ್ಮ ಪರಿಸ್ಥಿತಿ ಮಾತ್ರ ಬದಲಾಗಿಲ್ಲ’ ಎಂದು 8ನೇ ನಿವಾಸಿ ಮಂಜುನಾಥ್ ತಿಳಿಸಿದರು.

**

ನಗರವನ್ನು ಸ್ವಚ್ಛವಾಗಿಡುವ ಪೌರ ಕಾರ್ಮಿಕರು ವಾಸಿಸುವ ಕಾಲೋನಿಯಲ್ಲಿಯೇ ಚರಂಡಿಗಳು ಮಡುಗಟ್ಟಿ ನಿಂತಿವೆ. ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ
-ವಿ.ಜಯಕಾಂತಮ್ಮ, 6ನೇ ವಾರ್ಡ್‌ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.