ADVERTISEMENT

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಮೇ 2017, 5:32 IST
Last Updated 18 ಮೇ 2017, 5:32 IST

ಚಿಕ್ಕಬಳ್ಳಾಪುರ: ರೈತರು ಮತ್ತು ಕೃಷಿ ಕೂಲಿಕಾರರ ಸಾಲ ಮನ್ನಾ ಮಾಡುವ ಜತೆಗೆ ಅವರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್ಎಸ್) ಪದಾಧಿಕಾರಿಗಳು ಬುಧವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್. ಮುನಿಕೃಷ್ಣಪ್ಪ, ‘ರೈತದ ದೇಶದ ಬೆನ್ನೆಲುಬು ಎಂದು ಬಿಂಬಿಸುವ ಸರ್ಕಾರಗಳು ಅನ್ನದಾತನ ಜೀವನ ಉತ್ತಮ ಪಡಿಸುವ ಯೋಜನೆ ರೂಪಿಸುತ್ತಿಲ್ಲ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಸಿಗದೆ ರೈತರು ಕಂಗಾಲಾಗಿ, ಸಾಲದ ಸುಳಿಗೆ ಸಿಲುಕುತ್ತಿದ್ದಾರೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಕುಡಿಯುವ ನೀರಿಗೆ ತೀವ್ರ ತಾತ್ವಾರ ಬಂದೊದಗಿದೆ. ಅಂತರ್ಜಲ ಕುಸಿತದಿಂದ ಕೊಳವೆಬಾವಿಗಳಲ್ಲಿ ನೀರು ಪಾತಾಳಕ್ಕೆ ಇಳಿಯುತ್ತಿರುವುದು ರೈತರನ್ನು ಮತ್ತಷ್ಟು ಕಂಗೇಡಿಸಿದೆ. ಈವರೆಗೆ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಯ ನೀರು ತರುವ ಕೆಲಸ ನಡೆದಿಲ್ಲ. ರೈತರಿಗೆ ಬ್ಯಾಂಕ್ ಸಾಲ ಸಿಗುತ್ತಿಲ್ಲ. ಮುಖ್ಯವಾಗಿ ಉತ್ತಮ ಮಾರುಕಟ್ಟೆ ವ್ಯವಸ್ಥೆ ಇಲ್ಲ’ ಎಂದು ದೂರಿದರು.

ADVERTISEMENT

‘ಶ್ರೀಮಂತ ಉದ್ಯಮಿಗಳ ಲಕ್ಷ ಕೋಟಿಗಟ್ಟಲೇ ಸಾಲ ಮನ್ನಾ ಮಾಡುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದರೂ ರೈತರ ಸಾಲ ಮನ್ನಾ ಮಾಡುತ್ತಿಲ್ಲ. ಸಾಲ ಮನ್ನಾ ಮಾಡಿದರೆ ದೇಶದಲ್ಲಿ ಆರ್ಥಿಕ ಸಮಸ್ಯೆ ಉಂಟಾಗುತ್ತದೆ ಎಂದು ಹೇಳುತ್ತ ಈ ಸರ್ಕಾರಗಳು ರೈತ ವಿರೋಧಿ ಧೋರಣೆ ತಳೆದಿವೆ’ ಎಂದು ಆರೋಪಿಸಿದರು.

‘ಭೂಹೀನ ರೈತರು ಉಳುಮೆ ಮಾಡುತ್ತಿರುವ ಭೂಮಿಗೆ ಸಾಗುವಳಿ ಪತ್ರ ನೀಡದೆ, ರೈತರನ್ನು ಭೂಗಳ್ಳರು ಎಂದು ಪರಿಗಣಿಸಿ ವಿಶೇಷ ಕೋರ್ಟ್‌ ವ್ಯಾಪ್ತಿಗೆ ತಂದು ಅವರನ್ನು ಜೈಲಿಗೆ ಹಾಕುವ ತಂತ್ರ ನಡೆದಿದೆ. ಅಮಾಯಕ ರೈತರನ್ನು ಹಿಂಸೆಗೆ ಗುರಿಪಡಿಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ಸಾಗುವಳಿ ಚೀಟಿ ಪಡೆದು ಹತ್ತಾರು ವರ್ಷಗಳಿಂದ ಉಳುಮೆ ಮಾಡಿಕೊಳ್ಳುತ್ತಿರುವ ರೈತರ ಹೆಸರಿನಲ್ಲಿ ಖಾತೆ ಮಾಡಿಕೊಡುತ್ತಿಲ್ಲ. ಅಂತಹ ಜಮೀನುಗಳಿಗೆ ತಕ್ಷಣವೇ ದುರಸ್ತಿ ಮಾಡಿಕೊಡಲು ಕ್ರಮಕೈಗೊಳ್ಳಬೇಕು. ಜತೆಗೆ ರೈತರು ಮತ್ತು ಕೃಷಿ ಕೂಲಿಕಾರರ ಮಕ್ಕಳ ಶಾಲಾ, ಕಾಲೇಜಿನ ಶುಲ್ಕವನ್ನು ಸರ್ಕಾರವೇ ಭರಿಸಬೇಕು’ ಎಂದು ಆಗ್ರಹಿಸಿದರು.

‘ಸಾಲದ ಶೂಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ನೀಡಬೇಕು. ಮೃತನ ಪತ್ನಿಗೆ ಮಾಸಿಕ ₹ 5,000 ಪಿಂಚಣಿ ನೀಡಬೇಕು. ಮಕ್ಕಳಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಅರಣ್ಯ ಭೂಮಿ, ಗೋಮಾಳ, ಗುಂಡುತೋಪು, ನೆಡತೋಪು ಈ ರೀತಿಯ ಸರ್ಕಾರಿ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಿರುವ ಬಡ ರೈತರ ವಿರುದ್ಧ ಭೂಗಳ್ಳರು ಎಂದು ಪ್ರಕರಣ ದಾಖಲಿಸುವುದನ್ನು ಕೈ ಬಿಡಬೇಕು’ ಎಂದು ತಿಳಿಸಿದರು.

‘ಶೇ 50ರ ಸಹಾಯ ಧನದಲ್ಲಿ ಪಶು ಆಹಾರ ಒದಗಿಸಬೇಕು. ಪ್ರತಿ ಗ್ರಾಮದಲ್ಲಿ ಮೇವಿನ ಬ್ಯಾಂಕ್ ತೆರೆಯಬೇಕು. ಬೆಳೆಗಳಿಗೆ ವೈಜ್ಞಾನಿಕವಾದ ಬೆಂಬಲ ಬೆಲೆ ನಿಗದಿಪಡಿಸಬೇಕು. ದ್ರಾಕ್ಷಿ ಮತ್ತು ಟೊಮ್ಯಾಟೊ ಬೆಳೆದು ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ನಾರಾಯಣಸ್ವಾಮಿ, ವೆಂಕಟರಾಯಪ್ಪ, ಚಂದ್ರಪ್ಪ, ವೆಂಕಟೇಶಮ್ಮ, ವಿ.ಎನ್. ಮುನಿಯಪ್ಪ, ನಾಗೇಶ್, ಮುನಿ ರಾಮಯ್ಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

**

ರೈತರ ಸಾಲ ಮನ್ನಾ ಮಾಡಬೇಕಿರುವ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ಕೇಂದ್ರ ಸರ್ಕಾರದ ಮೇಲೆ ಹಾಕಿ ತಪ್ಪಿಸಿಕೊಳ್ಳುವ ಕೆಲಸ ಮಾಡುತ್ತಿದೆ
-ಬಿ.ಎನ್. ಮುನಿಕೃಷ್ಣಪ್ಪ,
ಕೆಪಿಆರ್‌ಎಸ್‌ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.