ADVERTISEMENT

ವರ್ಷವಾದರೂ ಸಿಗದ ಬೆಳೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 10:58 IST
Last Updated 19 ಜುಲೈ 2017, 10:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಂತಾಮಣಿ: ಬರಗಾಲದಿಂದ ಬೆಳೆ ಹಾಳಾಗಿದ್ದು, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆಗಾಗಿ ಕಳೆದ ವರ್ಷ ನೋಂದಣಿ ಮಾಡಿಸಿದ್ದ ತಾಲ್ಲೂಕಿನ ಬಹುತೇಕ ರೈತರಿಗೆ ಇದುವರೆಗೂ ಪರಿಹಾರದ ಹಣ ತಲುಪಿಲ್ಲ.

ಸತತ ಎರಡು ವರ್ಷಗಳಿಂದ ಬರಗಾಲದಿಂದ ರೈತರು ಕಂಗೆಟ್ಟಿದ್ದಾರೆ. ಪ್ರಸಕ್ತ ಸಾಲಿನ ಬಿತ್ತನೆಗೆ ಅಲ್ಪ–ಸ್ವಲ್ಪ ಹಣ ಸಿಗಬಹುದು ಎಂಬ ನಂಬಿಕೆಯೂ ಹುಸಿಯಾಗಿತ್ತು. ಈ ಬಾರಿ ಮುಂಗಾರು ಬಿತ್ತನೆ ಮುಗಿಯುತ್ತಾ ಬಂದರೂ ಸಂತ್ರಸ್ತ ರೈತರಿಗೆ ಹಿಂದಿನ ವರ್ಷದ ಬೆಳೆ ವಿಮಾ ಪರಿಹಾರ ಪಾವತಿಯಾಗಿಲ್ಲ. ತಾಲ್ಲೂಕಿನಲ್ಲಿ ಯಾವುದೇ ಸಭೆ ನಡೆದರೂ ವಿಮಾ ಪರಿಹಾರಕ್ಕಾಗಿ ರೈತರು ಮನವಿ ಸಲ್ಲಿಸುವುದು ಸಾಮಾನ್ಯವಾಗಿದೆ.

ಕೃಷಿ ಇಲಾಖೆಯ ಅಂಕಿ–ಅಂಶಗಳ ಪ್ರಕಾರ ತಾಲ್ಲೂಕಿನಲ್ಲಿ ಕಳೆದ ವರ್ಷ 885 ರೈತರು ಬೆಳೆ ವಿಮೆ ಮಾಡಿಸಿದ್ದರು. ಅವರಲ್ಲಿ 223 ಜನರಿಗಷ್ಟೇ ಪರಿಹಾರ ಸಿಕ್ಕಿದೆ. ರೈತರಿಂದ ₹ 26.26 ಲಕ್ಷ ವಿಮೆ ಕಂತು ಕಟ್ಟಿಸಿಕೊಂಡಿದ್ದು, ₹ 22.39 ಲಕ್ಷ ಸಂತ್ರಸ್ತರ ಖಾತೆಗೆ ಜಮಾ ಆಗಿದೆ ಎಂದು ರೈತರು ಆರೋಪಿಸುವರು.

ADVERTISEMENT

ತಾಲ್ಲೂಕಿನಲ್ಲಿ ಬೆಳೆ ವಿಮೆ ಯೋಜನೆ ಅನುಷ್ಠಾನದ ಹೊಣೆಯನ್ನು ಬೆಂಗಳೂರು ಯೂನಿವರ್ಸಲ್‌ ಸೊಂಪೊ ಜನರಲ್‌ ಇನ್ಸೂರನ್ಸ್‌ ಕಂಪೆನಿಗೆ ಒಪ್ಪಿಸಲಾಗಿದೆ. ವಿವಿಧ ಬೆಳೆಗಳಿಗೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ಬ್ಯಾಂಕುಗಳಲ್ಲಿ ವಿಮಾ ಘೋಷಣೆ ಹಾಗೂ ವಿಮಾ ಕಂತಿನ ಹಣವನ್ನು ಪಾವತಿಸುವಂತೆ ಸೂಚಿಸಲಾಗಿತ್ತು. ಭತ್ತ (ನೀರಾವರಿ), ಮುಸುಕಿನ ಜೋಳ (ಮಳೆ ಆಶ್ರಿತ), ರಾಗಿ (ನೀರಾವರಿ), ತೊಗರಿ (ಮಳೆ ಆಶ್ರಿತ), ಹುರಳಿ (ಮಳೆ ಆಶ್ರಿತ), ನೆಲಗಡಲೆ (ಮಳೆ ಆಶ್ರಿತ), ಅವರೆ (ಮಳೆ ಆಶ್ರಿತ), ಟೊಮೆಟೊ (ನೀರಾವರಿ) ಬೆಳೆಗಳಿಗೆ ವಿಮಾ ಸೌಲಭ್ಯ ಒದಗಿಸಿದೆ.

ವಿಮಾ ಕಂಪೆನಿಯಿಂದ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ. ನೋಂದಾಯಿಸಿದ್ದ ಎಲ್ಲ ರೈತರಿಗೂ ಪರಿಹಾರ ಬಿಡುಗಡೆ ಆಗದಿರುವ ಬಗ್ಗೆ ಕೃಷಿ ಇಲಾಖೆಯಲ್ಲಿ ಯಾವುದೇ ಮಾಹಿತಿ ಇಲ್ಲ. ರೈತರು ಆ ವರ್ಷ ಪಡೆದ ಇಳುವರಿ ಮತ್ತು ಹಿಂದಿನ 6–7 ವರ್ಷಗಳಲ್ಲಿ ಪಡೆದಿರುವ ಇಳುವರಿಯನ್ನು ಆಧಾರವಾಗಿ ಇಟ್ಟುಕೊಂಡು ಪರಿಹಾರದ ಮೊತ್ತ ನಿರ್ಧರಿಸಲಾಗುತ್ತದೆ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ನಾರಾಯಣಸ್ವಾಮಿ.

ಸರ್ಕಾರವೇ ತಾಲ್ಲೂಕನ್ನು ಸಂಪೂರ್ಣ ಬರಗಾಲಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ವಿಮಾ ಕಂಪೆನಿಗೆ ಪರಿಹಾರ ನೀಡಲು ಇರುವ ತೊಂದರೆಯಾದರೂ ಏನು? ಎಂಬುದು ರೈತ ಪ್ರಶಾಂತ ಪ್ರಶ್ನೆ.

ಪ್ರಚಾರದ ಕೊರತೆ
ರಾಷ್ಟ್ರೀಯ ಕೃಷಿ ವಿಮಾ ಯೋಜನೆಗೆ (ಎನ್‌ಎಐಎಸ್‌) ಬದಲಾಗಿ ಕೇಂದ್ರ ಸರ್ಕಾರ 2016 ರಲ್ಲಿ ಹೊಸದಾಗಿ ಫಸಲ್‌ ಬಿಮಾ  ಯೋಜನೆಯನ್ನು ಜಾರಿಗೊಳಿಸಿತ್ತು. ಕಳೆದ ವರ್ಷ ಹೆಚ್ಚಿನ ಪ್ರಚಾರ ಲಭಿಸಿರಲಿಲ್ಲ. ಇದರಿಂದ ನೋಂದಣಿ ಕೂಡಾ ಕಡಿಮೆಯಾಗಿತ್ತು.

ಈ ಬಾರಿ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ. ಕರಪತ್ರ ಹಂಚುವುದು, ಅಭಿಯಾನ ಮತ್ತು ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ನಾರಾಯಣಸ್ವಾಮಿ ತಿಳಿಸಿದರು.

ಬೆಳೆ ವಿಮೆ ವಿವರ
885 ವಿಮೆಗಾಗಿ ನೋಂದಾಯಿಸಿದ್ದ ರೈತರ ಸಂಖ್ಯೆ

₹5.71 ರೈತರಿಂದ ಕಟ್ಟಿಸಿಕೊಂಡ ವಿಮೆ ಕಂತಿನ ಒಟ್ಟು ಮೊತ್ತ

223 ವಿಮೆ ಪರಿಹಾರ ಪಡೆದ ರೈತರ ಸಂಖ್ಯೆ

₹26.26 ರೈತರಿಗೆ ಪಾವತಿಯಾದ ಪರಿಹಾರದ ಮೊತ್ತ

* * 

ಇಳುವರಿ ಕುರಿತು ಮಾಹಿತಿ ಸಂಗ್ರಹ ಮತ್ತು ಅಂಕಿ–ಅಂಶಗಳಲ್ಲಿ ವ್ಯತ್ಯಾಸವಾದ ಕಾರಣ ತಡವಾಗಿರಬಹುದು. ಬಾಕಿ ಇರುವ ರೈತರಿಗೆ ಪರಿಹಾರ ಪಾವತಿ ಆಗಲಿದೆ
ನಾರಾಯಣಸ್ವಾಮಿ
ಸಹಾಯಕ ಕೃಷಿ ನಿರ್ದೇಶಕ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.